ಹಾವೇರಿ: ಉತ್ತರ ಕರ್ನಾಟಕದ ಪ್ರಮುಖ ಜಾನುವಾರು ಮಾರುಕಟ್ಟೆಗಳ ಪೈಕಿ ಹಾವೇರಿ ಜಾನುವಾರು ಮಾರುಕಟ್ಟೆಯೂ ಒಂದು. ಇಲ್ಲಿಗೆ ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಿಂದ ರೈತರು ಜಾನುವಾರು ಮಾರಾಟ ಮತ್ತು ಖರೀದಿಗೆ ಆಗಮಿಸುತ್ತಾರೆ. ಬೆಳಗಾವಿ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಂದಲೂ ಇಲ್ಲಿ ವಹಿವಾಟು ನಡೆಸಲು ರೈತರು ಬರುತ್ತಾರೆ.
ಪ್ರಸ್ತುತ ವರ್ಷ ಉತ್ತಮವಾಗಿ ಮುಂಗಾರುಪೂರ್ವ ಮಳೆಯಾಗುತ್ತಿರುವುದು ರೈತರಲ್ಲಿ ಸಂತಸ ತಂದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯಾಗಿದ್ದರಿಂದ ರೈತರು ಇದೀಗ ಎತ್ತುಗಳ ಮಾರಾಟ ಹಾಗು ಖರೀದಿಗೆ ಜಾನುವಾರು ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಎತ್ತುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ರೈತರು ಎತ್ತುಗಳನ್ನು ಖರೀದಿಸದೇ ಮರಳುತ್ತಿರುವ ದೃಶ್ಯ ಕಂಡುಬಂತು.
ರೈತರು ಹೇಳಿದ್ದೇನು?: 15 ದಿನಗಳ ಹಿಂದೆ ಇದೇ ಮಾರುಕಟ್ಟೆಯಲ್ಲಿ 80 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದ್ದ ಎತ್ತುಗಳ ದರ ಇದೀಗ ಲಕ್ಷ ದಾಟಿದೆ. ಎರಡು ವಾರಗಳಿಂದ ಮಾರುಕಟ್ಟೆಯಲ್ಲಿ ಜಾನುವಾರುಗಳ ದರ ಹೆಚ್ಚಾಗಿದ್ದು, ಇದಕ್ಕೆ ಉತ್ತಮ ಮುಂಗಾರುಪೂರ್ವ ಮಳೆಯಾಗಿದ್ದೇ ಕಾರಣವಾಗಿದೆ. ಶೇ.25ರಷ್ಟು ರೈತರು ಈಗಾಗಲೇ ಬಿತ್ತನೆ ಮಾಡಿದ್ದಾರೆ. ಬೆಳೆ ಮೊಳಕೆಯೊಡೆದು ಬೆಳೆಯುತ್ತಿದ್ದಂತೆ ಎಡೆಕುಂಟಿ ಹೊಡೆಯಲು, ಚಕ್ಕಡಿ ಸಾಗಿಸಲು ಹಾಗು ವಿವಿಧ ಕಾರಣಗಳಿಗಾಗಿ ಎತ್ತುಗಳು ಬೇಕೇ ಬೇಕು. ಹೀಗಾಗಿ ಎತ್ತುಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ ಎಂದು ರೈತರು ತಿಳಿಸಿದರು.
ಉತ್ತಮ ಮುಂಗಾರು ಮಳೆಯಾಗಿ ಬೆಳೆ ಸರಿಯಾಗಿ ಬಂದರೆ, ರೈತರು ಎತ್ತುಗಳನ್ನು ಮಾರಾಟ ಮಾಡದೇ ತಾವೇ ಜೋಪಾನ ಮಾಡುತ್ತಾರೆ. ಆದರೆ, ಕಳೆದ ವರ್ಷ ಬರಗಾಲ ಬಂದಿದ್ದರಿಂದ ಎತ್ತುಗಳಿಗೆ ಮೇವು, ನೀರಿಲ್ಲದೆ ಹೆಚ್ಚಿನ ರೈತರು ಕಡಿಮೆ ದರಕ್ಕೆ ಮಾರಾಟ ಮಾಡಿದ್ದರು.
ಎತ್ತುಗಳ ಖರೀದಿ ಹೇಗೆ ಗೊತ್ತೇ?: ಎತ್ತುಗಳನ್ನು ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸುವ ಮುನ್ನ ಅವುಗಳ ಹಲ್ಲುಗಳ ಪರೀಕ್ಷೆ ಮಾಡಲಾಗುತ್ತದೆ. ನಂತರ ಎಡೆಕುಂಟಿ ಹೊಡೆದು ನೋಡಲಾಗುತ್ತದೆ. ಎಡ ಎತ್ತು ಬಲಕ್ಕೆ, ಬಲದ ಎತ್ತು ಎಡಕ್ಕೆ ಕಟ್ಟಿ ಎಡೆಕುಂಟಿ ಹೊಡೆಯಲಾಗುತ್ತದೆ. ಎತ್ತುಗಳ ಮೇಲಿರುವ ಸುಳಿಗಳನ್ನು ನೋಡಿ ಅಂತಿಮವಾಗಿ ಖರೀದಿ ಪ್ರಕ್ರಿಯೆ ನಡೆಯುತ್ತದೆ.
ಹಾವೇರಿ ಜಾನುವಾರು ಮಾರುಕಟ್ಟೆ ಪ್ರಸ್ತುತ ರಾಸುಗಳಿಂದ ತುಂಬಿದ್ದು, ಇನ್ನು ಎರಡ್ಮೂರು ತಿಂಗಳು ದರಗಳು ಸ್ಥಿರವಾಗಿರಲಿವೆ. ಮುಂದೆ ಮಳೆಯಾಗುವುದರ ಮೇಲೆ ಎತ್ತುಗಳ, ಆಕಳುಗಳು ಬೇಡಿಕೆ ನಿರ್ಧಾರವಾಗುತ್ತದೆ ಎಂದು ರೈತರು ಹೇಳಿದ್ದಾರೆ.
ಇದನ್ನೂ ಓದಿ: ಟಿಕೆಟ್ ವಿಚಾರಕ್ಕೆ ಫೈಟ್: ಕೈ-ಕೈ ಮಿಲಾಯಿಸಿದ ಕಾನ್ಸ್‌ಟೇಬಲ್, ಕಂಡಕ್ಟರ್ - Fight Over Bus Ticket