ಮೈಸೂರು: ''ಸಿದ್ದರಾಮಯ್ಯನವರದು ಯಾವಾಗಲೂ ದೇವೇಗೌಡರ ಭಜನೆ ಮಾಡುವುದೇ ಕೆಲಸ ಆಗಿದೆ. ಸಿಎಂ ಜವಾಬ್ದಾರಿ ಜೊತೆಗೆ ಜ್ಯೋತಿಷ್ಯ ಕೂಡ ಕಲಿತಿರಬೇಕು. ಅವರು ಈಗ ದೊಡ್ಡ ಜ್ಯೋತಿಷಿ ಆಗಿದ್ದಾರೆ. ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಇದ್ದಾಗ ನಾವು ಮೈತ್ರಿ ಧರ್ಮ ಪಾಲನೆ ಮಾಡಿದ್ದೇವೆ. ನಾನು ಮೈತ್ರಿ ಧರ್ಮ ಮುರಿದಿದ್ದರೆ ಕಾಂಗ್ರೆಸ್ ಒಂದು ಸ್ಥಾನವೂ ಬರ್ತಾ ಇರಲಿಲ್ಲ'' ಎಂದು ಮಂಡ್ಯ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಇಂದು ಎನ್ಡಿಎ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಒಡೆಯರ್ ಅವರು ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ವೇಳೆ ಅವರಿಗೆ ಹೆಚ್ಡಿಕೆ ಸಾಥ್ ನೀಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ನಾನು ಮೈತ್ರಿ ಧರ್ಮ ಪಾಲನೆ ಮಾಡಬೇಡಿ ಅಂತಾ ಹೇಳಿದ್ರೆ ಕಳೆದ ಬಾರಿಯೇ ಬಿಜೆಪಿ ಬೆಂಗಳೂರು ಗ್ರಾಮಾಂತರದಲ್ಲಿ ಗೆಲ್ಲುತ್ತಿತ್ತು. ನಮ್ಮ ಭದ್ರಕೋಟೆಗೆ ಕಾಂಗ್ರೆಸ್ ನುಗ್ಗಲು ಆಗ ನಾನೇ ಅವಕಾಶ ಮಾಡಿಕೊಟ್ಟು ಬಿಟ್ಟೆ. ಆಗ ಸಾಲ ಮಾಡಿ ಪಕ್ಷ ಸಂಘಟನೆ ಮಾಡಿದ್ದು ನಾವು. ಪೆಂಡಾಲ್ ಹಾಕಿ ವೇದಿಕೆ ಹಾಕಿದ್ದು ನಾವು. ಬಂದು ಭಾಷಣ ಮಾಡಿ ಹೋಗ್ತಾ ಇದ್ದಿದ್ದು ಸಿದ್ದರಾಮಯ್ಯ'' ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
''ಜೆಡಿಎಸ್ ಸಂಘಟನೆಗೆ ಸಿದ್ದರಾಮಯ್ಯ ಯಾವತ್ತು ಸಾಲ ಮಾಡಿದ್ದಾರೆ? ಹೆಚ್.ಡಿ. ದೇವೇಗೌಡರು ಪ್ರತಾಪ್ ಸಿಂಹ ಟಿಕೆಟ್ ತಪ್ಪಿಸಿದ್ರು ಎಂಬುದು ಜಗತ್ತಿನ ಎಂಟನೇ ಅದ್ಛುತವಾಗಿದೆ. 2004 ರಲ್ಲಿ ಬಿಜೆಪಿಯ ಅರುಣ್ ಜೇಟ್ಲಿ ನನಗೆ ಸಿಎಂ ಆಫರ್ ಕೊಟ್ಟಿದ್ದರು. ಆಗ ಸಿದ್ದರಾಮಯ್ಯ ಅವರನ್ನು ಬಿಜೆಪಿ ಕೇಳಿರಲಿಲ್ಲ'' ಎಂದು ಗರಂ ಆದರು.
''ಒಕ್ಕಲಿಗರ ಮೇಲೆ ಈಗ ಮಮತೆ ಬಂದಿದೆ. ಸಿದ್ದರಾಮಯ್ಯ ಕಣ್ಣೀರು ಕೃತಕ ಹಾಕುತ್ತಾರೆ. ನಮ್ಮ ಕಣ್ಣೀರು ಭಾವನಾತ್ಮಕ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಇವರು ಏನೂ ಕಡಿದು ಕಟ್ಟೆ ಹಾಕಿದ್ದಾರೆ ಹೇಳಲಿ. ಬಾದಾಮಿ ಕ್ಷೇತ್ರಕ್ಕೆ ಏನು ಕೊಟ್ಟರು? ನಾನು ಸಿಎಂ ಆಗಿದ್ದಾಗ ಇವರಂತೆ ನನ್ನ ಮಗನಿಗೆ ಕ್ಷೇತ್ರದ ಜವಾಬ್ದಾರಿ ಕೊಟ್ಟಿರಲಿಲ್ಲ. ಯಡಿಯೂರಪ್ಪಗೆ ಅವತ್ತು ನಮ್ಮ ಸರಕಾರ ಬೀಳಿಸಲು ಸಹಾಯ ಮಾಡಿದ್ದು ಯಾರು? ಸಿದ್ದರಾಮಯ್ಯ ಚಿತಾವಣೆ ಇರಲಿಲ್ವಾ. ಸಿದ್ಧವನದಲ್ಲಿ ಸಿದ್ಧ ಔಷಧ ಸಿದ್ಧ ಮಾಡಿದ್ದು ಯಾರು? ಸಿದ್ದರಾಮಯ್ಯ ಮಾತಲ್ಲಿ ಬರೀ ಗರ್ವ ತುಂಬಿರುತ್ತೆ. ವಿಧಾನಾಸೌಧದಲ್ಲೇ ಮೈಸೂರು ಪೈಲ್ವಾನ್ ಥರ ತೊಡೆ ತಟ್ಟಿ ಗರ್ವ ತೋರಿಸಿದ್ದು ಯಾರು? ಕಾಂಗ್ರೆಸ್ ಸರ್ಕಾರ ನಿತ್ಯ ಜಾತಿ ರಾಜಕಾರಣ ಮಾಡುತ್ತಿದೆ'' ಎಂದು ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.
ಸಂಸದೆ ಸುಮಲರಾ ಅವರ ನಿರ್ಧಾರಕ್ಕೂ ಮುನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಕುಮಾರಸ್ವಾಮಿ ''ಮಂಡ್ಯದ ನೆಲದಲ್ಲೇ ಸುಮಲತಾ ತಮ್ಮ ನಿರ್ಧಾರ ಪ್ರಕಟಿಸುತ್ತಾರೆ. ನಿರ್ಣಯ ಸಕಾರಾತ್ಮಕವಾಗಿ ಇರುತ್ತೆ ಅಂದುಕೊಂಡಿದ್ದೇನೆ. ಮನೆಗೆ ಹೋದಾಗ ರಾಜಕೀಯ ಭಿನ್ನಾಭಿಪ್ರಾಯ ಮರೆತು ವಿಶ್ವಾಸ ಅಭಿಮಾನದಿಂದ ಮಾತಾಡಿದ್ದೇವೆ. ಅವರು ಸಹೋದರನ ರೀತಿ ಪ್ರೀತಿ ತೋರಿಸಿದ್ದಾರೆ'' ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: ಬಿಜೆಪಿ ಸೇರುತ್ತೇನೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಸಂಸದೆ ಸುಮಲತಾ ಘೋಷಣೆ - MP Sumalatha