ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಸೀಟು ಹಂಚಿಕೆ ಕುರಿತು ಇನ್ನೊಂದು ವಾರದಲ್ಲಿ ನಿರ್ಧಾರವಾಗುವ ಸಾಧ್ಯತೆ ಇದೆ, ಅಮಿತ್ ಶಾ, ನರೇಂದ್ರ ಮೋದಿ ನಮಗೆ ಎಷ್ಟು ಸ್ಥಾನ ಕೊಡುತ್ತಾರೋ ಅಷ್ಟಕ್ಕೆ ಒಪ್ಪಿಕೊಳ್ಳುತ್ತೇವೆ. ಎಲ್ಲೆಲ್ಲಿ ಎನ್ಡಿಎ ಅಭ್ಯರ್ಥಿಗಳ ಪರ ಕೆಲಸ ಮಾಡಿ ಎನ್ನುತ್ತಾರೋ ಅಲ್ಲಿ ಕೆಲಸ ಮಾಡುತ್ತೇವೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಶೇಷಾದ್ರಿಪುರಂನಲ್ಲಿರುವ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇವತ್ತು ಪ್ರಧಾನಿ ನರೇಂದ್ರ ಮೋದಿ 400 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ ನಾವು ಅವರ ಜೊತೆ ಇದ್ದೇವೆ. ತಮಿಳುನಾಡಿನಲ್ಲಿ ಸ್ಟಾಲಿನ್ ಮತ್ತು ಡಿಎಂಕೆ ಪ್ರತ್ಯೇಕ ಹೋರಾಟ ಮಾಡುತ್ತಿದ್ದಾರೆ ಅಲ್ಲಿ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ.
ನಮ್ಮ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಬಿಜೆಪಿ ಹೈಕಮಾಂಡ್ ನಾಯಕರಾದ ಅಮಿತ್ ಶಾ ಮತ್ತು ಜೆಪಿ ನಡ್ಡಾ ಜೊತೆ ಮಾತುಕತೆ ನಡೆಸಲಿದ್ದಾರೆ. ಅಂತಿಮವಾಗಿ ಪ್ರಧಾನಿ ಮೋದಿ ಕರ್ನಾಟಕದ ಸ್ಥಾನ ಹಂಚಿಕೆ ಕುರಿತು ತೀರ್ಮಾನ ಮಾಡಲಿದ್ದಾರೆ, ಕುಮಾರಸ್ವಾಮಿ ಪ್ರಧಾನವಾಗಿ ನಮ್ಮ ಪಕ್ಷದಿಂದ ನಿರ್ಧಾರಕ್ಕೆ ಬರಲಿದ್ದಾರೆ, ಅಮಿತ್ ಶಾ ಜೊತೆ ಚರ್ಚಿಸಿದ ನಂತರ ಇದರ ಬಗ್ಗೆ ತೀರ್ಮಾನವಾಗಲಿದೆ, ಇನ್ನೊಂದು ವಾರದಲ್ಲಿ ಸ್ಥಾನ ಹಂಚಿಕೆ ಅಂತಿಮ ಆಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಾಜಪೇಯಿ ಸ್ವಂತ ಬಲದಿಂದ ಸರ್ಕಾರ ರಚಿಸಿರಲಿಲ್ಲ, ಮನಮೋಹನ್ ಸಿಂಗ್ ಅವರು ಕೂಡ ಸ್ವಂತ ಶಕ್ತಿಯಿಂದ ಸರ್ಕಾರ ರಚಿಸಿರಲಿಲ್ಲ, ಸ್ವಂತ ಶಕ್ತಿಯಿಂದ ಸರ್ಕಾರ ರಚಿಸಿದ್ದ ನರಸಿಂಹರಾವ್ ನಮಗೆ ಸಹಾಯ ಮಾಡಲು ಬರಲಿಲ್ಲ, ಆದರೆ ಈಗ ನಮ್ಮ ದೇಶದ ಸಮರ್ಥ ನಾಯಕ ಮೋದಿಯಾಗಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನ ಬರಬಹುದು ಎಂದಿದ್ದಾರೆ ಆ ಸ್ಥಿತಿ ಬಂದರೆ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸಲಿದ್ದಾರೆ ಎನ್ನುವ ವಿಶ್ವಾಸ ಇದೆ. ಪ್ರಸ್ತುತ ರಾಜ್ಯದಲ್ಲಿ ನಾವು ಅವರ ಜೊತೆ ಕೈಜೋಡಿಸಿದ್ದೇವೆ ಎಂದರು.
ರಾಜ್ಯದಲ್ಲಿ ಜೆಡಿಎಸ್ ಉಳಿಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ, ಮೈತ್ರಿ ಮೂಲಕ ಬಿಜೆಪಿ ಜೊತೆ ವಿಲೀನವಾಗಲಿದೆ ಎಂದಿದ್ದಾರೆ. ಆದರೆ, ಈ ಪಕ್ಷ ಉಳಿಸುವುದಕ್ಕೆ ಒಬ್ಬ ಸಮರ್ಥ ನಾಯಕ ಕುಮಾರಸ್ವಾಮಿ ಅಧ್ಯಕ್ಷ ಆಗಿದ್ದಾರೆ, ಸೀಟು ಹೊಂದಾಣಿಕೆ ಮಾಡಿಕೊಂಡು ಬಂದರೆ ಈ ಪಕ್ಷ ವಿಲೀನವಾಗುತ್ತದೆ. ಈ ಪಕ್ಷ ಉಳಿಯಲ್ಲ ಎನ್ನುತ್ತೀರಲ್ಲ ಸಿದ್ದರಾಮಯ್ಯ ಅವರೇ ನಿಮ್ಮ ಕಲ್ಪನೆ ಏನು? ನಿಮಗೆ ತಾಳ್ಮೆ ಇರಲಿ, ಮುಂದೆ ಬರಲಿರುವ ದಿನಗಳನ್ನು ನೀವು ಕಣ್ಣಿಂದ ನೋಡುತ್ತೀರಿ, ಜೆಡಿಎಸ್ ಮುಗಿಯುತ್ತದೆಯೋ ಅಥವಾ ಯಾರು ಮುಗಿಯುತ್ತಾರೆ ಎನ್ನುವುದನ್ನು ನೋಡಲು ನೀವೂ ಇರುತ್ತೀರಿ ನಾನೂ ಇರುತ್ತೇನೆ ಎಂದು ಚಾಟಿ ಬೀಸಿದರು.
ಇದನ್ನೂ ಓದಿ: ಡಿಕೆಶಿಗೆ ಬಿಗ್ ರಿಲೀಫ್: ಅಕ್ರಮ ಹಣ ವರ್ಗಾವಣೆ ಪ್ರಕರಣ ರದ್ದುಗೊಳಿಸಿದ ಸುಪ್ರೀಂ ಕೋರ್ಟ್