ಬೆಂಗಳೂರು: ಗ್ಯಾರಂಟಿಗಳ ಹೆಸರಲ್ಲಿ ಮತದಾರರಿಗೆ ಆಮಿಷವೊಡ್ಡುವ ಮೂಲಕ ಚುನಾವಣಾ ಅಕ್ರಮ ಎಸಗಿ ವಿಧಾನಸಭಾ ಚುನಾಣೆಯಲ್ಲಿ ವರುಣಾ ಕ್ಷೇತ್ರದಿಂದ ಗೆದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಆಗಸ್ಟ್ 31ಕ್ಕೆ ಮುಂದೂಡಿತು.
ವರುಣಾ ಹೋಬಳಿಯ ಕೂಡನಹಳ್ಳಿ ಗ್ರಾಮದ ನಿವಾಸಿ ಕೆ.ಎಂ. ಶಂಕರ್ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ವಾದ ಮಂಡಿಸಿ, "ಚುನಾವಣಾ ಆಮಿಷದ ವಿಚಾರವಾಗಿ ಸುಪ್ರೀಂ ಕೋರ್ಟ್ನಲ್ಲಿರುವ ಪ್ರಕರಣಗಳು ಹಾಗೂ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಆಧರಿಸಿ ವಾದ ಮಂಡಿಸಬೇಕಿದೆ. ಅಲ್ಲದೇ ಕೆಲವೊಂದು ದಾಖಲೆಗಳನ್ನು ನ್ಯಾಯಪೀಠದ ಮುಂದೆ ಮಂಡಿಸಬೇಕಿದೆ. ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಿ ವಾದ ಮಂಡಿಸುತ್ತೇನೆ" ಎಂದು ಮನವಿ ಮಾಡಿದರು.
ಕಾಲಾವಕಾಶ ನೀಡಿದರೆ ತಮ್ಮದೇನು ಆಕ್ಷೇಪ ಇಲ್ಲ ಎಂದು ಸಿದ್ದರಾಮಯ್ಯ ಪರ ಹಾಜರಿದ್ದ ವಕೀಲೆ ಲೀಲಾ ದೇವಾಡಿಗ ಹೇಳಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆ ಮುಂದೂಡಿತು.