ಬೆಂಗಳೂರು: ಅಪರಾಧ ಪ್ರಕರಣಗಳನ್ನು ಬೇಧಿಸುವಾಗ ಪೊಲೀಸರು ಕೊಂಚ ಎಚ್ಚರ ತಪ್ಪಿದರೂ ಅಪರಾಧ ಪ್ರಮಾದ ಮರೆಯಾಗುತ್ತದೆ. ಆರಕ್ಷಕರ ದಕ್ಷತೆ, ತ್ವರಿತ ಗಟ್ಟಿ ನಿರ್ಧಾರ ಹಾಗೂ ಸೂಕ್ತ ಕಾಲದಲ್ಲಿ ಸರ್ಕಾರ ಕೈಗೊಳ್ಳುವ ಕ್ರಮಗಳು ತಪ್ಪಿತಸ್ಥರಿಗೆ ಕಾನೂನು ಕುಣಿಕೆ ಬಿಗಿಗೊಳಿಸಲು ನೆರವಾಗುತ್ತವೆ. ಕೊಲೆ, ಅತ್ಯಾಚಾರ ಹಾಗೂ ಹಣಕಾಸು ವಂಚನೆ ಸೇರಿದಂತೆ ವಿವಿಧ ಮಾದರಿಯ ಅಪರಾಧ ಪ್ರಕರಣಗಳನ್ನು ಸೂಕ್ಷ್ಮ ಹಾಗೂ ಸಂವೇದನೆಯಿಂದ ತನಿಖೆ ಕೈಗೊಂಡಾಗ ಮಾತ್ರ ಪ್ರಕರಣಗಳ ಹಿಂದಿನ ಘೋರ ಕೃತ್ಯಗಳು ಬೆತ್ತಲಾಗುತ್ತವೆ ಎಂಬುದಕ್ಕೆ ಇತ್ತೀಚಿನ ಘಟನೆಗಳೇ ಸಾಕ್ಷಿ.
ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೂನ್ 9ರಂದು ಬೆಳಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಬ್ರಿಡ್ಜ್ ಬಳಿ ಅನುಮಾನಸ್ಪಾದವಾಗಿ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಶವ ಪತ್ತೆಯಾಗಿತ್ತು. ಮೃತದೇಹ ಪರಿಶೀಲಿಸಿದ ಪೊಲೀಸರು ಕೊಲೆ ಗುಮಾನಿ ವ್ಯಕ್ತಪಡಿಸಿ ಸ್ಥಳೀಯ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಮೃತದೇಹ ಪತ್ತೆಯಾಗುತ್ತಿದ್ದಂತೆ ರಾಘವೇಂದ್ರ, ಕಾರ್ತಿಕ್, ನಿಖಿಲ್ ಹಾಗೂ ಕೇಶವಮೂರ್ತಿ ಎಂಬವರು ನೇರವಾಗಿ ಠಾಣೆಗೆ ಬಂದು ಹಣಕಾಸಿನ ವಿಚಾರಕ್ಕಾಗಿ ರೇಣುಕಾಸ್ವಾಮಿ ಹತ್ಯೆ ಮಾಡಿದ್ದೇವೆ ಎಂದು ಹೇಳಿಕೆ ನೀಡಿದ್ದರು.
ಅಚ್ಚರಿಗೊಂಡ ಪೊಲೀಸರು, ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ ಆರೋಪಿಗಳು ನೀಡಿದ ಭಿನ್ನ ಹೇಳಿಕೆಗಳು ಅನುಮಾನ ಮೂಡಿಸಿದ್ದವು. ಪೊಲೀಸ್ ಶೈಲಿಯಲ್ಲೇ ವಿಚಾರಿಸಿದಾಗ ನಟ ದರ್ಶನ್ ಹತ್ಯೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವುದಾಗಿ ಬೆಳಕಿಗೆ ಬಂದಿತ್ತು. ಆರೋಪಿಗಳ ಹೇಳಿಕೆಯ ಸತ್ಯಾಸತ್ಯತೆ ಪರಾಮರ್ಶಿಸಿದ ಪೊಲೀಸರು ದರ್ಶನ್ ದುಷ್ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದರು. ಬಳಿಕ ವಿಜಯನಗರದ ವಿಭಾಗದ ಎಸಿಪಿ ಚಂದನ್ ಕುಮಾರ್ ನೇತೃತ್ವದ ತಂಡ ಮೈಸೂರಿನ ಖಾಸಗಿ ಹೊಟೇಲ್ನಲ್ಲಿದ್ದ ದರ್ಶನ್ ಅವರನ್ನು ಬಂಧಿಸಿತು. ವಿಚಾರಣೆಯಲ್ಲಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಶೆಡ್ನಲ್ಲಿ ಕೂಡಿಹಾಕಿ ಅಮಾನುಷವಾಗಿ ಹಲ್ಲೆಗೈದು ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು.
