ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಪುತ್ರ ಪ್ರಜ್ವಲ್ ರೇವಣ್ಣ ಬಂಧನದ ಬೆನ್ನಲ್ಲೇ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಇಂದು ಬೆಳಗ್ಗೆ ನಗರದ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಪತ್ನಿ ಭವಾನಿ ಅವರ ಜಾಮೀನು ಅರ್ಜಿ ತೀರ್ಪು ಇಂದೇ ಪ್ರಕಟವಾಗಲಿದೆ. ಅದರ ಜೊತೆಗೆ ಪುತ್ರನ ಬಂಧನವೂ ಆಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಹೀಗಾಗಿ ಕಾನೂನು ಹೋರಾಟದಲ್ಲಿ ಬಲ ಸಿಗಲಿ ಎಂದು ರೇವಣ್ಣ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
"ಕೈ ಮುಗಿಯುತ್ತೇನೆ, ಏನೂ ಬೇಡ ಬಿಡಣ್ಣಾ": ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಲು ರೇವಣ್ಣ ನಿರಾಕರಿಸಿದರು. "ಕೈ ಮುಗಿಯುತ್ತೇನೆ. ಏನೂ ಬೇಡ ಬಿಡಣ್ಣಾ" ಎನ್ನುತ್ತಾ ದೇವಸ್ಥಾನದಿಂದ ನಿರ್ಗಮಿಸಿದರು. ಈ ಸಂದರ್ಭದಲ್ಲಿ ಅವರ ಮುಖದಲ್ಲಿ ಆತಂಕ, ಒತ್ತಡ ಕಾಣುತ್ತಿತ್ತು.
ವಕೀಲರೊಂದಿಗೆ ಸಮಾಲೋಚನೆ: ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಹಿರಿಯ ವಕೀಲರ ತಂಡದೊಂದಿಗೆ ಕಳೆದ ರಾತ್ರಿ ರೇವಣ್ಣ ಸಮಾಲೋಚನೆ ನಡೆಸಿದ್ದಾರೆ. ಪತ್ನಿಯ ಜಾಮೀನು ಅರ್ಜಿ ವಿಚಾರವಾಗಿ ವ್ಯತಿರಿಕ್ತ ತೀರ್ಪು ಬಂದಲ್ಲಿ, ಮುಂದಿರಿಸಬೇಕಾದ ಹೆಜ್ಜೆ, ಕಾನೂನು ಹೋರಾಟದ ಆಯ್ಕೆ ಹಾಗು ಮೇಲ್ಮನವಿ ಸಲ್ಲಿಕೆ ಇತ್ಯಾದಿಗಳ ಕುರಿತು ಚರ್ಚಿಸಿದ್ದಾರೆ. ಇದರ ಜೊತೆಗೆ ಪುತ್ರನ ಜಾಮೀನು ಅರ್ಜಿ ಸಲ್ಲಿಕೆ, ಮುಂದಿನ ಕಾನೂನು ಹೋರಾಟದ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಮೂಲಗಳಿಂದು ತಿಳಿದುಬಂದಿದೆ.
ಇದನ್ನೂ ಓದಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್, ವಿಮಾನ ನಿಲ್ದಾಣದಲ್ಲಿ ಬಂಧಿಸಿದ SIT - SIT Arrests Prajwal Revanna