ಚಾಮರಾಜನಗರ: ಕೇರಳದ ಮಾನಂದವಾಡಿಯಿಂದ ಸೆರೆ ಹಿಡಿದು ತಂದ ತನ್ನೀರು ಎಂಬ ಕಾಡಾನೆಯು ಬಂಡೀಪುರ ಅಭಯಾರಣ್ಯದ ರಾಂಪುರ ಆನೆ ಶಿಬಿರದಲ್ಲಿ ಹೃದಯಾಘಾತ ಮತ್ತು ಟ್ರಾಮಾ (ಶಾಕ್) ಕಾರಣದಿಂದ ಮೃತಪಟ್ಟಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಡಾ ಪಿ ರಮೇಶ್ ಕುಮಾರ್ ತಿಳಿಸಿದ್ದಾರೆ.
ಹಾಸನದ ಬೇಲೂರು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಹಾವಳಿ ಮಾಡುತ್ತಿದ್ದ ತನ್ನೀರು ಎಂಬ ಕಾಡಾನೆಯನ್ನು ಜ.16 ರಂದು ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಬಂಡೀಪುರ ಹುಲಿ ಯೋಜನೆಯ ಮೂಲೆಹೊಳೆ ವಲಯಕ್ಕೆ ಬಿಡಲಾಗಿತ್ತು. ನಂತರ ಆನೆ ಕಬಿನಿ ನದಿ ದಾಟಿ ಕೇರಳದ ಮಾನಂದವಾಡಿ ಅರಣ್ಯ ಪ್ರದೇಶದ ಮಾರ್ಗವಾಗಿ ಫೆ.1ರಂದು ಜನವಸತಿ ಪ್ರದೇಶ ಮಾನಂದವಾಡಿ ನಗರದ ತಾಲೂಕು ಕಚೇರಿಯ ಕಾಂಪೌಂಡ್ಗೆ ನುಗ್ಗಿತ್ತು. ಈ ವೇಳೆ ಜನಸಾಮಾನ್ಯರಿಗೆ ತೊಂದರೆ ನೀಡುತ್ತಿದ್ದ ಕುರಿತು ಕೇರಳ ಅರಣ್ಯಾಧಿಕಾರಿಗಳು ಬಂಡೀಪುರ ಅರಣ್ಯಾಧಿಕಾರಿಗೆ ಮಾಹಿತಿ ನೀಡಿದ್ದರು.
ಕಾಡಾನೆಯನ್ನು ಪುನಃ ಕಾಡಿಗೆ ಹಿಮ್ಮೆಟ್ಟಿಸಲು ಯಾವುದೇ ಸಾಧ್ಯತೆ ಇಲ್ಲದ ಹಾಗೂ ಆನೆಯು ಮತ್ತೆ ಜನವಸತಿ ಪ್ರದೇಶಕ್ಕೆ ಹಿಂತಿರುಗುವ ಸಾಧ್ಯತೆ ಹೆಚ್ಚಿತ್ತು. ಹೀಗಾಗಿ ಕೇರಳ ಹಾಗೂ ಕರ್ನಾಟಕ ಎರಡು ರಾಜ್ಯಗಳ ಅಧಿಕಾರಿಗಳು ಚರ್ಚಿಸಿ ಕಾಡಾನೆಯನ್ನು ಸೆರೆ ಹಿಡಿದು ಬಂಡೀಪುರ ವಿಭಾಗದಲ್ಲಿ ಬಿಡಲು ತೀರ್ಮಾನಿಸಿದ್ದರು. ಅದರ ಪ್ರಕಾರ ಫೆ.2ರಂದು ಕೇರಳ ಅರಣ್ಯಾಧಿಕಾರಿಗಳು ಹಾಗೂ ಪಶು ವೈಧ್ಯಾಧಿಕಾರಿಗಳ ತಂಡವು ಆನೆಯನ್ನು ಮಾನಂದವಾಡಿ ನಗರದಲ್ಲಿ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿದು, ಬಂಡೀಪುರಕ್ಕೆ ರವಾನಿಸಿದ್ದರು. ಆದರೆ ಆನೆ ಕರೆತರುತ್ತಿದ್ದ ಮಾರ್ಗದಲ್ಲಿಯೇ ಹೃದಯಾಘಾತ ಮತ್ತು ಟ್ರಾಮಾ ಕಾರಣದಿಂದ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಆನೆ ಮೃತಪಟ್ಟಿರುವುದನ್ನು ಇಂದು (ಫೆ.3) ನಸುಕಿನ ಜಾವ 1:30ರ ಸಮಯದಲ್ಲಿ ರಾಂಪುರ ಸಾಕಾನೆ ಶಿಬಿರಕ್ಕೆ ಬಂದ ಕೇರಳದ ಮೂವರು ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಂಡೀಪುರ ಹುಲಿ ಯೋಜನೆಯ ಇಲಾಖಾ ಪಶು ವೈಧ್ಯಾಧಿಕಾರಿ, ಬಂಡೀಪುರ ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿ ಗಮನಿಸಿದ್ದರು. ಬಂಡೀಪುರ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಕುಮಾರ್, ಹೆಡಿಯಾಲ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ. ಪರಮೇಶ್ ಅವರಿಗೆ ಮಾಹಿತಿ ನೀಡಿದ್ದರು. ನಂತರ ಪಶು ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ ಕಾಡಾನೆಯು ಹೃದಯಾಘಾತ ಮತ್ತು ಟ್ರಾಮಾ ಕಾರಣದಿಂದ ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ.
ಮೃತ ತನ್ನೀರು ಆನೆಯ ದೇಹದ ಕೆಲವು ಅಂಗಾಂಗಳ ಭಾಗಗಳನ್ನು ಸಂಗ್ರಹಿಸಿ ಹೆಚ್ಚಿನ ಮಾಹಿತಿಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಳಾಗಿದೆ. ಬಳಿಕ ಆನೆಯ ಮೃತದೇಹವನ್ನು ಇಲಾಖೆ ನಿಯಮಾನುಸಾರ ಅದೇ ಸ್ಥಳದಲ್ಲಿ ಬಿಡಲಾಯಿತು.
ಇದನ್ನೂ ಓದಿ: ಮೈಸೂರು: ಒಂಟಿ ಸಲಗದ ತುಳಿತಕ್ಕೆ ಸಾವನ್ನಪ್ಪಿದ ವೃದ್ಧ