ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಚಾರ್ಮಾಡಿ, ಕೊಟ್ಟಿಗೆಹಾರದಲ್ಲಿ ಜೋರು ಮಳೆ ಸುರಿಯುತ್ತಿದೆ. ಕಳೆದ ಏಳು ದಿನಗಳಲ್ಲಿ 96 ಇಂಚು ಮಳೆ ದಾಖಲಾಗಿದೆ. ನಿರಂತರ ವರ್ಷಧಾರೆಯಿಂದಾಗಿ ಚಾರ್ಮಾಡಿ ಹೆದ್ದಾರಿಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ.
ರಸ್ತೆಯಲ್ಲಿ ವಾಹನ ಚಲಾಯಿಸಲು ಚಾಲಕರು ಪರದಾಟ ನಡೆಸುತ್ತಿದ್ದಾರೆ. ಮಂಜುಮಿಶ್ರಿತ ಮಳೆಯಿಂದಾಗಿ ಸಂಚಾರಕ್ಕೆ ಅಡೆತಡೆಯಾಗುತ್ತಿದೆ. ರಸ್ತೆಬದಿ ಗುಡ್ಡ ಕುಸಿತವೂ ಉಂಟಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಮಂಗಗಳಿಗೂ ನೆಲೆ ಇಲ್ಲದಂತಾಗಿದೆ. ಮರಗಳ ಮೇಲೆ ನೇತಾಡುತ್ತಾ ಮಳೆಯಲ್ಲಿಯೇ ನೆನೆದು ಅವುಗಳು ಕಾಲ ಕಳೆಯುತ್ತಿವೆ. ಈ ದೃಶ್ಯಗಳು ಮನಕಲಕುವಂತಿವೆ.
ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಕೃತಕ ಜಲಪಾತಗಳು ನಿರ್ಮಾಣವಾಗುತ್ತಿವೆ. ಎಲ್ಲೆಂದರಲ್ಲಿ ಅತ್ಯಂತ ರಭಸವಾಗಿ ನೀರು ಹರಿಯುತ್ತಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದಾರಿ ಕಾಣದೆ ಸವಾರರು ಅಲ್ಲಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ.
ವಿದ್ಯುತ್ ತಂತಿ ಮೇಲೆ ಬಿದ್ದ ಮರಗಳು: ಗಾಳಿಸಹಿತ ಮಳೆಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ವಿದ್ಯುತ್ ತಂತಿಯ ಮೇಲೆ ಅಡಿಕೆ ಮರಗಳು ಬಿದ್ದ ಘಟನೆ ಮೂಡಿಗೆರೆ ತಾಲೂಕಿನ ಫಲ್ಗುಣಿ ಗ್ರಾಮದ ಬಳಿ ನಡೆದಿದೆ. ಕೂಡಲೇ ಸ್ಥಳೀಯರು ಮೆಸ್ಕಾಂ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಳೆ ಹೀಗೆಯೇ ಮುಂದುವರಿದರೆ ಮತ್ತಷ್ಟು ಅಡಿಕೆ ಮರಗಳು ತಂತಿಗಳ ಮೇಲೆ ಬಿದ್ದು, ತಂತಿ ತುಂಡಾಗಿ ರಸ್ತೆ ಮೇಲೆ ಬೀಳುವ ಸಾಧ್ಯತೆ ಇದೆ. ಹಾಗಾಗಿ ಸಂಬಂಧಪಟ್ಟ ಇಲಾಖೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಭರ್ತಿಯಾಗುತ್ತಿದೆ ಹಿರೇಕೊಳಲೆ ಕೆರೆ: ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಿರೇಕೊಳಲೆ ಕೆರೆ ತುಂಬುವ ಹಂತ ತಲುಪಿದೆ. ಇದು ಚಿಕ್ಕಮಗಳೂರು ನಗರಕ್ಕೆ ನೀರು ಪೂರೈಸುವ ಬೃಹತ್ ಕೆರೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿರುವ ವೀಕ್ಷಣಾ ಗೋಪುರದ ಬಳಿ ಪ್ರವಾಸಿಗರನ್ನು ನಿರ್ಬಂಧಿಸಿದೆ. ಕೆರೆ ಕೋಡಿ ಬೀಳಲು ಕೇವಲ ಮೂರು ಅಡಿ ಬಾಕಿ ಇದೆ. ಹೀಗಾಗಿ, ಪ್ರವಾಸಿಗರು ತೆರಳದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಗೋಪುರದ ಹಾದಿಗೆ ಅಡ್ಡಲಾಗಿ ಬೇಲಿ ಹಾಕಿದ್ದಾರೆ. ಚಂದ್ರದ್ರೋಣ ಪರ್ವತ ಸಾಲಿನ ದೃಶ್ಯಕಾವ್ಯವನ್ನು ಕಣ್ತುಂಬಿಕೊಳ್ಳಲು ಪ್ರತಿನಿತ್ಯ ಆಗಮಿಸುವ ಪ್ರವಾಸಿಗರನ್ನು ನಿಯಂತ್ರಣ ಮಾಡುವುದೇ ಇಲ್ಲಿ ಪೊಲೀಸರಿಗೆ ಇಲ್ಲಿ ಹರಸಾಹಸದ ಕೆಲಸವಾಗಿದೆ.
ಇದನ್ನೂ ಓದಿ: ಮಳೆ ಅಬ್ಬರ; ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ಹಲವೆಡೆ ಯೆಲ್ಲೋ ಅಲರ್ಟ್ ಘೋಷಣೆ - Rain Red Alert