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ರಾಜಕೀಯ ಕಾರಣಕ್ಕಾಗಿ ದೇಶಾದ್ಯಂತ ತೀವ್ರ ಚರ್ಚೆಯಾಗಿದ್ದ ಪ್ರಕರಣವೇ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಅಶ್ಲೀಲ ವಿಡಿಯೋಗಳ ಪೈನ್ ಡ್ರೈವ್. ಈ ವಿಡಿಯೋದಲ್ಲಿ ಪ್ರಜ್ವಲ್ ಎಸಗಿದ್ದರು ಎನ್ನಲಾದ ಲೈಂಗಿಕ ದೌರ್ಜನ್ಯಗಳು ಅಂತಾರಾಷ್ಟೀಯ ಮಟ್ಟದಲ್ಲಿ ಸುದ್ದಿಯಾಯಿತು. ಲೋಕಸಭಾ ಚುನಾವಣೆಗೆ ಎರಡು ದಿನಗಳ ಮುನ್ನ ಹಾಸನದ ಬೀದಿ ಬೀದಿಯಲ್ಲಿ ಪೆನ್ ಡ್ರೈವ್ಗಳನ್ನು ಎಸೆಯಲಾಗಿತ್ತು. ಕಾಡ್ಗಿಚ್ಚಿನಂತೆ ವಿಡಿಯೋ ಹರಡಿ ಲೈಂಗಿಕ ದೌರ್ಜನ್ಯವೆಸಗಿರುವ ಬಲವಾದ ಆರೋಪ ಕೇಳಿಬಂದಿತ್ತು.
ಇದಕ್ಕೆ ಪೂರಕವಾಗಿ ಹೊಳೆನರಸೀಪುರ ಠಾಣೆಯಲ್ಲಿ ಪ್ರಜ್ವಲ್ ಜೊತೆಗೆ ಅವರ ತಂದೆ ಎಚ್.ಡಿ.ರೇವಣ್ಣ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋಗಳು ಹರಿದಾಡಿದ್ದರಿಂದ ಸಂತ್ರಸ್ತೆಯರು ತಮಗಾಗಿರುವ ಅನ್ಯಾಯಗಳ ಕುರಿತು ದೂರು ನೀಡಿದರು. ಪ್ರಜ್ವಲ್ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ಪ್ರಜ್ವಲ್ ಹಾಗೂ ಅಪಹರಣ ಪ್ರಕರಣದಲ್ಲಿ ಎಚ್.ಡಿ.ರೇವಣ್ಣ ಅವರನ್ನೂ ಬಂಧಿಸಲಾಗಿತ್ತು.
ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಗೋಲ್‌ಮಾಲ್: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಕೋಟ್ಯಂತರ ರೂಪಾಯಿ ಅವ್ಯವಹಾರ ನಿಗಮದ ಅಧೀಕ್ಷಕ ಶಿವಮೊಗ್ಗ ಮೂಲದ ಚಂದ್ರಶೇಖರನ್ ಆತ್ಮಹತ್ಯೆಯಿಂದಾಗಿ ಬೆಳಕಿಗೆ ಬಂದಿತ್ತು. ಡೆತ್ನೋಟ್ನಲ್ಲಿ 85 ಕೋಟಿ ರೂಪಾಯಿ ಅವ್ಯವಹಾರವಾಗಿದೆ ಎಂದು ಉಲ್ಲೇಖಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ರಕರಣದ ತನಿಖೆಗೆ ಸರ್ಕಾರ ಎಸ್ಐಟಿ ರಚಿಸಿತ್ತು. ತನಿಖೆಯಲ್ಲಿ ನಿಗಮದ ಖಾತೆಯಿಂದ 18 ವಿವಿಧ ಬ್ಯಾಂಕ್ ಖಾತೆಗಳಿಗೆ 94.73 ಕೋಟಿ ರೂಪಾಯಿ ಅಕ್ರಮವಾಗಿ ವರ್ಗಾವಣೆಯಾಗಿದ್ದು ಗೊತ್ತಾಗಿತ್ತು. ಈ ಸಂಬಂಧ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ್, ಮಾಜಿ ಸಚಿವ ನಾಗೇಂದ್ರ ಅವರ ಆಪ್ತ ಎನ್ನಲಾದ ನೆಕ್ಕುಂಟಿ ನಾಗರಾಜ್, ನಾಗೇಶ್ವರ್ ರಾವ್, ಹೈದರಾಬಾದ್ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತ್ಯನಾರಾಯಣ್ ವರ್ಮ ಎಂಬವರನ್ನು ಬಂಧಿಸಿ 13.62 ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿತ್ತು.
ಬಿಟ್ ಕಾಯಿನ್ ದಂಧೆ: ಡ್ರಗ್ಸ್ ಕೇಸ್ನಲ್ಲಿ ಕೆಂಪೇಗೌಡ ನಗರ ಪೊಲೀಸರಿಂದ ಬಂಧಿತನಾಗಿ ಶ್ರೀಕಿ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದಾಗ ಬಿಟ್ ಕಾಯಿನ್ ದಂಧೆ ಬೆಳಕಿಗೆ ಬಂದಿತ್ತು. 2020ರಲ್ಲಿ ಸಿಸಿಬಿ ಶ್ರೀಕಿಯನ್ನು ಬಂಧಿಸಿದಾಗ ಅಂತಾರಾಷ್ಟೀಯ ಮಟ್ಟದ ವೆಬ್‌ಸೈಟ್, ಆನ್‌ಲೈನ್ ಗೇಮಿಂಗ್ ಹಾಗೂ ಸರ್ಕಾರಿ ಜಾಲತಾಣಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ಹಣ ವಂಚಿಸಿರುವುದು ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ಮಹಿಳಾ ಹೆಡ್ ಕಾನ್ಸ್ಟೇಬಲ್ ಅತ್ಯಾಚಾರ ಪ್ರಕರಣ; ನೌಕರಿಯಿಂದ ಸಬ್‌ಇನ್ಸ್‌ಪೆಕ್ಟರ್ ವಜಾ - SI Dismissed From Service