ಬೆಂಗಳೂರು: ಯೆಮೆನ್ ದೇಶಕ್ಕೆ ತೆರಳಲು ಮುಂದಾಗಿದ್ದ ನರ್ಸ್ವೊಬ್ಬರ ಪಾಸ್ ಪೋರ್ಟ್ ವಶಕ್ಕೆ ಪಡೆದಿರುವ ಕುರಿತಂತೆ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ ತಿಳಿಸುವಂತೆ ವಿದೇಶಾಂಗ ಸಚಿವಲಾಯಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ವಶಕ್ಕೆ ಪಡೆದಿರುವ ಪಾಸ್‌ಪೋರ್ಟ್ ಹಿಂದಿರುಗಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲು ನೆರಿಯಾ ನಿವಾಸಿ ಶೇನಿ ಜಾಯ್ ಎಂಬುವರು ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿ, ಯೆಮೆನ್ ಪ್ರವಾಸ ನಿಷೇಧಿಸಿ ಕೇಂದ್ರ ವಿದೇಶಾಂಗ ಸಚಿವಾಲಯ 2017ರ ಸೆಪ್ಟೆಂಬರ್ 26 ರಂದು ಹೊರಡಿಸಿರುವ ಅಧಿಸೂಚನೆ ಬಗ್ಗೆ ಅರ್ಜಿದಾರರಿಗೆ ತಿಳಿದಿರಲಿಲ್ಲ. ಅಂತೆಯೇ, ಈ ಅಧಿಸೂಚನೆ ಉಲ್ಲಂಘಿಸುವ ಯಾವುದೇ ಉದ್ದೇಶವನ್ನು ಅವರು ಹೊಂದಿಲ್ಲ. ಹಾಗಾಗಿ, ಅವರ ಪಾಸ್‌ಪೋರ್ಟ್ ಹಿಂದಿರುಗಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿವಾದಿ ಕೇಂದ್ರ ಪರ ವಕೀಲರು, ಯೆಮೆನ್‌ನಲ್ಲಿ ನಾಗರಿಕ ಜನ ಜೀವನ ಅಸ್ಥಿರತೆಯಲ್ಲಿದೆ. ಸುರಕ್ಷತೆ ದುರ್ಬಲಗೊಂಡಿದೆ. ಹೀಗಾಗಿ, ಯಾವುದೇ ಭಾರತೀಯ ನಾಗರಿಕರು ರಸ್ತೆ, ರೈಲು, ಜಲಮಾರ್ಗ ಅಥವಾ ವಿಮಾನದ ಮೂಲಕ ಅಲ್ಲಿಗೆ ಪ್ರಯಾಣ ಬೆಳೆಸುವುದನ್ನು ನಿರ್ಬಂಧಿಸಿ ಅಧಿಸೂಚನೆ ಹೊರಡಿಸಲಾಗಿದೆ. ಇದನ್ನು ಉಲ್ಲಂಘಿಸಿರುವ ಕಾರಣದಿಂದಲೇ ಅರ್ಜಿದಾರರ ಪಾಸ್‌ಪೋರ್ಟ್ ಅನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಈ ವೇಳೆ ಪೀಠ, ಯೆಮೆನ್‌ನಲ್ಲಿನ ಸದ್ಯದ ಪರಿಸ್ಥಿತಿ ಮತ್ತು ನಾಗರಿಕರ ಸುರಕ್ಷತೆ ಗಮನದಲ್ಲಿ ಇರಿಸಿಕೊಂಡೇ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ತೆಗೆದುಕೊಂಡಿದೆ. ನೀವು ಅಧಿಸೂಚನೆ ಉಲ್ಲಂಘಿಸಿದ್ದೀರಿ ಎಂಬ ಕಾರಣಕ್ಕೆ ನಿಮ್ಮ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಂಡಿರುವುದಲ್ಲವೇ?, ಯೆಮೆನ್ ಪ್ರವಾಸ ನಿಷೇಧಿಸಿರುವ ಕೇಂದ್ರದ ಕ್ರಮವನ್ನು ಈಗಾಗಲೇ ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆ ಎಂದು ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು,ಅರ್ಜಿದಾರರು 2010-11 ರಿಂದಲೇ ಯೆಮೆನ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿಗೆ ಹೋದ ಮೇಲೆ ಅವರು ಈವರೆಗೆ 2014, 2020 ಮತ್ತು 2023ರಲ್ಲಿ ಒಟ್ಟು ಮೂರು ಬಾರಿ ಭಾರತಕ್ಕೆ ಬಂದು ಹೋಗಿದ್ದಾರೆ. ಅಧಿಸೂಚನೆಯನ್ನು ಉಲ್ಲಂಘಿಸುವಂತಹ ಯಾವುದೇ ಉದ್ದೇಶವನ್ನು ಅವರು ಹೊಂದಿರಲಿಲ್ಲ. ಅಧಿಸೂಚನೆ ಹೊರಡಿಸುವ ಮುನ್ನವೇ ಅವರು ಅಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಒಂದು ವೇಳೆ ಅವರ ಪಾಸ್‌ಪೋರ್ಟ್ ಹಿಂದಿರುಗಿಸದೇ ಹೋದರೆ ಕೆಲಸ ಕಳೆದುಕೊಳ್ಳುತ್ತಾರೆ ಎಂದು ಪೀಠಕ್ಕೆ ತಿಳಿಸಿದರು.
ಪ್ರಕರಣದ ಹಿನ್ನೆಲೆ: ಯಮೆನ್ ದೇಶಕ್ಕೆ ತೆರಳಲು ಮುಂದಾಗಿದ್ದ ಅರ್ಜಿದಾರರ ಪಾಸ್‌ಪೋರ್ಟ್‌ನ್ನು ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ 2023ರ ಆಗಸ್ಟ್ 20ರಂದು ವಶಕ್ಕೆ ಪಡೆಯಲಾಗಿತ್ತು. ಅಂತೆಯೇ, 2017ರ ಅಧಿಸೂಚನೆಯ ಅನುಸಾರ ಮತ್ತು ಪಾಸ್‌ಪೋರ್ಟ್ ಕಾಯ್ದೆ1967ರ ಕಲಂ19ರ ಅನ್ವಯ ಅವರ ಪಾಸ್‌ಪೋರ್ಟ್ ಅನ್ನು ಅಮಾನ್ಯಗೊಳಿಸಲಾಗಿದೆ ಎಂದು ವಿವರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಐಎಂಎ ವಂಚನೆ ಕೇಸ್: ಪರಿಹಾರ ನೀಡಿರುವ ಕುರಿತು ಸಮಗ್ರ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ - High Court