ವಿಜಯಪುರ: ಜಿಲ್ಲೆಯ ಕೆಲವೆಡೆ ಬಿಸಿಲಿನ ಬೇಗೆಯ ನಡುವೆಯೂ ವರುಣ ತಂಪೆರೆದಿದ್ದಾನೆ. ವಿಜಯಪುರ ನಗರ ಸೇರಿದಂತೆ ವಿವಿಧೆಡೆ ಗುರುವಾರ ಗಾಳಿ ಸಹಿತ ಭಾರಿ ಹಾಗೂ ಕೆಲವೆಡೆ ಜಿಟಿ ಜಿಟಿ ಮಳೆಯಾಗಿದೆ. ಇದೇ ವೇಳೆ, ಇಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ.
ವಿಜಯಪುರದ ಬಾಬಾನಗರ, ಬಿಜ್ಜರಗಿ ಹಾಗೂ ದೇವರ ಹಿಪ್ಪರಗಿ ಸೇರಿದಂತೆ ಹಲೆವೆಡೆ ಜಿಟಿ ಜಿಟಿ ಮಳೆಯಾಗಿದೆ. ಈ ಬಾರಿ ಮಳೆ, ಬೆಳೆ ಸಂಪೂರ್ಣ ಎಂದು ಕಾರ್ಣಿಕ ನುಡಿದಿದ್ದ ಕತಕನಹಳ್ಳಿಯ ಶಿವಯ್ಯ ಅಜ್ಜನವರು ಮಳೆಗಾಗಿ ಶಿವನೇ ಒಂಟಿಗಾಲಲ್ಲಿ ನಿಂತಿದ್ದಾನೆ ಎಂದಿದ್ದರು. ಕಾರ್ಣಿಕ ನುಡಿದ ಕೆಲ ಗಂಟೆಯಲ್ಲಿಯೇ ವರುಣ ಧರೆಗಿಳಿದಿದ್ದಾನೆ. ಸೂರ್ಯನ ಆರ್ಭಟಕ್ಕೆ ಕಂಗೆಟ್ಟ ಜನರು ತಂಪಿನ ಅನುಭವ ಪಡೆದಿದ್ದಾರೆ.
ಸಿಡಿಲಿಗೆ ಇಬ್ಬರು ಬಲಿ: ಮಳೆಯಿಂದಾಗಿ ಸಿಡಿಲು ಬಡಿದು ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇಬ್ಬರೂ ಜಿಲ್ಲೆಯ ಇಂಡಿ ತಾಲೂಕಿನವರಾಗಿದ್ದಾರೆ. ಮಾವಿನಹಳ್ಳಿ ರಸ್ತೆ ಬಳಿ ಜಮೀನಿನಲ್ಲಿ ಸಿಡಿದು ಬಡಿದು ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ಮೃತ ಬಾಲಕನನ್ನು 16 ವರ್ಷದ ಭೀರಪ್ಪ ನಿಂಗಪ್ಪ ಅವರಾದಿ ಎಂದು ಗುರುತಿಸಲಾಗಿದೆ. ಹಾಗೆಯೇ, ಮಸಳಿ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನಿಗೂ ಕೂಡ ಸಿಡಿಲು ಅಪ್ಪಳಿಸಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. 45 ವರ್ಷದ ಸೋಮಶೇಖರ ಪಟ್ಟಣಶೆಟ್ಟಿ ಮೃತ ರೈತನಾಗಿದ್ದಾರೆ.
ಬಾಲಕನ ಮನೆಗೆ ಸ್ಥಳೀಯ ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೇ ಮೃತ ಬಾಲಕನ ಕುಟುಂಬಸ್ಥರಿಗೆ ಸರ್ಕಾರ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಒಟ್ಟಾರೆ, ಜಿಲ್ಲೆಯಲ್ಲಿ ಬರ ಮತ್ತು ರಣಬಿಸಿಲಿಗೆ ಬೇಸತ್ತಿದ್ದ ಜನತೆಗೆ ಮಳೆರಾಯ ತಂಪೆರೆದರೆ, ಸಿಡಿಲಿಗೆ ಇಬ್ಬರು ಸಾವನ್ನಪ್ಪಿರುವುದು ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟುವಂತೆ ಮಾಡಿದೆ.
ಇದನ್ನೂ ಓದಿ: ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಸುರಿದ ಗುಡುಗುಸಹಿತ ಮಳೆ - Hubballi Rain