ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಜೆಡಿಎಸ್ ಕೋರ್ ಕಮಿಟಿಯ ಮಹತ್ವದ ಸಭೆ ನಡೆಸಿದೆ. ಮಂಡ್ಯ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಮಂಡ್ಯ ಜಿಲ್ಲೆಯ ನಾಯಕರ ಜೊತೆ ಸಭೆ ನಡೆಸಿ ಸಂಜೆ ವೇಳೆಗೆ ಅಧಿಕೃತವಾಗಿ ಹೆಸರು ಪ್ರಕಟಿಸುವ ನಿರೀಕ್ಷೆ ಇದೆ.
ಜೆ.ಪಿ.ನಗರದ ನಿವಾಸದಲ್ಲಿ ಇಂದು ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ಜರುಗಿತು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಆಗಲಿದ್ಧಾರೆ. ಕೋಲಾರ ಕ್ಷೇತ್ರದ ಮುಖಂಡರ ಸಭೆ ಇದೆ. ಮೂವರ ಹೆಸರಗಳು ಪ್ರಸ್ತಾಪವಾಗಿವೆ. ಸಭೆ ನಡೆಸಿದ ನಂತರ ಸಂಜೆ ವೇಳೆಗೆ ಮೂರು ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ, ನಾನು ಹುಟ್ಟಿದ್ದು ಹಾಸನ ಜಿಲ್ಲೆಯಾದರೂ ನನಗೆ ರಾಜಕೀಯ ಜನ್ಮ ನೀಡಿದ್ದು ರಾಮನಗರ ಜಿಲ್ಲೆ. ಇದನ್ನು ನಾನೂ ಎಂದೂ ಮರೆಯಲ್ಲ. ನನ್ನ ಬಗ್ಗೆ ಅಪನಂಬಿಕೆ ಇಟ್ಟುಕೊಳ್ಳಬೇಡಿ. ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟು ಕೊಡುವುದಿಲ್ಲ. ನಿಮ್ಮ ಜೊತೆ ನಾನಿದ್ದೇನೆ ಎಂದು ಕ್ಷೇತ್ರದ ಕಾರ್ಯಕರ್ತರಿಗೆ ಮನವಿ ಮಾಡಿದ ಹೆಚ್ಡಿಕೆ, ಮಂಡ್ಯ ಕ್ಷೇತ್ರದ ಅಭಿವೃದ್ಧಿಗೆ ತಲೆಕೊಡಲು ಸಿದ್ಧ ಎನ್ನುವ ಮೂಲಕ ಮಂಡ್ಯದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸುಳಿವು ನೀಡಿದರು.
ಈ ಮೊದಲು ಮಂಡ್ಯದಲ್ಲಿ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಅಥವಾ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಬೇಕೆಂದು ತೀರ್ಮಾನ ಮಾಡಿದ್ದೆವು. ಆದರೆ, ನಿಖಿಲ್ ಕುಮಾರಸ್ವಾಮಿ ಸಹ ಸ್ಪರ್ಧೆ ಮಾಡಲ್ಲ ಎಂದಿದ್ದಾರೆ. ಜಿಲ್ಲೆಯ ಕಾರ್ಯಕರ್ತರು ನನ್ನನ್ನು ನಿಲ್ಲುವಂತೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಇಂದು ಸಂಜೆ ಮಂಡ್ಯ ಜಿಲ್ಲೆಯ ಮುಖಂಡರ ಸಭೆ ನಡೆಸಿ ಅಂತಿಮ ತೀರ್ಮಾನ ತಿಳಿಸುತ್ತೇನೆ ಎಂದು ಹೇಳಿದರು.
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಿಂದ ನಾವು ಮೂರು ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ದೇಶದೆಲ್ಲೆಡೆ ಮೋದಿ ಅಲೆ ಇದೆ. ಹೀಗಾಗಿ ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಲಿದ್ದಾರೆ. ಕೋಲಾರ ಹಾಲಿ ಸಂಸದ ಮುನಿಸ್ವಾಮಿ ಹಾಗೂ ಇತರ ಇತರ ಬಿಜೆಪಿ ನಾಯಕರು ಇಂದು ತಮ್ಮನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಅವರು ಸಹ ಬೆಂಬಲ ನೀಡಿದ್ದಾರೆ. ಕೋಲಾರಕ್ಕೆ ಮೂವರ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಅದರಲ್ಲಿ ಒಬ್ಬರ ಹೆಸರನ್ನು ಸಂಜೆಯೊಳಗೆ ಘೋಷಿಸುತ್ತೇವೆ ಎಂದು ತಿಳಿಸಿದರು.
