ಉಡುಪಿ: ಮುದ್ರಾಡಿ ಸಮೀಪದ ಬಲ್ಲಾಡಿ ಎಂಬಲ್ಲಿ ಭಾನುವಾರ ಮಧ್ಯಾಹ್ನ ಮೇಘ ಸ್ಫೋಟದಿಂದ ಹಠಾತ್ ಸುರಿದ ಭಾರಿ ಮಳೆಗೆ ಪ್ರವಾಹ ಉಂಟಾಗಿದ್ದು, ಪರಿಣಾಮ ಹಲವು ಮನೆಗಳು ಹಾಗೂ ತೋಟಗಳಿಗೆ ನೀರು ನುಗ್ಗಿದೆ. ಅಲ್ಲದೆ, ಕಾರು, ಬೈಕುಗಳು ನೆರೆಯಲ್ಲಿ ಕೊಚ್ಚಿ ಹೋಗಿ ಅಪಾರ ನಷ್ಟ ಉಂಟಾಗಿದೆ.
ಮಧ್ಯಾಹ್ನ 2.30ರಿಂದ 3.45ರ ವರೆಗೆ ಬಲ್ಲಾಡಿಯ ಈಶ್ವರನಗರ ಸಮೀಪ ಧಾರಾಕಾರ ಮಳೆ ಸುರಿದಿದೆ. ಇದರಿಂದ ನೆರೆ ಸೃಷ್ಟಿಯಾಗಿ, ಮುದ್ರಾಡಿಯ ಹೊಸ ಕಂಬ್ಯ ಕಾಂತರಬೈಲು ಹಾಗೂ ಕೆಲಕಿಲ ಎಂಬಲ್ಲಿನ ಸುಮಾರು ಮನೆಗಳಿಗೆ ನೀರು ನುಗ್ಗಿದೆ. ಇಡೀ ಪ್ರದೇಶ ಜಲಾವೃತಗೊಂಡಿದ್ದು, 2 ಕಾರುಗಳು ಮತ್ತು ಬೈಕ್‌ಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಮನೆಯೊಳಗೆ ಸಿಲುಕಿಕೊಂಡಿದ್ದ ಕೆಲವರನ್ನು ಹಗ್ಗ ಕಟ್ಟಿ, ಏಣಿಯ ಸಹಾಯದಿಂದ ಹೊರಗೆ ಕರೆತರಲಾಯಿತು.
ವೃದ್ಧೆ ಮೃತದೇಹ ಪತ್ತೆ: ನೆರೆಯಿಂದಾಗಿ ಮುದ್ರಾಡಿ ಸಂಪರ್ಕಿಸುವ ಬಲ್ಲಾಡಿ ತುಂಡುಗುಡ್ಡೆ ರಸ್ತೆ ಸಂಪೂರ್ಣ ಬಂದ್ ಆಗಿದ್ದರಿಂದ ಸ್ಥಳೀಯರು ಬದಲಿ ರಸ್ತೆಯ ಮೂಲಕ ಸಂಚರಿಸುವಂತಾಗಿತ್ತು. ಮನೆಯೊಂದರಲ್ಲಿ ದನದ ಕೊಟ್ಟಿಗೆ ಕುಸಿದಿದ್ದು, ಒಂದು ಆಕಳು ನಾಪತ್ತೆಯಾಗಿದೆ. ಅಲ್ಲದೆ, ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ವೃದ್ಧೆ ಚಂದ್ರ ಗೌಡ್ತಿ ಎಂಬವರ ಮೃತದೇಹ ಬಲ್ಲಾಡಿ ಬಳಿ ಗದ್ದೆ ಬದಿಯಲ್ಲಿ ಪತ್ತೆಯಾಗಿದೆ. ಸಿಡಿಲು ಬಡಿದು ಮುದ್ರಾಡಿ, ಪಡುಕುಡುರು, ಎಳಗೋಳಿ ಎಂಬಲ್ಲಿನ ಹಲವು ಮನೆಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಬ್ಬಿನಾಲೆಯ ಬೆಟ್ಟದಲ್ಲಿ ಉಂಟಾದ ಮೇಘ ಸ್ಫೋಟದಿಂದ ಕೆಲ ಹೊತ್ತಲ್ಲೇ ಭಾರಿ ಮಳೆಯಾಗಿ, ಪ್ರವಾಹ ಸೃಷ್ಠಿಯಾಗಿದೆ. ಪರಿಣಾಮ ನೀರು ಮನೆಗಳಿಗೆ ನುಗ್ಗಿದೆ ಎಂದು ಮುದ್ರಾಡಿ ಗ್ರಾಮ ಪಂಚಾಯತ್ ಸದಸ್ಯ ಗಣಪತಿ ಮುದ್ರಾಡಿ ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಿ ಪೂಜಾರಿ, ಪಂಚಾಯತಿ ಸದಸ್ಯರು, ಗ್ರಾಮ ಆಡಳಿತಾಧಿಕಾರಿ ನವೀನ್ ಕುಮಾರ್ ಕುಕ್ಕುಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಪ್ರತಿಕ್ರಿಯೆ: ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ 'ಈಟಿವಿ ಭಾರತ'ತಕ್ಕೆ ಮಾಹಿತಿ ನೀಡಿದ್ದು, ''ಅ.9ರ ವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಸೂಚನೆ ನೀಡಿದೆ. ಅದರಂತೆ ಹೆಬ್ರಿ ತಾಲೂಕಿನ ಬಲ್ಲಾಡಿಯಲ್ಲಿ ಮಳೆ ಸುರಿದಿದೆ. ಇದರಿಂದ ನೆರೆ ಸೃಷ್ಟಿಯಾಗಿ ಮನೆಗಳು ಹಾಗೂ ದನದ ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಅಗತ್ಯ ನೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ' ಎಂದು ತಿಳಿಸಿದರು.