ಬೆಂಗಳೂರು: ರಾಜ್ಯಪಠ್ಯ ಕ್ರಮವಿರುವ ಶಾಲೆಗಳ ಐದು, ಎಂಟು, ಒಂಭತ್ತು ಮತ್ತು 11ನೇ ತರಗತಿ ಮಕ್ಕಳಿಗೆ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಪಡಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶಕ್ಕೆ ದ್ವಿ ಸದಸ್ಯ ಪೀಠ ತಡೆ ನೀಡಿದೆ. ಅಲ್ಲದೆ, ಸೋಮವಾರದಿಂದ ನಡೆಯಬೇಕಿದ್ದ ಬೋರ್ಡ್ ಮಟ್ಟದ ಪರೀಕ್ಷೆಗಳಿಗೆ ಅನುಮತಿ ನೀಡಿದೆ.
5, 8, 9 ಮತ್ತು 11ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನದ ಬದಲಾಗಿ ರಾಜ್ಯ ಮಟ್ಟದ ಮಂಡಳಿ (ಬೋರ್ಡ್) ಪರೀಕ್ಷೆ ನಡೆಸಲು ತೀರ್ಮಾನಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಪಡಿಸಿದ್ದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ನ್ಯಾಯಮೂರ್ತಿ ರಾಜೇಶ ರೈ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಇದರಿಂದಾಗಿ ಬೋರ್ಡ್ ಮಟ್ಟದ ಪರೀಕ್ಷೆ ನಡೆಯುವುದು ಖಚಿತವಾಗಿದೆ.
ಇದೇ ವೇಳೆ ನ್ಯಾಯಪೀಠ, ಮಾ.11ರಿಂದ 5, 8, 9ನೇ ತರಗತಿಗಳಿಗೆ ಪರೀಕ್ಷೆಗಳು ಆರಂಭವಾಗಲಿದೆ. ವೇಳಾಪಟ್ಟಿಯನ್ನು 2023ರ ಡಿ.12ರಂದು ಪ್ರಕಟಿಸಲಾಗಿತ್ತು. ಈಗಾಗಲೇ ಪರೀಕ್ಷೆ ನಡೆಸಲು ಸರ್ಕಾರ ಮತ್ತು ಅದರ ಪ್ರಾಧಿಕಾರಗಳು ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿದೆ. ತಕರಾರು ಅರ್ಜಿಗಳ ವಿಚಾರಣೆ ಹಂತದಲ್ಲಿ ಏಕ ಸದಸ್ಯ ನ್ಯಾಯಪೀಠವು ಯಾವುದೇ ಮಧ್ಯಂತರ ಆದೇಶ ಮಾಡಿರಲಿಲ್ಲ, ಆದರೆ, ಗುರುವಾರ ಆದೇಶ ಪ್ರಕಟಿಸಿದೆ. ಇಂತಹ ಸಂದರ್ಭದಲ್ಲಿ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡದೆ ಹೋದರೆ ಅನಿಶ್ಚಿತ ಸನ್ನಿವೇಶವು ಮುಂದುವರಿಸುತ್ತದೆ. ಪರೀಕ್ಷಾ ಮುನ್ನಾ ದಿನ ಇಂತಹ ಸನ್ನಿವೇಶನ ಸೃಷ್ಟಿಯಾಗುವುದು ವಿದ್ಯಾರ್ಥಿ ಸಮುದಾಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಸರ್ಕಾರದ ವಾದ ಸೂಕ್ತವಾಗಿದೆ. ಹಾಗಾಗಿ, ಮೇಲ್ಮನವಿ ಕುರಿತ ಮೆರಿಟ್ ಮೇಲೆ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸದೆ ಏಕ ಸದಸ್ಯ ಪೀಠದ ತೀರ್ಪಿಗೆ ತಡೆಯಾಜ್ಞೆ ನೀಡಲಾಗುತ್ತಿದೆ. ಮೇಲ್ಮನವಿ ಕುರಿತ ಮುಂದಿನ ಆದೇಶದವರೆಗೆ, ವಿಲೇವಾರಿಯರೆಗೆ ತಡೆಯಾಜ್ಞೆ ಆದೇಶ ಜಾರಿಯಲ್ಲಿದೆ ಎಂದು ವಿಭಾಗೀಯ ಪೀಠ ಆದೇಶಿಸಿದೆ.