ಸಮನ್ವಯ ಸಭೆ: ಮಾರ್ಚ್ 29ರಂದು ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ ಇದೆ. ಚುನಾವಣೆಗೆ ಈಗಾಗಲೇ 40 ಜನ ಸ್ಟಾರ್ ಪ್ರಚಾರಕರ ಪಟ್ಟಿ ಸಿದ್ಧಪಡಿಸಿದ್ದೇವೆ. ಅಲ್ಲದೇ ಬಿಜೆಪಿ - ಜೆಡಿಎಸ್ ನಡುವೆ ಸಮನ್ವಯಕ್ಕಾಗಿ ಸಭೆ ಕರೆದಿದ್ದೇವೆ. ಮಾ.29ರಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಭೆ ನಿಗದಿಯಾಗಿದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.
ಅಲ್ಲದೇ, ಮೈಸೂರಿನಲ್ಲಿ ಮಾ.27ರಂದು ಮೈತ್ರಿ ಅಭ್ಯರ್ಥಿಗಳ ಸಭೆ ಕರೆದಿದ್ದೇವೆ. ಬಿಜೆಪಿ, ಜೆಡಿಎಸ್ನ ಮುಖಂಡರು ಭಾಗಿಯಾಗಲಿದ್ದಾರೆ. ಮೈಸೂರು-ಕೊಡಗು, ಚಾಮರಾಜನಗರ ಕ್ಷೇತ್ರಗಳ ಪ್ರಚಾರ ಸಭೆ ನಡೆಯಲಿದೆ. ಮೈತ್ರಿ ಧರ್ಮ ಪಾಲನೆ ಬಗ್ಗೆ ನಮ್ಮ ನಾಯಕರಿಗೆ ತಿಳಿಯಲಿದ್ದೇವೆ. ಮೈತ್ರಿ ಹೇಗಿರಬೇಕು ಎಂಬ ಬಗ್ಗೆ ಚರ್ಚೆಯಾಗಿದೆ ಪ್ರಮುಖವಾಗಿ ಆರು ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಮೈತ್ರಿಕೂಟದಲ್ಲಿ ನಾವಿದ್ದೇವೆ ಎಂದರು.
ನಾಡಿನ ರೈತರ ಹಿತಕ್ಕಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಪ್ರಾದೇಶಿಕವಾದ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ನೆರೆ ರಾಜ್ಯಗಳಿಗೆ ಅನ್ಯಾಯವಾಗದಂತೆ ನಿರ್ಧಾರ ತೆಗೆದುಕೊಳ್ಳಬೇಕು. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದ್ದೇವೆ ಎಂದರು ಹೇಳಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್ಡಿಕೆ, ಕೇಂದ್ರ ಸರ್ಕಾರದ ಬಳಿ ಇವರಿಗೆ ಸರಿಯಾಗಿ ಮನವಿ ಮಾಡುವುದಕ್ಕೆ ಬರುವುದಿಲ್ಲ. ರಾಜ್ಯ ಸರ್ಕಾರ ತನ್ನ ಬಳಿಯೇ ನ್ಯೂನತೆ ಇಟ್ಟುಕೊಂಡಿದೆ. ಕೇಂದ್ರ ನೀಡಿದ 3 ಸಾವಿರ ಕೋಟಿ ರೂ. ಅನುದಾನ ಬಳಕೆ ಮಾಡಿಕೊಂಡಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ: ಮೋದಿಗೆ, ಸಿ.ಟಿ ರವಿಗೆ ಹೊಡೆಯಿರಿ ಎಂದು ನಾನು ಹೇಳಿಲ್ಲ, ನನ್ನ ಭಾಷಣ ಸರಿಯಾಗಿ ಕೇಳಿ: ಸಚಿವ ಶಿವರಾಜ್ ತಂಗಡಗಿ