ಬೆಂಗಳೂರು: ಚೀನಾದಲ್ಲಿ ವಿದೇಶಿ ಅಪರಾಧಿಗಳ ವಿಚಾರಣೆ ಮುಗಿಯುವವರೆಗೂ ದೇಶದ ಗಡಿ ದಾಟುವಂತಿಲ್ಲ ಎಂಬ ಷರತ್ತಿದೆ. ಹೀಗಿದ್ದಾಗ ಭಾರತದಲ್ಲಿ ಆರೋಪಿಯಾಗಿರುವ ಚೀನಾ ಪ್ರಜೆಯನ್ನು ವಿದೇಶಕ್ಕೆ ತೆರಳಲು ಅನುಮತಿ ನೀಡಲಾಗುವುದಿಲ್ಲ ಎಂದು ಹೈಕೋರ್ಟ್ ಸೋಮವಾರ ಹೇಳಿದೆ. ಈ ಮೂಲಕ ಪವರ್ ಬ್ಯಾಂಕ್ ಹಗರಣ ಆರೋಪಿಯಾಗಿರುವ ಚೀನಾದ ಪ್ರಜೆಯೊಬ್ಬರು ಸ್ವದೇಶಕ್ಕೆ ತೆರಳಲು ಅನುಮತಿ ಕೋರಿದ್ದ ಅರ್ಜಿಯನ್ನು ರದ್ದುಪಡಿಸಿತು.
ತನ್ನ ವಯಸ್ಸಾದ ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಆರೋಗ್ಯ ವಿಚಾರಣೆಗಾಗಿ ಚೀನಾಗೆ ತೆರಳಲು ಅನುಮತಿ ನೀಡಿ ಎಂದು ಹಗರಣದ ಆರೋಪಿ, ಚೀನಾ ಪ್ರಜೆ ಎಚ್.ಯು.ಕ್ಸಿಯೋಲಿನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಚೀನಾದಲ್ಲಿ ಕ್ರಿಮಿನಲ್ ಕೋಡ್ ಪ್ರಕಾರ, ಯಾವುದೇ ಪ್ರಕರಣದಲ್ಲಿ ಆರೋಪಿಯಾಗಿರುವ ವಿದೇಶಿ ಪ್ರಜೆ ವಿಚಾರಣೆ ಪೂರ್ಣಗೊಳ್ಳುವವರೆಗೂ ದೇಶದಿಂದ ಹೊರಹೋಗುವುದಕ್ಕೆ ಅವಕಾಶವಿಲ್ಲ. ಹೀಗಿರುವಾಗ ಚೀನಾದ ಪ್ರಜೆಗೆ ವಿದೇಶ ಪ್ರವಾಸಕ್ಕಾಗಿ ಭಾರತದ ಕಾನೂನುಗಳನ್ನು ಸಡಿಲಗೊಳಿಸಲಾಗದು ಎಂದಿತು.
ಪಲಾಯನಕ್ಕೆ ಅವಕಾಶ: ಅಲ್ಲದೇ, ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಅರ್ಜಿದಾರರನ್ನು ದೇಶದಿಂದ ಹೊರ ಹೋಗಲು ಅನುಮತಿ ನೀಡಿದಲ್ಲಿ ಅವರ ವಿರುದ್ಧ ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಲು ಅಡ್ಡಿಯಾಗಲಿದೆ. ನ್ಯಾಯಾಲಯದ ವಿಚಾರಣೆ ಎದುರಿಸದೇ, ಪಲಾಯನ ಮಾಡುವುದಕ್ಕೆ ಅವಕಾಶ ನೀಡಿದಂತಾಗಲಿದೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.
ಈ ಹಿಂದೆ ಇದೇ ಅರ್ಜಿದಾರರ ಕೋರಿದ್ದ ಮನವಿಯನ್ನು ಸೆಷನ್ಸ್ ನ್ಯಾಯಾಲಯ ಮತ್ತು ಹೈಕೋರ್ಟ್‌ನ ಮತ್ತೊಂದು ಪೀಠವು ಷರತ್ತುಗಳನ್ನು ಸಡಿಲಿಸಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ನಿರಾಕರಿಸಿದ್ದವು. ಇವನ್ನು ಪ್ರಶ್ನಿಸಿ, ಮರು ಅರ್ಜಿ ಸಲ್ಲಿಸಲಾಗಿದೆ. ಇದೀಗ ತಂದೆಯ ಅನಾರೋಗ್ಯವೆಂಬ ಹೊಸ ಕಾರಣವನ್ನು ಹುಡುಕಿದ್ದಾರೆ. ಹೀಗಾಗಿ ಮನವಿಯನ್ನು ತಿರಸ್ಕರಿಸಲಾಗುತ್ತಿದೆ ಎಂದು ಪೀಠ ತಿಳಿಸಿದೆ.
