ಬೆಂಗಳೂರು: ಹೊಂಬೇಗೌಡ ನಗರ ಮಾಧವನ್ ಪಾರ್ಕ್ ಕೊಳಗೇರಿ ಪ್ರದೇಶದಿಂದ ಕೊರಮಂಗಲ 3ನೇ ಹಂತದ ಕೊಳಗೇರಿ ಪ್ರದೇಶಕ್ಕೆ ಸ್ಥಳಾಂತರಿಸಲಾದ 951 ಕುಟುಂಬಗಳಿಗೆ ಕ್ರಯಪತ್ರ ವಿತರಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಕರ್ನಾಟಕ ಹರಿಜನ ಕೊಳಗೇರಿ ನಿವಾಸಿಗಳ ಸಂಘ (ರಿ) ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ಪ್ರಸಾದ್ ಅವರಿದ್ದ ಏಕಸದಸ್ಯ ಪೀಠ, ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಡಿಸೆಂಬರ್ 17ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಹಲವು ದಶಕಗಳಿಂದ ಮಾಧವನ್ ಪಾರ್ಕ್ ಕೊಳಗೇರಿ ಪ್ರದೇಶದಲ್ಲಿ ವಾಸವಾಗಿದ್ದ 951 ಕುಟುಂಬಗಳನ್ನು ಸರ್ಕಾರ 1998ರಲ್ಲಿ ಕೋರಮಂಗಲ 3ನೇ ಹಂತಕ್ಕೆ ಸ್ಥಳಾಂತರಿಸಿತು. ಸ್ಥಳಾಂತರಿಸಿದ ಬಳಿಕ ಹಂಚಿಕೆ ಪತ್ರ, ಹಕ್ಕುಪತ್ರ ಸಹ ನೀಡಲಾಗಿತ್ತು. ಮಾಧವನ್ ಪಾರ್ಕ್‌ನಿಂದ ಕೋರಮಂಗಲಕ್ಕೆ ಸ್ಥಳಾಂತರಗೊಂಡ ಕೊಳಗೇರಿ ನಿವಾಸಿಗಳಿಗೆ ಕ್ರಯ ಪತ್ರ ನೀಡುವಂತೆ 1996ರಲ್ಲಿ ಸರ್ಕಾರ ಆದೇಶ ಹೊರಡಿಸಿದೆ'' ಎಂದರು.
''ಈ ವಿಚಾರವಾಗಿ ಸರ್ಕಾರ ಮತ್ತು ಪಾಲಿಕೆಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಕ್ರಯ ಪತ್ರ ಇಲ್ಲದ ಕಾರಣ, ಖಾತೆ ಮಾಡಿಸಿಕೊಳ್ಳಲಾಗುತ್ತಿಲ್ಲ. ಇದರಿಂದ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ತೊಂದರೆಯಾಗುತ್ತಿದ್ದು, 30 ವರ್ಷಗಳಿಂದ ಈ ಸಮಸ್ಯೆ ಕೊಳಗೇರಿ ನಿವಾಸಿಗಳು ಎದುರಿಸುತ್ತಿದ್ದಾರೆ'' ಎಂದು ಪೀಠದ ಗಮನಕ್ಕೆ ತಂದರು.
ರಾಜ್ಯ ಸರ್ಕಾರ 1996ರಲ್ಲಿ ಹೊರಡಿಸಿದ ಆದೇಶ ಪಾಲಿಸಿರುವ ಕೊಳಗೇರಿ ನಿವಾಸಿಗಳಿಗೆ ಕ್ರಯಪತ್ರ ನೀಡುವಂತೆ ಸರ್ಕಾರ ಮತ್ತು ಪಾಲಿಕೆಗೆ ನಿರ್ದೇಶನ ನೀಡಬೇಕು. ಅರ್ಜಿದಾರ ಸಂಘದ ನೆರವಿನೊಂದಿಗೆ ತನಿಖೆ ನಡೆಸಿ ಮೂಲ ನಿವಾಸಿಗಳನ್ನು ಗುರುತಿಸಲು ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.
ಇದನ್ನೂ ಓದಿ: ದರ್ಶನ್, ಇತರರ ಜಾಮೀನು ಅರ್ಜಿ ವಿಚಾರಣೆ ಮಂಗಳವಾರಕ್ಕೆ ಮುಂದೂಡಿಕೆ