ಅಲ್ಲದೆ, ರಾಜ್ಯ ಸರ್ಕಾರವು 5 8, 9 ಮತ್ತು 11ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು 2023ರ ನ.16 ರಂದು ಆದೇಶ ಹೊರಡಿಸಿದೆ. ಪ್ರತಿವಾದಿಗಳಾದ ರುಪ್ಸಾ ಹಾಗೂ ಅವರ್ಸ್ ಸ್ಕೂಲ್ ಆ ಆದೇಶವನ್ನು ಪ್ರಶ್ನಿಸಿಲ್ಲ. ಸರ್ಕಾರದ ಹೊರಡಿಸಿದ ಅಧಿಸೂಚನೆಗಳ ಹೊರತಾಗಿಯೂ ಏಕ ಸದಸ್ಯ ನ್ಯಾಯಪೀಠವು ಕರ್ನಾಟಕ ಶಿಕ್ಷಣ ಕಾಯ್ದೆಯ ಸೆಕ್ಷನ್ 22 ಹಾಗೂ 15 ಅನ್ನು ಚರ್ಚಿಸುವ ಬದಲು ಸೆಕ್ಷನ್ 7 ಹಾಗೂ 145(4) ಮೇಲೆ ಚರ್ಚಿಸಿ ತೀರ್ಪು ನೀಡಿದೆ. ಇದಲ್ಲದೇ ಸರ್ಕಾರದ ನಿರ್ಧಾರವು 10 ಲಕ್ಷ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವಂತಹದ್ದಾಗಿದೆ. ಈ ವಿಚಾರವನ್ನು ಏಕ ಸದಸ್ಯ ನ್ಯಾಯಪೀಠ ಅತ್ಯಂತ ಗಂಭೀರವಾಗಿ ಪರಗಿಣಿಸಬೇಕಿತ್ತು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿಕ್ರಮ್ ಹುಯಿಲಗೋಳ, ಸೋಮವಾರ ಮಧ್ಯಾಹ್ನ 2.30ಕ್ಕೆ 5, 8 ಮತ್ತು 9ನೇ ತರಗತಿ ಪಬ್ಲಿಕ್ ಪರೀಕ್ಷೆ ಆರಂಭವಾಗಲಿವೆ. 42,255 ಸರ್ಕಾರಿ ಶಾಲೆಗಳು, 2,656 ಅನುದಾನಿತ ಶಾಲೆಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 53,680 ಶಾಲೆಗಳಿವೆ. ರಾಜ್ಯದ ಮಕ್ಕಳ ಹಿತದೃಷ್ಟಿಯಿಂದ ಬೋರ್ಡ್ ಪರೀಕ್ಷೆ ನಡೆಸಲಾಗುತ್ತಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಲೋಪಗಳಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲಿ ಹೀಗೆ ಮಾಡಲಾಗುತ್ತಿದೆ. ಸರ್ಕಾರ ಪರೀಕ್ಷೆ ಪರಿಚಯಿಸುವಂತಿಲ್ಲ ಎಂದು ಪ್ರತಿವಾದಿಯಾಗಿರುವ ರುಪ್ಸಾ (ಮೂಲ ಅರ್ಜಿದಾರರಲ್ಲಿ ಒಬ್ಬರು) ಹೇಳಲಾಗದು ಎಂದು ವಾದಿಸಿದರು.
