ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ತಮ್ಮ ಕುಟುಂಬಸ್ಥರಿಗೆ ನಿವೇಶನಗಳ ಬದಲಿ ಹಂಚಿಕೆ ಸಂಬಂಧಿಸಿದಂತೆ ಅಧಿಕಾರ ದುರ್ಬಳಕೆ ಮತ್ತು ಭ್ರಷ್ಟಾಚಾರ ನಡೆಸಿರುವ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ನಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆಯಿತು.
ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ವಿಚಾರಣೆ ನಡೆಸಿದರು. ಮುಖ್ಯಮಂತ್ರಿಗಳ ಪರವಾಗಿ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು.
"ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿದೆ. ಶಾಸನಬದ್ಧ ಆದೇಶಗಳನ್ನು ಉಲ್ಲಂಘಿಸಲಾಗಿದೆ ಮತ್ತು ಸಚಿವ ಸಂಪುಟದ ಸಲಹೆಯನ್ನು ನಿರಾಕರಿಸಲಾಗಿದೆ. ಯಾವ ಕಾರಣಕ್ಕೆ ಅನುಮತಿ ನೀಡಲಾಗಿದೆ ಎಂಬ ಅಂಶವನ್ನು ವಿವರಿಸಿಲ್ಲ. ಈ ಅನುಮತಿ ರಾಜಕೀಯ ದುರುದ್ಧೇಶಗಳಿಂದ ಕೂಡಿದೆ. ರಾಜ್ಯ ಸರ್ಕಾರವನ್ನು ಅಸ್ಥಿರತೆ ಗೊಳಿಸುವ ಉದ್ದೇಶದಿಂದ ಕೂಡಿದೆ" ಎಂದು ಸಿಂಘ್ವಿ ನ್ಯಾಯಪೀಠಕ್ಕೆ ವಿವರಿಸಿದರು.
ಮುಂದುವರೆದು, "ರಾಜ್ಯಪಾಲರು ಸಚಿವ ಸಂಪುಟದ ನಿರ್ಧಾರಕ್ಕೆ ಬದ್ಧರಾಗಿರಬೇಕು. ಆದರೆ, ಎರಡು ಪುಟಗಳ ಸಣ್ಣ ಆದೇಶದಲ್ಲಿ ಒಂದು ಅಂಶವನ್ನು ಪ್ರಾಸಿಕ್ಯೂಷನ್‌ಗೆ ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಆ ಮೂಲಕ ಜನರಿಂದ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದ್ದಾರೆ" ಎಂದರು.
ಇದಕ್ಕೆ ನ್ಯಾಯಪೀಠ, "ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪಾತ್ರವಿಲ್ಲವೇ" ಎಂದು ಪ್ರಶ್ನಿಸಿತು. ಇದಕ್ಕೆ ಸಿಂಘ್ವಿ, "ನಿವೇಶನಗಳ ಮರು ಹಂಚಿಕೆ ಮಾಡಿರುವ ಪ್ರಕ್ರಿಯೆ ಈ ಹಿಂದಿನ ಸರ್ಕಾರದಲ್ಲಿ ನಡೆದಿದೆ. ಸಿದ್ದರಾಮಯ್ಯ ವಿರುದ್ದ ಯಾವುದೇ ದಾಖಲೆಗಳು ಕಂಡು ಬಂದಿಲ್ಲ. ಸಿದ್ದರಾಮಯ್ಯ ವಿರುದ್ಧ ಯಾವುದೇ ಪಾತ್ರವಿಲ್ಲ. ಅಲ್ಲದೆ, ಬಿಎನ್‌ಎಸ್‌ಎಸ್ ಸೆಕ್ಷನ್ 218ರ ಅಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ಆದರೆ, ಈ ಸೆಕ್ಷನ್ ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕಾದಲ್ಲಿ ನಿರ್ದಿಷ್ಟ ಅಪರಾಧವನ್ನು ಒಳಗೊಂಡಿರಬೇಕು. ಅಲ್ಲದೆ, ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ನಡೆದಿರಬೇಕು" ಎಂದು ಹೇಳಿದರು.
