ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಗೌಪ್ಯ ವಿಚಾರಣೆ (ಇನ್ ಕ್ಯಾಮೆರಾ ಪ್ರೋಸಿಡಿಂಗ್ಸ್) ನಡೆಸುವುದಕ್ಕೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿಗಳಿಂದ ಅನುಮತಿ ಪಡೆದು ನಿರ್ಧರಿಸಲಾಗುವುದು ಎಂದು ಹೈಕೋರ್ಟ್ ತಿಳಿಸಿದೆ.
ಅತ್ಯಾಚಾರ ಪ್ರಕರಣಗಳಲ್ಲಿ ಜಾಮೀನು ಕೋರಿರುವ ಮಾಜಿ ಸಂಸದ ಪ್ರಜ್ವಲ್ ಅವರ ರೇವಣ್ಣ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಈ ಮಾಹಿತಿ ನೀಡಿ ವಿಚಾರಣೆಯನ್ನು ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಹೊಳೆನರಸೀಪುರದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಆದರೆ, ಅದರ ಪ್ರತಿಯನ್ನು ನಮಗೆ ನೀಡಿಲ್ಲ. ಆರೋಪ ಪಟ್ಟಿ ಬದಿಗಿಟ್ಟು ನೋಡಿದರೆ ಪ್ರಜ್ವಲ್ ವಿರುದ್ದದ ಎಲ್ಲಾ ಆರೋಪಗಳು ಜಾಮೀನು ನೀಡಬಹುದಾದ ಆರೋಪಗಳು. ಸಂತ್ರಸ್ತೆಯ ಹೇಳಿಕೆ ಆಧರಿಸಿ, ಈ ಪ್ರಕರಣದಲ್ಲಿ ಅತ್ಯಾಚಾರ ಆರೋಪ ಸೇರ್ಪಡೆ ಮಾಡಲಾಗಿದೆ. ಹೀಗಾಗಿ, ಆರೋಪ ಪಟ್ಟಿಯನ್ನು ನಮಗೆ ಒದಗಿಸಬೇಕು. ಆರೋಪ ಪಟ್ಟಿ ಪ್ರತಿ ಕೊಡಬೇಕು ಎಂದು ಮನವಿ ಮಾಡಿದರು.
ವಿಶೇಷ ಸರ್ಕಾರಿ ಅಭಿಯೋಜಕರ ವಾದವೇನು?: ವಿಶೇಷ ತನಿಖಾ ದಳವನ್ನು ಪ್ರತಿನಿಧಿಸಿರುವ ವಿಶೇಷ ಸರ್ಕಾರಿ ಅಭಿಯೋಜಕ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, ''ಅರ್ಜಿದಾರರು ಬೇಕಾದರೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಪಡೆದುಕೊಳ್ಳಬಹುದು. ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಮತ್ತು ಪ್ರಜ್ವಲ್ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮೊದಲ ಮತ್ತು ಎರಡನೇ ಆರೋಪಿಯಾಗಿದ್ದಾರೆ. ರೇವಣ್ಣ ಅರ್ಜಿ ವಿಚಾರಣೆ ನಡೆಸಿದ ಈ ನ್ಯಾಯಾಲಯವು ಸಂಜ್ಞೆ ಪರಿಗಣಿಸುವದಂತೆ ಅಧೀನ ನ್ಯಾಯಾಲಯಕ್ಕೆ ನಿರ್ಬಂಧ ವಿಧಿಸಿದೆ. ಇದೇ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಪ್ರಜ್ವಲ್ ವಿರುದ್ಧದ ಆರೋಪಗಳು ಪ್ರತ್ಯೇಕ ಮತ್ತು ವಿಭಿನ್ನವಾಗಿವೆ. ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆರೋಪ ಪಟ್ಟಿಯನ್ನು ಪರಿಶೀಲಿಸಬೇಕು, ಅಲ್ಲಿನ ಅಂಶಗಳು ಆಘಾತಕಾರಿಯಾಗಿವೆ. ಅಲ್ಲದೆ, ಸಂತ್ರಸ್ತರ ಗೌರವದ ದೃಷ್ಟಿಯಿಂದ ಪ್ರಕರಣವನ್ನು ಗೌಪ್ಯ ವಿಚಾರಣೆ ನಡೆಸುವ ಸಂಬಂಧ ನ್ಯಾಯಾಲಯ ಪರಿಗಣಿಸಬೇಕು'' ಎಂದು ಕೋರಿದರು.
ಇದಕ್ಕೆ ಪೀಠ, ''ಪ್ರಕರಣದಲ್ಲಿ ರೇವಣ್ಣ ಮೊದಲನೇ ಆರೋಪಿಯಾಗಿದ್ದು, ಅವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಸಂಜ್ಞೆ ಪರಿಗಣಿಸಬಾರದು ಎಂದು ಆದೇಶಿಸಲಾಗಿದೆ. ಎರಡನೇ ಆರೋಪಿಯಾಗಿರುವ ಪ್ರಜ್ವಲ್ಗೆ ಸಂಬಂಧಿಸಿದಂತೆ ಆದೇಶದಲ್ಲಿ ಸ್ಪಷ್ಟನೆ ನೀಡಲಾಗುವುದು. ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯ ಸಂಜ್ಞೆ ಪರಿಗಣಿಸಿದ ಬಳಿಕ ಆರೋಪ ಪಟ್ಟಿ ನಿಮಗೆ (ಪ್ರಜ್ವಲ್) ಲಭ್ಯವಾಗಲಿದೆ. ವಿಚಾರಣಾಧೀನ ನ್ಯಾಯಾಲಯ ಅನುಮತಿ ಪಡೆದೇ ತನಿಖಾಧಿಕಾರಿ ವಿಚಾರಣೆ ಮುಂದುವರೆಸಿದ್ದಾರೆ'' ಎಂದು ತಿಳಿಸಿತು.
''ಪ್ರಜ್ವಲ್ ವಿರುದ್ಧ ಪ್ರಕ್ರಿಯೆ ಆರಂಭಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಆದೇಶಿಸಲಾಗುವುದು. ಅಲ್ಲಿಯವರೆಗೆ ಅಧೀನ ನ್ಯಾಯಾಲಯ ಸಂಜ್ಞೆ ಪರಿಗಣಿಸಿದರೆ ಇಲ್ಲಿ ನಾವು ಜಾಮೀನು ಅರ್ಜಿ ವಿಚಾರಣೆ ನಡೆಸಬಹುದು'' ಎಂದು ಪೀಠ ಹೇಳಿತು.
''ಗೌಪ್ಯ ವಿಚಾರಣೆಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ನೀಡಿರುವ ಆರೋಪ ಪಟ್ಟಿಯನ್ನು ಪರಿಶೀಲಿಸಿ, ಸೂಕ್ತ ಆದೇಶವನ್ನು ಮುಖ್ಯ ನ್ಯಾಯಮೂರ್ತಿಗಳಿಂದ ಪಡೆದುಕೊಳ್ಳಲಾಗುವುದು'' ಎಂದು ಮೌಖಿಕವಾಗಿ ಹೇಳಿದ ನ್ಯಾಯಾಲಯವು ವಿಚಾರಣೆಯನ್ನು ಸೆಪ್ಟೆಂಬರ್ 12ಕ್ಕೆ ಮುಂದೂಡಿತು.