5, 8 ಮತ್ತು 9ನೇ ತರಗತಿಯ 25 ಲಕ್ಷ ವಿದ್ಯಾರ್ಥಿಗಳಿದ್ದಾರೆ. ರುಪ್ಸಾ ಅತ್ಯಂತ ಕಡಿಮೆ ಶಾಲೆಗಳನ್ನು ಪ್ರತಿನಿಧಿಸುತ್ತದೆ. ಈ ಪೈಕಿ ಖಾಸಗಿ ಅನುದಾನರಹಿತ ಶಾಲೆಯ ಮಕ್ಕಳು ಸುಮಾರು 8 ಲಕ್ಷ ಮಾತ್ರ. ಉಳಿದ 5, 8 ಮತ್ತು 9ನೇ ತರಗತಿಯ 20 ಲಕ್ಷ ವಿದ್ಯಾರ್ಥಿಗಳು ಸೋಮವಾರ ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ. 11ನೇ ತರಗತಿ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆ ಬರೆದಿದ್ದಾರೆ. ವಿದ್ಯಾರ್ಥಿಗಳು ಸೋಮವಾರ ಪರೀಕ್ಷೆ ಬರೆಯಬೇಕಿದೆ. ಈ ಪೈಕಿ ಒಬ್ಬೇ ಒಬ್ಬ ವಿದ್ಯಾರ್ಥಿ ಅಥವಾ ಪೋಷಕರು ಹೈಕೋರ್ಟ್ ಮೆಟ್ಟಿಲೇರಿಲ್ಲ. ತನ್ನ ಹಿತಾಸಕ್ತಿ ಇಂದ ರುಪ್ಸಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಏಕ ಸದಸ್ಯ ಪೀಠದ ಆದೇಶದಿಂದ ಮಕ್ಕಳಿಗೆ ಪರೀಕ್ಷೆ ವಿಚಾರದಲ್ಲಿ ಅನಿಶ್ಚಿತತೆ ಎದುರಾಗಿದೆ ಎಂದು ವಿವರಿಸಿದರು.
ಬೋರ್ಡ್ ಪರೀಕ್ಷೆಯಲ್ಲಿ ಯಾವ ವಿದ್ಯಾರ್ಥಿಯನ್ನೂ ಅನುತ್ತೀರ್ಣ ಮಾಡುವುದಿಲ್ಲ. ಕಲಿಕೆ ಗುಣಮಟ್ಟವನ್ನು ವೃದ್ಧಿಸುವ ಹಾಗೂ ವಿದ್ಯಾರ್ಥಿಗಳ ಪ್ರತಿಭೆ ಮೌಲ್ಯಮಾಪನ ಮಾಡುವ ಉದ್ದೇಶದಿಂದ ಬೋರ್ಡ್ ಪರೀಕ್ಷೆ ನಡೆಸಲಾಗುತ್ತಿದೆ. ಫಲಿತಾಂಶವನ್ನು ಬಹಿರಂಗಪಡಿಸುವುದಿಲ್ಲ. ಆಯಾ ವಿದ್ಯಾರ್ಥಿ ಹಾಗೂ ಪೋಷಕರಿಗೆ ಖುದ್ದಾಗಿ ತಲುಪಿಸಲಾಗುತ್ತಿದೆ. ಅಂತಿಮವಾಗಿ ವಿಭಾಗೀಯ ಪೀಠವು ಶಿಕ್ಷಣ ಕಾಯ್ದೆ ಸೆಕ್ಷನ್ 145 ಹೇಳುವಂತೆ ಬೋರ್ಡ್ ಪರೀಕ್ಷೆ ಪರಿಚಯಿಸಲು ನಿಯಮ ರೂಪಿಸಬೇಕು ಎಂದು ಹೇಳಿದರೆ, ಅದನ್ನು ಮುಂದಿನ ವರ್ಷದಿಂದ ಪಾಲಿಸುತ್ತೇವೆ. ಸದ್ಯ ಸೋಮವಾರದಿಂದ ಪರೀಕ್ಷೆ ನಡೆಯಬೇಕಿರುವ ಕಾರಣ ಏಕ ಸದಸ್ಯ ಪೀಠಕ್ಕೆ ತಡೆ ನೀಡಬೇಕು ಎಂದು ಕೋರಿದರು.