"ಅಲ್ಲದೆ, ಶೋಕಾಸ್ ನೋಟಿಸ್ ಜಾರಿ ಮಾಡಿರುವುದು ಅಬ್ರಾಹಂ ನೀಡಿರುವ ಅರ್ಜಿಗೆ ಸಂಬಂಧಿಸಿದ್ದಾಗಿದೆ. ಈ ಕುರಿತ ಸಚಿವ ಸಂಪುಟ ನಿರ್ಣಯ ತೆಗೆದುಕೊಂಡು ಮನವಿಯನ್ನು ತಿರಸ್ಕರಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಜತೆಗೆ, ಇನ್ನಿಬ್ಬರು ನೀಡಿರುವ ಮನವಿಗೆ ಸಂಬಂಧಿಸಿದಂತೆ ಶೋಕಾಸ್ ನೋಟಿಸ್‌ನಲ್ಲಿ ಉಲ್ಲೇಖಿಸಿಲ್ಲ. ಆದರೆ, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಸಂದರ್ಭದಲ್ಲಿ ಇತರೆ ಇಬ್ಬರು ದೂರುದಾರರಿಗೆ ಅನುಮತಿ ನೀಡಲಾಗಿದೆ. ಅಬ್ರಾಹಂ ದೂರು ಸಲ್ಲಿಸಿದ ದಿನವೇ ರಾಜ್ಯಪಾಲರು ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ, ರಾಜ್ಯಪಾಲರ ಮುಂದೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸುಮಾರು 12 ಅರ್ಜಿಗಳು ಬಾಕಿಯಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ರಾಜಕೀಯ ಉದ್ದೇಶವಾಗಿದೆ" ಎಂದು ವಿವರಿಸಿದರು.
"ಮುಖ್ಯಮಂತ್ರಿಗಳು ಗೈರಾಗಿರುವ ಸಚಿವ ಸಂಪುಟದಲ್ಲಿ ಕಾನೂನು ಬದ್ಧವಾಗಿ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಾಜ್ಯಪಾಲರು ಸ್ವತಂತ್ರ್ಯವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಆದರೆ, ಇದೆಲ್ಲವೂ ಸತ್ಯಕ್ಕೆ ದೂರವಾದ ಅಂಶಗಳಾಗಿವೆ" ಎಂದು ಪೀಠಕ್ಕೆ ವಿವರಿಸಿದರು.
"ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವುದಕ್ಕೂ ಮುನ್ನ ಕ್ಯಾಬಿನೆಟ್ ನಿರ್ಧಾರ ತೆಗೆದುಕೊಂಡಿದೆ. ಇದನ್ನು ರಾಜ್ಯಪಾಲರಿಗೆ ತಿಳಿಸಲಾಗಿದೆ. ಆದರೂ, ರಾಜ್ಯಪಾಲರು ಸಂಪುಟದ ನಿರ್ಧಾರವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಅಲ್ಲದೆ, ಮುಖ್ಯಮಂತ್ರಿಗಳ ವಿರುದ್ಧ ಯಾವ ಕಾರಣಕ್ಕೆ ಅನುಮತಿ ನೀಡಲಾಗುತ್ತಿದೆ ಎಂಬುದರ ಕುರಿತ ಕಾರಣಗಳನ್ನು ವಿವರಿಸಿಲ್ಲ. ಈ ಎಲ್ಲ ಅಂಶಗಳು ರಾಜ್ಯಪಾಲರ ಆದೇಶದಲ್ಲಿ ಉಲ್ಲೇಖವಾಗಬೇಕಿದೆ. ಆದರೆ, ವಿವೇಚನೆ ಬಳಸದೆ ಅನುಮತಿ ನೀಡಿದ್ದಾರೆ" ಎಂದು ಪೀಠಕ್ಕೆ ವಿವರಿಸಿದರು.
"ಸಂವಿಧಾನ ರಚನಾ ಸಭೆಯಲ್ಲಿ ರಾಜ್ಯಪಾಲರನ್ನು ಚುನಾವಣೆ ಮೂಲಕ ಆಯ್ಕೆ ಮಾಡುವಂತೆ ಒತ್ತಾಯಿಸಲಾಗಿತ್ತು. ಆದರೆ, ಅವರು ಒಂದು ಕತ್ತಿಯ ಪೆಟ್ಟಿಗೆ(ಸ್ಕಬ್ಬಾರ್ಡ್)ಯಲ್ಲಿ ಎರಡು ಖಡ್ಗಗಳನ್ನು ಇಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು ಎಂದು ಪೀಠಕ್ಕೆ ವಿವರಿಸಿದರು. ಅರ್ಜಿದಾರ ಸಿದ್ದರಾಮಯ್ಯ ವಿರುದ್ಧದ ಆರೋಪದ ಪ್ರಕರಣದಲ್ಲಿ 1992ರ ಸೆಪ್ಟಂಬರ್‌ನಲ್ಲಿ ಭೂಸ್ವಾಧೀನಕ್ಕೆ ನೋಟಿಫಿಕಷೇನ್ ಮಾಡಲಾಗಿದೆ. 1998ರಲ್ಲಿ ಡಿನೋಟಿಫಿಕೇಷನ್ ಮಾಡಲಾಗಿದೆ".
