ಮೈಸೂರು/ಚಾಮರಾಜನಗರ: ಬಿಸಿಲಿನಿಂದ ಕಂಗೆಟ್ಟ ಸಾಂಸ್ಕೃತಿಕ ನಗರಿಯ ಜನತೆಗೆ ಮೊದಲ ಮಳೆ ತಂಪೆರೆದಿದೆ. ಶುಕ್ರವಾರ ನಗರದ ಹೃದಯ ಭಾಗ ಕೆ.ಆರ್.ಸರ್ಕಲ್, ಕುರುಬರಹಳ್ಳಿ, ಕುವೆಂಪುನಗರ, ಮಾನಸ ಗಂಗೋತ್ರಿ ಹಾಗೂ ಕುಕ್ಕರಹಳ್ಳಿ ಕೆರೆ ಸೇರಿದಂತೆ ಹಲವೆಡೆ ಮಳೆಯಾಗಿದೆ.
ಭಾರಿ ಮಳೆಯಿಂದಾಗಿ ಕೆ.ಆರ್.ಸರ್ಕಲ್ನಲ್ಲಿ ವಾಹನ ಸಂಚಾರರು ಕೆಲಕಾಲ ಪರದಾಡುವಂತಾಗಿತ್ತು. ಬಿಸಿಲಿನ ಝಳದಿಂದ ತತ್ತರಿಸಿದ್ದ ಜನರು ಮಳೆ ಕಂಡು ಸಂತಸಗೊಂಡರು. ಬಿರುಗಾಳಿ ಸಹಿತ ಮಳೆಯಿಂದ ಹಲವೆಡೆ ಮರಗಳು ಧರೆಗುರುಳಿವೆ. ಇದರಿಂದ ವಾಹನ ಸಂಚಾರರಿಗೆ ಅಡಚಣೆ ಉಂಟಾಗಿತ್ತು. ಅಲ್ಲದೆ, ಕೆಲ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಹಲವು ದಿನಗಳಿಂದ ತಾಪಮಾನ ಏರಿಕೆ ಆಗುತ್ತಿರುವುದರಿಂದ ಮೈಸೂರಿನಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಜನರ ಸಂಚಾರ ವಿರಳವಾಗಿದೆ. ಈ ಮಧ್ಯೆ ಸುಮಾರು 1 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಜನರಿಗೆ ಸ್ವಲ್ಪ ನೆಮ್ಮದಿ ಮೂಡಿತು.
ಚಾಮರಾಜನಗರದಲ್ಲೂ ಮಳೆ: ಗಡಿಜಿಲ್ಲೆ ಚಾಮರಾಜನಗರದ ವಿವಿಧೆಡೆ ಶುಕ್ರವಾರ ಸಂಜೆ ಭರ್ಜರಿ ಮಳೆಯಾಗಿದ್ದು, ಜನರು ಹರ್ಷಗೊಂಡಿದ್ದಾರೆ. ಚಾಮರಾಜನಗರ ತಾಲೂಕಿನ ಅರಕಲವಾಡಿ, ಚೆನ್ನಪ್ಪನಪುರ, ಕೆ.ಗುಡಿ ಅರಣ್ಯ ಪ್ರದೇಶ, ಹನೂರು ಪಟ್ಟಣ ಹಾಗೂ ಹನೂರು ತಾಲೂಕಿನ ಹೂಗ್ಯಂ, ಶಾಗ್ಯ ಗುಂಡ್ಲುಪೇಟೆ ಪಟ್ಟಣ ಮತ್ತು ತಾಲೂಕಿನ ಶಿವಪುರ, ಬೊಮ್ಮಲಾಪುರ, ಕೋಡಹಳ್ಳಿ, ಹಂಗಳ, ಮಾಡ್ರಹಳ್ಳಿ ಸುತ್ತಮುತ್ತ ಗುಡುಗು, ಸಿಡಿಲು ಆರ್ಭಟದೊಂದಿದೆ ಮಳೆ ಸುರಿದಿದೆ. ಅರಣ್ಯ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವುದರಿಂದ ಬೆಂಕಿ ಆತಂಕ ದೂರವಾಗಿದೆ.
ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಜಿಲ್ಲೆಯ ಹಲವೆಡೆ ಮನೆ, ಬೆಳೆಗಳಿಗೆ ಹಾನಿಯಾಗಿದೆ. ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದಲ್ಲಿ ವಿಶೇಷಚೇತನ ಮಹಿಳೆಯ ಪೆಟ್ಟಿಗೆ ಅಂಗಡಿ ಮೇಲೆ ಬೇವಿನಮರ ಬಿದ್ದು ಸಂಪೂರ್ಣ ಜಖಂ ಆಗಿದೆ. ಮಡಹಳ್ಳಿ ಗ್ರಾಮದ ಜಮೀನಿನಲ್ಲಿದ್ದ ಮನೆಗಳ ಛಾವಣಿ ಹಾರಿಹೋಗಿದ್ದು, ಹನೂರು ತಾಲೂಕಿನ ಪುಷ್ಪಾಪುರ ಗ್ರಾಮದಲ್ಲೂ ಮನೆಗಳಿಗೆ ಹಾನಿಯಾಗಿವೆ.
3 ಎಮ್ಮೆ ಸಾವು: ಹನೂರು ತಾಲೂಕಿನ ಶಾಗ್ಯ ಗ್ರಾಮದ ರತ್ನಮ್ಮ ಎಂಬುವರಿಗೆ ಸೇರಿದ 3 ಎಮ್ಮೆಗಳು ಸಿಡಿಲಿನ ಬಡಿತಕ್ಕೆ ಮೃತಪಟ್ಟಿವೆ. ರೈತ ಮಹಿಳೆ ತನ್ನ ಎಮ್ಮೆಗಳನ್ನು ಕಳೆದುಕೊಂಡು ರೋಧಿಸುತ್ತಿದ್ದುದು ಎಲ್ಲರ ಮನಕಲುಕಿತು.
ಹನೂರು ತಾಲೂಕಿನ ಹೂಗ್ಯಂನಲ್ಲಿ 15 ಎಕರೆ ಪರಂಗಿ, 20 ಎಕರೆ ಬಾಳೆ, ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ಲೋಕೇಶ್ ಎಂಬವರಿಗೆ ಸೇರಿದ ಬಾಳೆ, ನಾಗಶೆಟ್ಟಿ ಎಂಬುವರ ಸಪೋಟಾ ತೋಟ ಬಿರುಗಾಳಿಗೆ ನೆಲಕಚ್ಚಿದೆ. ಒಂದೆಡೆ, ಬಿಸಿಲಿಗೆ ಬೆಂಡಾಗಿದ್ದ ಜನರಿಗೆ ವರುಣ ತಂಪೆನಿಸಿದರೆ, ರೈತರಿಗೆ ಸಂಕಷ್ಟ ಎದುರಾಗಿದೆ.
ರೇಷ್ಮೆನಗರಿಯಲ್ಲಿ ವರುಣಾರ್ಭಟ: ರಾಮನಗರ ಜಿಲ್ಲೆಯಲ್ಲೂ ಹಲವೆಡೆ ಗುಡುಗು ಸಿಡಿಲು ಸಮೇತ ಧಾರಾಕಾರ ಮಳೆಯಾಗಿದೆ. ಸಿಡಿಲಿನ ಬಡಿತಕ್ಕೆ ಜಾನಪದ ಲೋಕದ ಮನೆಗೆ ಬೆಂಕಿ ಬಿದ್ದು, ಸಂಪೂರ್ಣವಾಗಿ ಸುಟ್ಟುಹೋದ ಘಟನೆ ಜರುಗಿದೆ. ಹಳೇ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ಜಾನಪದ ಲೋಕದ ಬಳಿ ಇರುವ ಲೋಕದಲ್ಲಿ ನಿರ್ಮಾಣ ಮಾಡಿದ ಹಾಡಿ ಜನಗಳ ಹುಲ್ಲಿನ ಮನೆಗೆ ಸಿಡಿಲು ಅಪ್ಪಳಿಸಿದೆ.
ಕೂಡಲೇ, ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಿಸಿಲಿಗೆ ಬಳಲಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ದಿಢೀರ್ ಮಳೆಯಿಂದ ಕೆಲಕಾಲ ಜನಜೀವನ ಅಸ್ತವ್ಯಸ್ತವಾಗಿತ್ತು.
ಇದನ್ನೂ ಓದಿ: ಸುಡು ಬಿಸಿಲ ಬೇಗೆಯಲ್ಲಿ 'ಬೆಂದ'ಕಾಳೂರಿಗೆ ತಂಪೆರೆದ ವರುಣ; ರಾಜಧಾನಿಯಲ್ಲಿ ಇಳಿದ ತಾಪಮಾನ, ಜನರ ನಿಟ್ಟುಸಿರು - Bengaluru Rain