ರುಪ್ಸಾ ಪರ ಸುಪ್ರೀಂ ಕೋರ್ಟ್ ವಕೀಲ ಕೆ.ವಿ. ಧನಂಜಯ ಅವರು, ಕಳೆದ ವರ್ಷ ಸರ್ಕಾರವು ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆ ಸೆಕ್ಷನ್ 12ರ ಅಡಿ 5 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಇರಲಿದೆ ಎಂದು ಸುತ್ತೋಲೆ ಹೊರಡಿಸಿತ್ತು. ಇದನ್ನು ಏಕಸದಸ್ಯ ಪೀಠ ವಜಾ ಮಾಡಿತ್ತು. ಆದರೆ, ಮರು ದಿನವೇ ಪರೀಕ್ಷೆ ನಿಗದಿಯಾಗಿತ್ತು. ಅಂದೂ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿ, ತಡೆ ಕೋರಿತ್ತು. ಆದರೆ, ವಿಭಾಗೀಯ ಪೀಠ ತಡೆ ನೀಡಿರಲಿಲ್ಲ. ಹೀಗಾಗಿ, ಪರೀಕ್ಷೆ ಮುಂದೂಡಲಾಗಿತ್ತು. ಅದರಂತೆ ಹೈಕೋರ್ಟ್‌ನಲ್ಲಿ ಸರ್ಕಾರ ಹಲವು ಬಾರಿ ವಿಚಾರಣೆ ಮುಂದೂಡಿಕೆ ಕೋರಿ, ಕೊನೆಗೆ ಮೇಲ್ಮನವಿ ಹಿಂಪಡೆದಿತ್ತು ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಹಾಗೆಯೇ, ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಅಡಿ ಸರ್ಕಾರ ನಡೆದುಕೊಂಡಿದ್ದಾರೆ ಎಂದು ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಒಂದು ರಕ್ಷಣೆ ಇರಲಿದೆ. ಏಕಸದಸ್ಯ ಪೀಠವು ಸರ್ಕಾರವು ಬೋರ್ಡ್ ಪರೀಕ್ಷೆ ನಡೆಸಲಾಗದು ಎಂದು ಈಗಾಗಲೆ ಸ್ಪಷ್ಟಪಡಿಸಿದೆ. ಮೂರು ದಿನ ಬಾಕಿಯಿರುವಾಗ ಬೋರ್ಡ್ ಪರೀಕ್ಷೆ ರದ್ದು ಮಾಡುವ ವೇಳೆ ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳಿಗೂ ಕಳಕಳಿ ಇರುತ್ತದೆ. ಸೋಮವಾರ ಪರೀಕ್ಷೆ ನಡೆಯದಿದ್ದರೆ ಆಕಾಶ ಕಳಚಿ ಬೀಳುವುದಿಲ್ಲ. ಮಕ್ಕಳ ಹಿತಾಸಕ್ತಿ ದೃಷ್ಟಿಯಿಂದ ಸರ್ಕಾರದ ಮನವಿ ಪುರಸ್ಕರಿಸಬಾರದು. ವಿಭಾಗೀಯ ಪೀಠ ವಿಸ್ತೃತವಾಗಿ ವಾದ ಆಲಿಸಿ, ಆದೇಶ ಮಾಡಿದ ಬಳಿಕ ಸರ್ಕಾರ ಪರೀಕ್ಷೆ ನಡೆಸಲಿ. ಈಗ ವಿಭಾಗೀಯ ಪೀಠದಿಂದ ಸರ್ಕಾರ ಮಧ್ಯಂತರ ತಡೆಯಾಜ್ಞೆ ಪಡೆದು ಪರೀಕ್ಷೆ ನಡೆಸುವುದು ಬೇಡ ಎಂದು ಕೋರಿದರು.
ಇದನ್ನೂ ಓದಿ: ಸಿಇಟಿಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ಕಲ್ಪಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