ಬೆಂಗಳೂರು: ಡೆತ್ ನೋಟ್ ಬರೆದಿಟ್ಟು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ. ಮನೆಯಲ್ಲಿ ನೇಣು ಬಿಗಿದುಕೊಂಡು ನರಸಿಂಹಮೂರ್ತಿ (59) ಎಂಬವರು ಸಾವನ್ನಪ್ಪಿದ್ದು, ಸಂಬಂಧಿ ಸತೀಶ್ ಎಂಬವರ ವಿರುದ್ಧ ಡೆತ್‌ನೋಟ್‌ನಲ್ಲಿ ಆರೋಪ ಮಾಡಿದ್ದಾರೆ.
ಹೊಸಕೋಟೆಯ ಜಡಗನಹಳ್ಳಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿದ್ದ ನರಸಿಂಹಮೂರ್ತಿ, ಜನವರಿ 15ರಂದು ಸೇವೆಯಿಂದ ನಿವೃತ್ತಿ ಹೊಂದಬೇಕಿತ್ತು. ಮಾಗಡಿ ರಸ್ತೆಯ ತುಂಗಾನಗರದಲ್ಲಿ ನರಸಿಂಹಮೂರ್ತಿ 25 ಗುಂಟೆ ಜಮೀನು ಹೊಂದಿದ್ದರು. ಆ ಜಮೀನನ್ನು 10 ಕೋಟಿ ರೂ.ಗೆ ಖರೀದಿಸುವುದಾಗಿ ಹೇಳಿದ್ದ ಸತೀಶ್ 10 ಲಕ್ಷ ರೂ ನೀಡಿ ಒಪ್ಪಂದ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಆದರೆ ಉಳಿದ ಹಣ ನೀಡದೆ ಜಮೀನು ಲಪಟಾಯಿಸಿದ್ದು, ಹಣ ಕೇಳಲು ಹೋದಾಗ ಧಮ್ಕಿ ಹಾಕಿದ್ದಾರೆ ಎಂದು ನರಸಿಂಹಮೂರ್ತಿ ಆರೋಪಿಸಿದ್ದಾರೆ.
ಬ್ಯಾಡರಹಳ್ಳಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಮೃತರ ಕುಟುಂಬದವರಿಂದ ಮಾಹಿತಿ ಪಡೆದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಮಾತನಾಡಿ, "ಇಂದು ಬೆಳಗ್ಗೆ ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಹಾಗೂ ಅವರ ಕುಟುಂಬದವರೊಂದಿಗೆ ಸಿವಿಲ್ ವ್ಯಾಜ್ಯ ಇತ್ತಂತೆ. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಡೆತ್ನೋಟ್ ಬರೆದಿಟ್ಟಿದ್ದು, ತನಿಖೆ ಮಾಡುತ್ತೇವೆ" ಎಂದರು.
ಇದನ್ನೂ ಓದಿ: ಸಾಲ ಮರುಪಾವತಿ ಕಿರುಕುಳಕ್ಕೆ ವ್ಯಕ್ತಿ ಆತ್ಮಹತ್ಯೆ: ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅರೆಸ್ಟ್ - MCC BANK CHAIRMAN ARRESTED