ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಬುಧವಾರದಂದು ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ರಸ್ತೆಗಳು ಜಲಾವೃತಗೊಂಡು ಅವಾಂತರ ಸೃಷ್ಟಿಯಾಗಿದೆ. ನಗರದ ವಿಜಯನಗರ, ಕೆಆರ್ ಮಾರುಕಟ್ಟೆ, ಗಾಂಧಿನಗರ, ರಾಜಾಜಿನಗರ, ರಾಜರಾಜೇಶ್ವರಿ ನಗರ, ಜಾಲಹಳ್ಳಿ ಸೇರಿ ಹಲವೆಡೆ ಧಾರಾಕಾರ ಮಳೆಯಾಗಿದೆ. ಮಳೆಗೆ ಮರಗಳು ಬಿದ್ದು ವಾಹನಗಳು ಜಖಂ ಆಗಿವೆ.
ಬೆಳಗ್ಗೆಯಿಂದ ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು. ಸಂಜೆಯಾಗುತ್ತಿದ್ದಂತೆ ನಗರದ ಹಲವೆಡೆ ಮಳೆಯಾಗಿದೆ. ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತಗೊಂಡಿದ್ದು ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಲಿ ಅಸ್ಕರ್ ರಸ್ತೆಯಲ್ಲಿ ಮರ ಧರೆಗುರುಳಿದ್ದು, ಕೊಂಬೆಗಳು ಒಂದು ಆಟೋ, ಎರಡು ಕಾರುಗಳ ಮೇಲೆ ಬಿದ್ದು, ವಾಹನಗಳು ಜಖಂ ಆಗಿವೆ. ಆಟೋದಿಂದ ಇಳಿದ ಪ್ರಯಾಣಿಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ರಸ್ತೆಯಲ್ಲಿ ಬಿದ್ದಿರುವ ಮರದ ಕೊಂಬೆಗಳನ್ನು ಬಿಬಿಎಂಪಿ ಅರಣ್ಯ ಸಿಬ್ಬಂದಿ ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ರಸ್ತೆ ಸಂಪೂರ್ಣ ಬಂದ್ ಮಾಡಿ ಕಾರ್ಯಾಚರಣೆ ಮಾಡಲಾಗುತ್ತಿದೆ.
ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಮಳೆರಾಯ ಅಡೆಚಣೆ ಉಂಟು ಮಾಡಿದ್ದು, ಮೆಟ್ರೋ ಪಿಲ್ಲರ್ ಹಾಗೂ ಅಂಗಡಿ ಮುಂಗಟ್ಟುಗಳ ಆಶ್ರಯವನ್ನು ಪಡೆದು ಸವಾರರು ನಿಂತಿರುವ ದೃಶ್ಯಗಳು ಕಂಡು ಬಂತು. ಅರ್ಧ ಗಂಟೆ ಅಧಿಕ ಮಳೆ ಬಿದ್ದಿದ್ದು, ರಸ್ತೆಯಲ್ಲಿ ಗುಂಡಿಗಳು ಕಾಣದೇ ಸವಾರರು ಕಿರಿಕಿರಿ ಅನುಭವಿಸಿದರು. ಇದರಿಂದಾಗಿ ಅಲ್ಲಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.