ಬೆಂಗಳೂರು: ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತಿಯ ಬಳಿಕ ರೈಲ್ವೆ ಕ್ಲೈಮ್ಸ್ ನ್ಯಾಯಾಧಿಕರಣದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಗಳಿಕೆ ರಜೆಯ ರಜಾ ನಗದೀಕರಣಕ್ಕೆ ನಿರಾಕರಿಸಿದ್ದ ಕೇಂದ್ರ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿತು.
ಹೈಕೋರ್ಟ್ ನ್ಯಾಯಮೂರ್ತಿಯಾಗಿ ನಿವೃತ್ತಿ ಬಳಿಕ ರೈಲ್ವೆ ಕ್ಲೈಮ್ಸ್ ನ್ಯಾಯಾಧಿಕರಣದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಬಳಿಕ ಹೆಚ್ಚುವರಿ ಪಿಂಚಣಿ ಮತ್ತು ಗಳಿಕೆ ರಜೆ ನಗದೀಕರಣಕ್ಕೆ ನಿರಾಕರಿಸಿ ಆದೇಶಿಸಿದ್ದ ಕೇಂದ್ರ ರೈಲ್ವೆ ಮಂಡಳಿ ಕ್ರಮವನ್ನು ಪ್ರಶ್ನಿಸಿ ನಿವೃತ್ತ ನ್ಯಾಯಮೂರ್ತಿ ಬಿ.ಪದ್ಮರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚ್ಚಿನ್ ಶಂಕರ್ ಮಗದಂ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಪಿಂಚಣಿಯು ನಿಗದಿತ ಮಿತಿಯನ್ನು ದಾಟಿದ್ದರೆ ಆ ಬಳಿಕ ಹೆಚ್ಚುವರಿ ಪಿಂಚಣಿ ಪಡೆಯಲು ನಿಯಮಗಳಲ್ಲಿ ಅವಕಾಶವಿಲ್ಲ. ಆದ್ದರಿಂದ ರೈಲ್ವೆ ನ್ಯಾಯಾಧಿಕರಣದ ಮುಖ್ಯಸ್ಥರಾಗಿ ಪಿಂಚಣಿ ನೀಡಬೇಕು ಎಂಬ ಅರ್ಜಿದಾರರ ವಾದ ಅಸಿಂಧುವಾಗಿದೆ. ಹಾಗೆಯೇ ಪಿಂಚಣಿಯ ನಿಯಮಗಳ ಪಾಲನೆ ಆಗಬೇಕು ಎಂದು ತನ್ನ ತೀರ್ಪಿನಲ್ಲಿ ಹೇಳಿದೆ.
ಆದರೆ, ರೈಲ್ವೆ ನ್ಯಾಯಾಧಿಕರಣದ ಮುಖ್ಯಸ್ಥರಾಗಿ ವಾರ್ಷಿಕವಾಗಿ 15 ಗಳಿಕೆ ರಜೆ ಪಡೆಯುವ ಅವಕಾಶವಿದ್ದು, ಅದರ ನಗದೀಕರಣದ ಬೇಡಿಕೆ ನ್ಯಾಯಬದ್ಧವಾಗಿದೆ. ಇದಕ್ಕೂ ಅವರು ಹೈಕೋರ್ಟ್ ನ್ಯಾಯಮೂರ್ತಿ ಆಗಿ ಪಡೆದಿರುವ ರಜಾ ನಗದೀಕರಣಕ್ಕೂ ಸಂಬಂಧ ಕಲ್ಪಿಸಲಾಗದು. ಆದ್ದರಿಂದ ಅರ್ಜಿದಾರರಿಗೆ ಬಾಕಿ ಇರುವ ರಜಾ ನಗದೀಕರಣ ಮಾಡಬೇಕು ಎಂದು ಪ್ರತಿವಾದಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ: ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಬಿ.ಪದ್ಮರಾಜ್ 2006ರ ಅಕ್ಟೋಬರ್‌ನಲ್ಲಿ ಸೇವೆಯಿಂದ ನಿವೃತ್ತಿಗೊಳ್ಳುತ್ತಿದ್ದಂತೆ ರೈಲ್ವೆ ಕ್ಲೈಮ್ಸ್ ನ್ಯಾಯಾಧಿಕರಣದ ಅಧ್ಯಕ್ಷರಾಗಿ ನೇಮಕಗೊಂಡು ತಮ್ಮ ಸೇವಾವಧಿ (65 ವರ್ಷ ವಯಸ್ಸು)2009ರ ಅಕ್ಟೋಬರ್ 5 ರಂದು ಪೂರ್ಣಗೊಳ್ಳುತ್ತಿದ್ದಂತೆ ಹುದ್ದೆಯಿಂದ ಬಿಡುಗಡೆಯಾಗಿದ್ದರು. ಈ ಸಂದರ್ಭದಲ್ಲಿ ಗಳಿಕೆ ರಜೆಯ ನಗದೀಕರಣ ಮತ್ತು ಹೆಚ್ಚುವರಿ ಪಿಂಚಣಿ ನೀಡಬೇಕು ಎಂದು ಮಾಡಿಕೊಂಡ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ ಹಿನ್ನೆಲೆಯಲ್ಲಿ 2012ರಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.