ಬೆಂಗಳೂರು: ಧಾರವಾಡ ಮತ್ತು ಕಲಬುರಗಿ ಹೈಕೋರ್ಟ್ ಪೀಠಗಳಲ್ಲೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಗಳನ್ನು ಸಲ್ಲಿಸಲು ಹೈಕೋರ್ಟ್ ಅವಕಾಶ ಮಾಡಿಕೊಟ್ಟಿದೆ. ಧಾರವಾಡ ಮತ್ತು ಕಲಬುರಗಿ ಪೀಠಗಳು ಸಂಚಾರಿ ಪೀಠಗಳು ಪ್ರಾರಂಭವಾಗಿ ಬಳಿಕ ಕಾಯಂ ಆದ ನಂತರ ಎರಡೂ ಪೀಠಗಳಲ್ಲಿ ಪಿಐಎಲ್ ಸಲ್ಲಿಕೆಗೆ ಅವಕಾಶ ನೀಡುವ ಬೇಡಿಕೆ ಇತ್ತು. ನ್ಯಾಯಮೂರ್ತಿಗಳ ಕೊರತೆ ಮತ್ತಿತರ ಆಡಳಿತಾತ್ಮಕ ಕಾರಣಗಳಿಂದ ಎರಡೂ ಕಡೆ ಪಿಐಎಲ್ ಸಲ್ಲಿಕೆಗೆ ಅವಕಾಶ ನೀಡಿರಲಿಲ್ಲ.
ಆದರೆ, ಇದೀಗ ಆಗಸ್ಟ್ 1ರಿಂದ ಅನ್ವಯವಾಗುವಂತೆ ಆ ಎರಡೂ ಪೀಠಗಳ ವ್ಯಾಪ್ತಿಯ ಜಿಲ್ಲೆಗಳಲ್ಲಿನ ವಿಚಾರಗಳ ಸಂಬಂಧ ಆಯಾ ಪೀಠಗಳಲ್ಲಿ ಪಿಐಎಲ್ ದಾಖಲಿಸಬಹುದಾಗಿದೆ. ಆದರೆ, ಆ ಪಿಐಎಲ್ಗಳನ್ನು ಬೆಂಗಳೂರು ಪ್ರಧಾನ ಪೀಠದಲ್ಲಿರುವ ವಿಭಾಗೀಯ ಪೀಠ ವಿಡಿಯೋ ಕಾನ್ಫರೆನ್ಸ್ (ಹೈಬ್ರೀಡ್) ಮಾದರಿಯಲ್ಲಿ ವಿಚಾರಣೆ ನಡೆಸಲಿದೆ.
ಈ ಸಂಬಂಧಿಸಿದಂತೆ ರಿಜಿಸ್ಟ್ರಾರ್ ಜನರಲ್ ಕೆ.ಎಸ್.ಭರತ್ ಕುಮಾರ್ ಅವರು ಆದೇಶ ಹೊರಡಿಸಿದ್ದು, 2008ರ ಜೂ.10 ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಮಾರ್ಪಡಿಸಲಾಗಿದ್ದು, ಇನ್ನು ಮುಂದೆ ಆಗಸ್ಟ್ 1ರಿಂದ ಅನ್ವಯವಾಗುವಂತೆ ಧಾರವಾಡ ಮತ್ತು ಕಲಬುರಗಿ ಹೈಕೋರ್ಟ್ ಪೀಠಗಳ ವ್ಯಾಪ್ತಿಯ ಜಿಲ್ಲೆಗಳ ವಿಷಯಗಳನ್ನು ಆಯಾ ಪೀಠಗಳ ಮುಂದೆಯೇ ಪಿಐಎಲ್ ಸಲ್ಲಿಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅದೇ ರೀತಿ ಎರಡೂ ಪೀಠಗಳಲ್ಲಿ ಸಲ್ಲಿಕೆಯಾಗುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಬೆಂಗಳೂರಿನಲ್ಲಿನ ವಿಭಾಗೀಯ ಪೀಠವೇ ವಿಚಾರಣೆ ನಡೆಸಿ ಆದೇಶಗಳನ್ನು ನೀಡಲಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ. ಎರಡೂ ಪೀಠಗಳಲ್ಲಿ ಪಿಐಎಲ್ಗಳನ್ನು ಸಲ್ಲಿಕೆ ಮಾಡಬಹುದು, ಅವುಗಳನ್ನು ಸಂಬಂಧಿಸಿದ ಪೀಠಗಳು ಪರಿಶೀಲಿಸಿ ನಂತರ ಅವುಗಳನ್ನು ವಿಚಾರಣೆಗಾಗಿ ಬೆಂಗಳೂರಿನ ಪೀಠಕ್ಕೆ ವರ್ಗಾವಣೆ ಮಾಡಲಿವೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಇದೇ ವಿಚಾರದ ಕುರಿತು ಕಲಬುರಗಿಯ ಶರಣ್ ಪಾಟೀಲ್ ಪಿಐಎಲ್ ಸಲ್ಲಿಸಿದ್ದರು, ಅದರ ವಿಚಾರಣೆ ಸೋಮವಾರ ಹೈಕೋರ್ಟ್ನಲ್ಲಿ ಬಂದಾಗ ಅರ್ಜಿದಾರರೇ ನ್ಯಾಯಪೀಠಕ್ಕೆ ಈ ವಿಷಯ ತಿಳಿಸಿ, ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಹಾಗಾಗಿ ತಮ್ಮ ಅರ್ಜಿ ಊರ್ಜಿತವಾಗುವುದಿಲ್ಲ, ವಿಲೇವಾರಿ ಮಾಡಬೇಕು ಎಂದು ಕೋರಿದರು. ಆ ಕೋರಿಕೆಯನ್ನು ನ್ಯಾಯಾಲಯ ಮಾನ್ಯ ಮಾಡಿತು.