ಹಾವೇರಿ : ಲೋಕಸಭಾ ಕ್ಷೇತ್ರದ ಮತದಾನಕ್ಕೆ ಹಾವೇರಿ ಜಿಲ್ಲಾಡಳಿತ ಸಕಲ ಸಿದ್ದತೆ ಕೈಗೊಂಡಿದೆ. ಮತದಾನ ನಡೆಯುವ ಮುನ್ನಾದಿನ ಮತಯಂತ್ರಗಳನ್ನು ಮತಕೇಂದ್ರದ ಸಿಬ್ಬಂದಿಗೆ ನೀಡಲಾಯಿತು.
ಹಾವೇರಿ ಲೋಕಸಭೆಗೆ ಒಳಪಡುವ ಹಾವೇರಿ ವಿಧಾನಸಭೆಯ ಮಸ್ಟರಿಂಗ್ ಕಾರ್ಯ ಹಾವೇರಿ ನಗರದ ಶ್ರೀ
ಶಿವ ಲಿಂಗೇಶ್ವರ ಮಹಿಳಾ ಪದವಿ ಕಾಲೇಜ್‌ನಲ್ಲಿ ನಡೆಯಿತು. ಮತಕೇಂದ್ರದ ಸಿಬ್ಬಂದಿ ಬ್ಯಾಲೇಟ್ ಮಷೀನ್, ವಿವಿ ಪ್ಯಾಟ್ ಸೇರಿದಂತೆ ಮತದಾನದ ಸಲಕರಣೆಗಳನ್ನುಒಂದು ಸಾರಿ ಪರಿಶೀಲನೆ ನಡೆಸಿದರು.
ನಂತರ ನಿಗಧಿಪಡಿಸಿದ ವಾಹನಗಳಲ್ಲಿ ತಮ್ಮ ಮತಕೇಂದ್ರಕ್ಕೆ ತೆರಳಿದರು. ಮಂಗಳವಾರ ಮುಂಜಾನೆ 7 ಗಂಟೆಯಿಂದ ಮತದಾನ ಆರಂಭವಾಗಲಿದ್ದು, ಸಂಜೆ ಆರು ಗಂಟೆಯವರೆಗೆ ಮತದಾನ ನಡೆಯಲಿದೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ 1982 ಮತಗಟ್ಟೆ ಸ್ಥಾಪಿಸಲಾಗಿದ್ದು, ಅವುಗಳಲ್ಲಿ 370 ಮತಗಟ್ಟೆಗಳನ್ನು ಸೂಕ್ಷ್ಮಮತಗಟ್ಟೆಗಳು ಎಂದು ಗುರುತಿಸಲಾಗಿದೆ.37 ದುರ್ಬಲ ಮತಗಟ್ಟೆಗಳು ಹಾಗೂ 13 ಅತೀ ಸೂಕ್ಷ್ಮಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ರಘುನಂದನಮೂರ್ತಿ ತಿಳಿಸಿದರು.
224 ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, 6958 ಚುನಾವಣೆಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಭದ್ರತೆಗಾಗಿ 2525 ಸಿಬ್ಬಂದಿ ನಿಯೋಜನೆ. 6 ಜನ ಡಿವೈಎಸ್‌ಪಿಗಳು, 19 ಜನ ಸಿಪಿಐಗಳು, 45 ಜನ ಪಿಎಸ್‌ಐ, 101 ಎಎಸ್‌ಐ, 371 ಹೆಚ್.ಸಿ, 963 ಪಿಸಿ, 1000 ಹೋಮ್ ಗಾರ್ಡ್, 18 ಫಾರೆಸ್ಟ್ ಗಾರ್ಡ್ ಒಳಗೊಂಡಂತೆ ಕೇರಳ ರಾಜ್ಯದ ಶಸ್ತ್ರಪಡೆಯ 3 ತುಕಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಸುರಕ್ಷತೆ ಹಾಗೂ ಭದ್ರತಾ ಕಾರ್ಯ ನಿರ್ವಹಿಸಲಿದೆ.
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ 9,02,119 ಪುರುಷ ಮತದಾರರು, 8,90,572 ಮಹಿಳಾ ಮತದಾರರು ಮತ್ತು ಇತರೆ -83 ಮತದಾರರಿದ್ದು, ಒಟ್ಟು 17,92,774 ಮತದಾರರಿದ್ದಾರೆ. ಹಾವೇರಿ ಲೋಕಸಭೆ ಸೇರಿದಂತೆ ಜಿಲ್ಲೆಯಲ್ಲಿ ಮತದಾನ ಮಾಡುವ ಪ್ರಮುಖ ನಾಯಕರಲ್ಲಿ ಮಾಜಿ ಸಿಎಂ ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ, ಮಾಜಿ ಸಚಿವ ಬಿ.ಸಿ ಪಾಟೀಲ್, ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಮತದಾನ ಮಾಡಲಿದ್ದಾರೆ.