"2004ರಲ್ಲಿ ಅರ್ಜಿದಾರರ ಪತ್ನಿಯ ತಮ್ಮನ ಹೆಸರಿಗೆ ಮಾರಾಟ ಕ್ರಯ ಮಾಡಲಾಗಿದೆ. 2005ರಲ್ಲಿ ಭೂಪರಿವರ್ತನೆ ಮಾಡಲಾಗಿದೆ. 2010ರಲ್ಲಿ ತನ್ನ ಹೆಂಡತಿಗೆ ಧಾನವಾಗಿ ನೀಡಲಾಗಿದೆ. ಈ ಎಲ್ಲ ಅವಧಿಯಲ್ಲಿ ಸಿದ್ದರಾಮಯ್ಯ ಅಧಿಕಾರದಲ್ಲಿ ಇರಲಿಲ್ಲ.ಆದರೆ, 2014ರಲ್ಲಿ ಪರಿಹಾರ ಕೋಡಿ ಅರ್ಜಿದಾರರ ಪತ್ನಿ ಮೂಡಾಗೆ ಮನವಿ ಮಾಡಿದ್ದಾರೆ. 2020ರಲ್ಲಿ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದು, ಇರರಿಗೆ ನೀಡುವಂತೆ ಪರಿಹಾರ ನೀಡುವುದಾಗಿ ಮೂಡಾ ತೀರ್ಮಾನ ತೆಗೆದುಕೊಂಡಿದೆ. ಈ ಸಂಬಂಧ ಮೂಡಾಗೆ ಮಾರಾಟ ಪತ್ರವನ್ನು 2002ರಲ್ಲಿ ಕಾರ್ಯಗತಗೊಳಿಸಿ 2024ರಲ್ಲಿ ಖಾಸಗಿ ದೂರು ದಾಖಲಾಗಿದೆ. ಈ ಎಲ್ಲ ಸಂದರ್ಭಗಳಲ್ಲಿ ಅರ್ಜಿದಾರರು ಅಧಿಕಾರದಲ್ಲಿರಲಿಲ್ಲ" ಎಂದು ವಿವರಿಸಿದರು.
"ಅಬ್ರಾಹಂ ದೂರಿಗೆ ಸಂಬಂಧಿಸಿದಂತೆ ಶೋಕಾಸ್ ನೋಟಿಸ್ ನೀಡಿದ್ದು, ಅದರಂತೆ ಕ್ಯಾಬಿನೆಟ್ ಮತ್ತು ಅರ್ಜಿದಾರ ಸಿದ್ದರಾಮಯ್ಯ ಪ್ರತ್ಯೇಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ" ಎಂದು ಪೀಠಕ್ಕೆ ತಿಳಿಸಿದರು.
ಈ ವೇಳೆ ರಾಜ್ಯಪಾಲರ ಕಚೇರಿಯ ಪರ ಹಾಜರಿದ್ದ ಸಾಲಿಸೇಟರ್ ಜನರಲ್ ತುಷಾರ್ ಮೆಹ್ತ, "ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿರುವ ಸಂಬಂಧ ರಾಜ್ಯಪಾಲರ ಕಚೇರಿ ಯಾವುದೇ ಅರ್ಜಿ ಬಾಕಿ ಉಳಿಸಿಕೊಂಡಿಲ್ಲ. ಈ ಸಂಬಂಧ ಎಲ್ಲಾ ದಾಖಲೆಗಳು ಹಾಗೂ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದಕ್ಕೆ ಸಂಬಂಧಿಸಿದ ನೋಟಿಂಗ್ ಮತ್ತು ಕಡತಗಳನ್ನು ಸಲ್ಲಿಸಲಾಗುವುದು. ಆರೋಪಿತ ಅಪರಾಧಗಳನ್ನು ತನಿಖೆ ನಡೆಸಲು ಅನುಮತಿಸಲಾಗಿದೆ. ಹೀಗಾಗಿ, ರಾಜ್ಯಪಾಲರ ಆದೇಶಕ್ಕೆ ತಡೆ ನೀಡಬಾರದು ಎಂದು ಕೋರಿದ್ದಾರೆ" ಎಂದು ಪೀಠಕ್ಕೆ ಮನವಿ ಮಾಡಿದರು.
ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ರಾಜ್ಯಪಾಲರ ಅಭಿಯೋಜನಾ ಮಂಜೂರಾತಿಗೆ ನಿಷೇಧ ಅಥವಾ ಪ್ರತಿಬಂಧಕಾದೇಶ ಮಾಡಬಾರದು.
ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಟಿ.ಜೆ.ಅಬ್ರಹಾಂ ಪರವಾಗಿ ವಕೀಲ ರಂಗನಾಥ್, ಸ್ನೇಹಮಯಿ ಕೃಷ್ಣ ಪರವಾಗಿ ವಕೀಲ ವಸಂತ್ ಕುಮಾರ್ ಹಾಜರಿದ್ದರು.
ಇದನ್ನೂ ಓದಿ: ಪ್ರಾಸಿಕ್ಯೂಷನ್‌ಗೆ ಅನುಮತಿ ಪ್ರಶ್ನಿಸಿ ಹೈಕೋರ್ಟ್ಗೆ ಸಿಎಂ ಸಿದ್ದರಾಮಯ್ಯ ಅರ್ಜಿ - CM Petition Against Prosecution