ಅರ್ಜಿದಾರರರ ವಿರುದ್ಧ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಪ್ರಕರಣ ದಾಖಲಾಗಿವೆ. ರಾಜ್ಯದ ಗಡಿ ವ್ಯಾಪ್ತಿಯನ್ನು ಮೀರಿರುವ ಹಗರಣ ಇದಾಗಿದ್ದು, ಈವರೆಗೂ ಆರೋಪ ಪಟ್ಟಿ ಸಲ್ಲಿಕೆಯಾಗಿಲ್ಲ. ಈ ಸಂದರ್ಭದಲ್ಲಿ ದೇಶದಿಂದ ಹೊರ ಹೋಗಲು ಅನುಮತಿ ನೀಡಿದಲ್ಲಿ ವಿಚಾರಣೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಅವಕಾಶ ನೀಡಿದಂತಾಗಲಿದೆ ಎಂದು ಹೇಳಿದೆ.
ಪ್ರಕರಣದ ಹಿನ್ನೆಲೆ: ಪ್ರಕರಣದ ಆರೋಪಿಯಾಗಿರುವ ಎಚ್.ಯು ಕ್ಸಿಯೋಲಿನ್ ಅವರು 2017ರಲ್ಲಿ ಭಾರತಕ್ಕೆ ಬಂದಿದ್ದು, ಇಲ್ಲಿನ ಅನಾಸ್ ಅಹ್ಮದ್ ಎಂಬುವರನ್ನು ವಿವಾಹವಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಪವರ್ ಬ್ಯಾಂಕ್ ಹಗರಣದಲ್ಲಿ ಆಕೆ ಮತ್ತು ಪತಿಯ ವಿರುದ್ಧ ಮೆಸ್ ರೋಜರ್‌ಪೇ ಸಾಫ್ಟವೇರ್ ಲಿಮಿಟೆಡ್ ದೂರು ದಾಖಲಿಸಿದೆ. ತನಿಖೆ ನಡೆಸಿದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದರು. ಬಳಿಕ ವಿಚಾರಣಾ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಷರತ್ತುಗಳಲ್ಲಿ ಅನುಮತಿ ಇಲ್ಲದೇ ನ್ಯಾಯಾಲಯದ ವಾಪ್ತಿ ಬಿಟ್ಟು ಹೊರ ಹೋಗುವಂತಿಲ್ಲ ಎಂದಿದೆ. ಈ ಹಿಂದೆ ಹಲವು ಕಾರಣ ನೀಡಿ, ಚೀನಾಕ್ಕೆ ತೆರಳಲು ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಕೋರ್ಟ್ ತಿರಸ್ಕರಿಸಿತ್ತು.
ಏನಿದು ಪವರ್ ಬ್ಯಾಂಕ್ ಹಗರಣ: ಪೇಮೆಂಟ್ ಅಗ್ರಿಗೇಟರ್ ಆಗಿ ನೊಂದಾಯಿಸಿಕೊಂಡು ಗೇಮಿಂಗ್, ಸಾಮಾಜಿಕ ಜಾಲತಾಣ ಮತ್ತು ಇ-ಕಾಮರ್ಸ್ ವಲಯದಲ್ಲಿ ಸಕ್ರಿಯರಾಗಿರುವವರನ್ನು ಪವರ್ ಬ್ಯಾಂಕ್ ಹೆಸರಿನ ಹೂಡಿಕೆ ಯೋಜನೆಗಳಿಗೆ ಹೆಚ್ಚಿನ ಬಡ್ಡಿದರದ ಆಮಿಷವೊಡ್ಡಿ ಸೆಳೆದ ವಂಚಿಸಿದ ಆರೋಪ ಕ್ಸಿಯೋಲಿನ್ ಅವರ ಮೇಲಿದೆ.