ಬಸವರಾಜ್ ಬೊಮ್ಮಾಯಿ ಶಿಗ್ಗಾಂವಿ ಪಟ್ಟಣದ ಸರ್ಕಾರಿ ಹಿರಿಯ ನಂಬರ್ 2 ಶಾಲೆಯಲ್ಲಿ ಮತದಾನ ಮಾಡಲಿದ್ದಾರೆ. ಉಪಸಭಾಪತಿ ರುದ್ರಪ್ಪ ಲಮಾಣಿ ಹಾವೇರಿಯ ಇಜಾರಿಲಕಮಾಪುರ ಸರ್ಕಾರಿ ಗಂಡುಮಕ್ಕಳ ಶಾಲೆಯಲ್ಲಿ ಮತದಾನ ಮಾಡಲಿದ್ದಾರೆ. ಮುಖ್ಯಸಚೇತಕ ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಹಾವೇರಿ ಗೆಳಯರ ಬಳಗ ಸ್ಕೂಲ್ನ ಮತಗಟ್ಟೆಯಲ್ಲಿ ಮತದಾನ ಮಾಡಲಿದ್ದಾರೆ. ಮಾಜಿ ಸಚಿವ ಬಿ. ಸಿ ಪಾಟೀಲ್, ಹಿರೇಕೆರೂರು ತಾಲೂಕಿನ ಬಾಳಂಬೀಡ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಲಿದ್ದಾರೆ.
ಮಸ್ಟರಿಂಗ್ ಕೇಂದ್ರಗಳಿಂದ ಮತಗಟ್ಟೆಗಳಿಗೆ ತೆರಳಿದ ಅಧಿಕಾರಿ-ಸಿಬ್ಬಂದಿ : ನಾಳೆ ಕರ್ನಾಟಕದಲ್ಲಿ ಎರಡನೇ ಹಂತದ ಹಾಗೂ ದೇಶದ ಮೂರನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಇದಕ್ಕಾಗಿ ಶಿವಮೊಗ್ಗ ಜಿಲ್ಲಾಡಳಿತದಿಂದ ಸಕಲ ಸಿದ್ದತೆ ನಡೆದಿದೆ. ಮತಗಟ್ಟೆ ಅಧಿಕಾರಿ/ಸಿಬ್ಬಂದಿ ಇಂದು ಮತಗಟ್ಟೆಗಳಿಗೆ ಅಗತ್ಯವಾದ ಎಲ್ಲ ಪರಿಕರಗಳೊಂದಿಗೆ ಮಸ್ಟರಿಂಗ್ ಕೇಂದ್ರಗಳಲ್ಲಿ ಸಿದ್ದತೆಗಳನ್ನು ಮಾಡಿಕೊಂಡು ಹೊರಡುವ ದೃಶ್ಯ ಸಾಮಾನ್ಯವಾಗಿತ್ತು.
ಮಸ್ಟರಿಂಗ್ ಕೇಂದ್ರಗಳ ವಿವರ : 111-ಶಿವಮೊಗ್ಗ ಗ್ರಾಮಾಂತರ ಮತಕ್ಷೇತ್ರಕ್ಕೆ ಹೆಚ್. ಎಸ್ ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜು ಶಿವಮೊಗ್ಗ, 112-ಭದ್ರಾವತಿ ಮತಕ್ಷೇತ್ರಕ್ಕೆ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಭದ್ರಾವತಿ, 113-ಶಿವಮೊಗ್ಗ ಮತಕ್ಷೇತ್ರಕ್ಕೆ ಸಹ್ಯಾದ್ರಿ ಕಾಮರ್ಸ್ ಆಂಡ್ ಮ್ಯಾನೇಜ್‍ಮೆಂಟ್ ಕಾಲೇಜು, 114-ತೀರ್ಥಹಳ್ಳಿಗೆ ಡಾ. ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜ್ ತೀರ್ಥಹಳ್ಳಿ, 115- ಶಿಕಾರಿಪುರ ಮತಕ್ಷೇತ್ರಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ, 116-ಸೊರಬ ಮತಕ್ಷೇತ್ರಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೊರಬ ಹಾಗೂ 117-ಸಾಗರ ಮತಕ್ಷೇತ್ರಕ್ಕೆ ಸರ್ಕಾರಿ ಜ್ಯೂನಿಯರ್ ಪಿಯು ಕಾಲೇಜು, ಸಾಗರ ಮಸ್ಟರಿಂಗ್ ಕೇಂದ್ರಗಳಿಂದ ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿದರು.
ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ದಿನಗಳಂದು ಕರ್ತವ್ಯಕ್ಕೆ ನಿಯೋಜಿಸಿದ ಚುನಾವಣಾ ಸಿಬ್ಬಂದಿಯನ್ನು ಸಂಬಂಧಿಸಿದ ಮತಗಟ್ಟೆ ಕೇಂದ್ರಗಳಿಗೆ ಕರೆದುಕೊಂಡು ಹೋಗಲು ಅನುಕೂಲವಾಗುವಂತೆ 269 ಬಸ್‍ಗಳು, 07 ಮೀಸಲು ಬಸ್ ಮತ್ತು 13 ಮಿನಿ ಬಸ್ ಸೇರಿದಂತೆ 289 ಬಸ್‍ಗಳ ನಿಯೋಜನೆ ಮಾಡಲಾಗಿದೆ.
ನಗರದ ಹೆಚ್. ಎಸ್ ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜು ಮೈದಾನ ಸೇರಿದಂತೆ ಎಲ್ಲ ಮಸ್ಟರಿಂಗ್ ಕೇಂದ್ರಗಳಲ್ಲಿ ಮತಗಟ್ಟೆ ಸಿಬ್ಬಂದಿ ಹೊರಡಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಇವಿಎಂ, ವಿವಿ ಪ್ಯಾಟ್‍ಗಳು, ಕಂಟ್ರೋಲಿಂಗ್ ಯುನಿಟ್, ಶಾಯಿ, ಚುನಾವಣೆಗೆ ಅಗತ್ಯವಾದ ಇತರೆ ಸಾಮಗ್ರಿಗಳೊಂದಿಗೆ ಅಧಿಕಾರಿ/ಸಿಬ್ಬಂದಿ ಸಿದ್ದತೆ ಮಾಡಿಕೊಂಡು ನಿಯೋಜಿಸಲಾದ ಬಸ್‍ಗಳಲ್ಲಿ ಸಂಬಂಧಿಸಿದ ಮತಗಟ್ಟೆಗಳಿಗೆ ತೆರಳಿದರು.
ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 2039 ಮತಗಟ್ಟೆಗಳಿದ್ದು, 8,62,789 ಪುರುಷ, 8,90,061 ಮಹಿಳಾ ಮತ್ತು 35 ತೃತೀಯ ಲಿಂಗಿ ಸೇರಿದಂತೆ ಒಟ್ಟು 17,52,885 ಮತದಾರರು ಇದ್ದಾರೆ. 87 ದುರ್ಬಲ ಮತಗಟ್ಟೆ, 104 ದುರ್ಬಲ ಪ್ರದೇಶ, 4650 ವಲ್ನರಬಲ್ ಮತದಾರರು, 325 ಕ್ರಿಟಿಕಲ್ ಮತಗಟ್ಟೆಗಳನ್ನು ಗುರುತಿಸಲಾಗಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ವಿಶೇಷವಾಗಿ ವಿಶೇಷಚೇತನರು ಯಾವುದೇ ತಾರತಮ್ಯವಿಲ್ಲದೇ ಸಕ್ರಿಯವಾಗಿ ಭಾಗವಹಿಸುವಂತೆ ಮತ್ತು ಹೆಚ್ಚು ಸುಗಮ ಚುನಾವಣೆಗಳನ್ನಾಗಿ ಮಾಡುವ ಸಲುವಾಗಿ ಹಾಗೂ ಮಹಿಳಾ ಮತದಾರರನ್ನು ಮತಗಟ್ಟೆಗಳತ್ತ ಸೆಳೆಯಲು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 40 ಸಖಿ ಮತಗಟ್ಟೆ, 08 ವಿಶೇಷಚೇತನ ನಿರ್ವಹಣೆ, 08 ಯುವಜನ ನಿರ್ವಹಣೆಯ ಮತಗಟ್ಟೆಗಳು, 08 ಧ್ಯೇಯ ಆಧಾರಿತ ಮತಗಟ್ಟೆ ಹಾಗೂ 08 ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಇದನ್ನೂ ಓದಿ : ರಾಯಚೂರು: ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆ - Lok Sabha Election