ಚಿಕ್ಕಮಗಳೂರು: 9 ವರ್ಷದ ಹೆಣ್ಣು ಮಗುವನ್ನು ಕೂಡಿಟ್ಟು ಆಸ್ತಿ ಬರೆಸಿಕೊಂಡಿರೆಲ್ಲಾ, ಅದಕ್ಕಾಗಿ ಕೈ ಬಲಪಡಿಸಬೇಕಾ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪರ ಇಂದು ಪ್ರಚಾರಕ್ಕೆ ಆಗಮಿಸಿದ್ದ ಅವರು, ಮೂಡಿಗೆರೆ ಪಟ್ಟಣದ ಅಡ್ಯಂತಾಯ ಬಯಲು ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಒಕ್ಕಲಿಗ ಸಮುದಾಯ ಹೆಚ್ಚಿರುವ ಕಡೆ ನನ್ನ ಕೈ ಬಲಪಡಿಸಿ ಎಂದು ಹೇಳುತ್ತಿದ್ದಾರೆ. ಅವರ ಕೈಯನ್ನು ಏಕೆ ಬಲಪಡಿಸಬೇಕು? ಎಂದು ಮಾಜಿ ಪ್ರಧಾನಿ ಪ್ರಶ್ನಿಸಿದರು.
ಅಮೆರಿಕದಲ್ಲಿ ದುಡಿದು ತಂದಿದ್ದ ಹಣದಲ್ಲಿ ಉದ್ಯಮಿಯೊಬ್ಬರು ಬಿಡದಿ ಬಳಿ ಐ.ಟಿ. ಕಂಪನಿ ಸ್ಥಾಪನೆ ಮಾಡಲು ಮುಂದಾಗಿದ್ದರು. ಅವರ ಈಗ ಹೆಸರು ಮರೆತಿರುವೆ. ಅದರ ಹಿಂದಿನ ದಿನ ಇವರು ಸುಳ್ಳು ಕ್ರಯಪತ್ರ ಸಿದ್ಧಡಿಸುತ್ತಾರೆ. ನನ್ನ ಬಳಿ ದಾಖಲೆ ಇದೆ. ಇಂತವರ ಕೈ ಬಲಪಡಿಸಬೇಕಾ? ಎಂದು ಪ್ರಶ್ನಿಸುವ ಮೂಲಕ ದೇವೇಗೌಡರು ವಾಗ್ದಾಳಿ ನಡೆಸಿದರು.
ಇನ್ನು, ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪರ ದೇವೇಗೌಡರು ಮೂಡಿಗೆರೆ ತಾಲೂಕಿನಲ್ಲಿ ಬುಧವಾರ ಅಬ್ಬರದ ಪ್ರಚಾರ ನಡೆಸಿದರು. ಪ್ರಚಾರಕ್ಕೂ ಮುನ್ನ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಶ್ರೀ ರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಸಾಥ್ ನೀಡಿದರು.
ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದೇನೆ - ಡಿಕೆಶಿ: 9 ವರ್ಷದ ಹೆಣ್ಣು ಮಗುವನ್ನು ಕರೆದೊಯ್ದು ಆಸ್ತಿ ಬರೆಸಿರುವುದಾಗಿ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್, ದಾಖಲೆ ಬಿಡುಗಡೆ ಮಾಡಲಿ. ತಪ್ಪು ಮಾಡಿದರೆ ತಲೆ ಬಾಗುತ್ತೇನೆ. ಅವರ ಚಿಲ್ಲರೆ ಹೇಳಿಕೆಗೆ ಪ್ರತಿಕ್ರಿಯಿಸಲ್ಲ. ಬಹಿರಂಗ ಚರ್ಚೆಗೆ ಕರೆದಿದ್ದೇನೆ. ಅಸೆಂಬ್ಲಿಯಲ್ಲಿ ಅದಕ್ಕೆ ಉತ್ತರ ಕೊಡುತ್ತೇನೆ ಎಂದು ತಿಳಿಸಿದ್ದಾರೆ.