ಬೆಂಗಳೂರು: ರಾಮ ಮಂದಿರ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಬಳಸಿರುವ ಹೇಳಿಕೆ ಕುರಿತು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 'ಬಳಕೆ ಮಾಡಿರುವುದು ಕೀಳು ಭಾಷೆ. ಇದು ಶೋಭೆ ತರುವಂಥದ್ದಲ್ಲ' ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಮೌಖಿಕವಾಗಿ ಹೇಳಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಪರಿಣಾಮ ದಾಖಲಾಗಿದ್ದ ಪ್ರಕರಣ ರದ್ದುಕೋರಿ ಸಂಸದ ಅನಂತಕುಮಾರ್ ಹೆಗಡೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠ ಅಸಮಾಧಾನ ವ್ಯಕ್ತಪಡಿಸಿತು. ವಿಚಾರಣೆಯ ವೇಳೆ ನ್ಯಾಯಮೂರ್ತಿಗಳು, “ಅವರೊಬ್ಬ (ಅನಂತಕುಮಾರ್ ಹೆಗಡೆ) ಉತ್ತಮ ವಾಗ್ಮಿಯಾಗಿರಬಹುದು. ಇಲ್ಲಿ (ಪೀಠದಲ್ಲಿ) ಕುಳಿತು ನಾವು ಹೆಚ್ಚೇನು ಹೇಳಲಾಗದು. ಅವರು ನಮ್ಮ ಗೌರವಾನ್ವಿತ ಮುಖ್ಯಮಂತ್ರಿ, ನ್ಯಾಯಮೂರ್ತಿಗಳಿಗೂ ಅವರು ಗೌರವಾನ್ವಿತ ಮುಖ್ಯಮಂತ್ರಿ. ಅವರಿಗೂ ನಾವು ಗೌರವ ಕೊಡಲ್ಲ ಎಂದರೆ ಹೇಗೆ?. ಅವರು ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಹಾಗೆಲ್ಲಾ ಮಾತನಾಡಬಾರದು ಎಂದು ಮನವಿ ಮಾಡಿದ್ದಾರೆ ಎಂದು ನಿಮ್ಮ ಕಕ್ಷಿದಾರರಿಗೆ ತಿಳಿಸಲು ವಕೀಲರಿಗೆ ತಿಳಿಸಿದರು.
ಅವರಿಗೆ ನಾವು ಮತ ಹಾಕುತ್ತೇವೋ, ಇಲ್ಲವೋ ಅವರು ನಮ್ಮ ಮುಖ್ಯಮಂತ್ರಿ. ಏಕ ವಚನದಲ್ಲಿ ಮಾತನಾಡುವುದು ಶೋಭೆ ತರುವಂಥದಲ್ಲ. ಅವರಾಗಲಿ, ನೀವಾಗಲಿ ಹೀಗೆ ಮಾತನಾಡುವಂತಿಲ್ಲ. ಚುನಾವಣೆಯಲ್ಲಿ ಒಂದು ಪಕ್ಷ ಬರುತ್ತದೆ, ಮತ್ತೊಂದು ಹೋಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯೇ ಇರುವುದು ಹೀಗೆ ಎಂದು ಪೀಠ ತಿಳಿಸಿತು.
ಇದನ್ನೂ ಓದಿ: ಈಶ್ವರಪ್ಪ ವಿರುದ್ಧದ ಎಫ್ಐಆರ್ಗೆ ಹೈಕೋರ್ಟ್ ತಡೆ; ಆಕ್ಷೇಪಾರ್ಹ ಹೇಳಿಕೆ ನೀಡುವ ರಾಜಕಾರಣಿಗಳಿಗೆ ತರಾಟೆ
ಮಹಾಭಾರತದಲ್ಲಿ ಪಾಂಡವರಿಗೆ ಕಿರುಕುಳ ನೀಡುವ ಪ್ರಸಂಗ ಬರುತ್ತದೆ. ಆಗ ಯುದಿಷ್ಠಿರ ಕೌರವರ ಕುರಿತು ಹೇಳುತ್ತಾನೆ. ಹೊರಗಿನವರು ಬಂದಾಗ ನಾವೆಲ್ಲರೂ ಒಂದೇ, ನಮ್ಮೊಳಗೆ ನಾವು ಬೇರೆ ಬೇರೆ ಇರಬಹುದು ಎನ್ನುತ್ತಾನೆ. ರಾಜ, ರಾಜ್ಯ, ಸರ್ಕಾರದ ಬಗ್ಗೆ ಗೌರವ ಕಡಿಮೆಯಾಗಬಾರದು. ಇದು ಬೇರೆಯ ರೀತಿಯಲ್ಲಿ ಪರಿಣಾಮ ಉಂಟು ಮಾಡುತ್ತದೆ. ಶಾಲೆಯ ಮಕ್ಕಳು ಇದೆಲ್ಲವನ್ನೂ ನೋಡುತ್ತಾರೆ” ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಅಂತಿಮವಾಗಿ ಅರ್ಜಿದಾರರ ವಿರುದ್ಧ ಮುಂದಿನ ವಿಚಾರಣೆವರೆಗೆ ಯಾವುದೇ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಪೀಠವು ಆದೇಶಿಸಿತು. ಅಲ್ಲದೇ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಪದ ಬಳಕೆಗೆ ಸಂಬಂಧಿಸಿದಂತೆ ಅನಂತಕುಮಾರ್ ಹೆಗ್ಡೆ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153, 153ಎ, 505(2) ಅಡಿ ಪ್ರಕರಣ ದಾಖಲಿಸಲಾಗಿದೆ. ಇದರ ವಜಾ ಕೋರಿ ಸಂಸದ ಹೆಗಡೆ ಹೈಕೋರ್ಟ್ ಕದ ತಟ್ಟಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ನೂತನ ಸಿಜೆ ಆಗಿ ನ್ಯಾ.ನಿಲಯ್ ಅಂಜಾರಿಯಾ ನೇಮಕ