ಚಾಮರಾಜನಗರ: ಎರಡನೇ ದಿನವೂ ಮಳೆರಾಯ ಗಡಿಜಿಲ್ಲೆ ಬೊಬ್ಬಿರಿದಿದ್ದು, ವರುಣಾರ್ಭಟಕ್ಕೆ ಚಾಮರಾಜನಗರದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಯಿತು. ಜಿಲ್ಲಾಕೇಂದ್ರದಲ್ಲಿ 1 ತಾಸಿಗೂ ಅಧಿಕ ಕಾಲ ಸುರಿದ ಧಾರಾಕಾರ ಮಳೆಗೆ ರಸ್ತೆಗಳ ಮೇಲೆಲ್ಲಾ ಹೊಳೆಯಂತೆ ಮಳೆ ನೀರು ಹರಿಯಿತು. ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು. ಬಿ. ರಾಚಯ್ಯ ಜೋಡಿ ರಸ್ತೆ, ಭುವನೇಶ್ವರಿ ವೃತ್ತದ ರಸ್ತೆಯಲ್ಲಿ ಒಂದು ಅಡಿಗೂ ಹೆಚ್ಚು ಮಳೆ ನೀರು ನಿಂತಿದ್ದರಿಂದ ದ್ವಿಚಕ್ರ, ತ್ರಿಚಕ್ರ ವಾಹನಗಳು ಸಂಚರಿಸುವುದೇ ದುಸ್ತರವಾಗಿತ್ತು.
ದಿಢೀರ್ ಸುರಿದ ಮಳೆಗೆ ಪರದಾಡಿದ ವಾಹನ ಸವಾರರು ಬೈಕ್ ಚಲಾಯಿಸಲು ಹೋಗಿ ಕೆಲವರು ಬಿದ್ದ ಘಟನೆಗಳು ಜರುಗಿತು. ಗುಂಡ್ಲುಪೇಟೆ ತಾಲೂಕಿನ ವಿವಿಧೆಡೆ ಕೂಡ ಮಳೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೈಕ್ ಸವಾರರು ವಾಹನ ಚಾಲನೆಗೆ ಪ್ರಯಾಸ ಪಟ್ಟರು.
ಹನೂರಲ್ಲೂ ಭರ್ಜರಿ ಮಳೆ: ಹನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿ ಹಳ್ಳಕೊಳ್ಳಗಳು ತುಂಬಿ ಹರಿದ ಪರಿಣಾಮ ಜನ ಜೀವನ ಅಸ್ತವ್ಯಸ್ತವಾಯಿತು. ಸೋಮವಾರ ಮಧ್ಯಾಹ್ನ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಬಂಡಳ್ಳಿ, ಆರ್.ಎಸ್. ದೊಡ್ಡಿ, ಮಂಗಲ ಹಾಗೂ ಚಂಗವಾಡಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಮಳೆ ಸುರಿದ ಪರಿಣಾಮ ಸ್ವಾಮಿಹಳ್ಳ ಹಾಗೂ ಬರೆಹಳ್ಳ ತುಂಬಿ ಸೇತುವೆ ಮೇಲೆ ನೀರು ಹರಿಯುತ್ತಿದ್ದರಿಂದ 2 ತಾಸು ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಳೆದ ಹಲವು ತಿಂಗಳುಗಳಿಂದ ಸಾಧಾರಣ ಮಳೆಯಿಂದಾಗಿ ಕೆರೆಕಟ್ಟೆಗಳಿಗೆ ನೀರು ಬಾರದೆ ಅಂತರ್ಜಲ ಮಟ್ಟ ಕುಸಿತ ಕಂಡಿತ್ತು. ಸೋಮವಾರ ಒಂದೇ ದಿನದಲ್ಲಿ ವರುಣನ ಆರ್ಭಟದಿಂದ ಕೆರೆ ಕಟ್ಟೆಗಳಿಗೆ ನೀರು ಹರಿದು ಬರುತ್ತಿದ್ದು, ರೈತರು ಹರ್ಷಗೊಂಡಿದ್ದಾರೆ.
ಓದಿ: "ನನ್ನ ತಾಯಿಗೆ ತಪ್ಪು ಮಾಡಿಲ್ಲ ಅನ್ನೋದು ಸ್ಪಷ್ಟವಾಗಿದೆ": ಡಾ. ಯತೀಂದ್ರ ಸಿದ್ದರಾಮಯ್ಯ - Yathindra Siddaramaiah