ಹಾವೇರಿ: ಜಿಲ್ಲೆಯಾದ್ಯಂತ ಭಾನುವಾರ ವರುಣನ ಆರ್ಭಟ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಹರಿಯುವ ತುಂಗಭದ್ರಾ, ವರದಾ, ಧರ್ಮಾ ಮತ್ತು ಕುಮದ್ವತಿ ನದಿಗಳ ಜಲಾನಯನದ ಪ್ರದೇಶಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಗಳು ಅಪಾಯದಮಟ್ಟ ಮೀರಿ ಹರಿಯುತ್ತಿವೆ. ಕಳೆದ ಹಲವು ದಿನಗಳಿಂದ ಸುರಿದ ಮಳೆಯಿಂದ ಈವರೆಗೆ ಸುಮಾರು 1,251 ಮನೆಗಳಿಗೆ ಹಾನಿ ಮತ್ತು 11 ಮನೆಗಳಿಗೆ ತೀವ್ರ ಹಾನಿಯಾಗಿದೆ. ಐದು ಮನೆಗಳು ಸಂಪೂರ್ಣ ನೆಲಸಮವಾಗಿವೆ. 1,235 ಮನೆಗಳ ಗೋಡೆಗಳು ಕುಸಿದಿದ್ದು ಭಾಗಶಃ ಹಾನಿಯಾಗಿವೆ. ಜಿಲ್ಲೆಯಲ್ಲಿ 11 ದನದ ಕೊಟ್ಟಿಗೆಗಳು ಬಿದ್ದಿವೆ ಎಂದು ಜಿಲ್ಲಾಡಳಿತ ವರದಿ ಬಿಡುಗಡೆ ಮಾಡಿದೆ.
ಪ್ರಸ್ತುತ ಮುಂಗಾರಿನಲ್ಲಿ ಮಳೆಯಿಂದಾಗಿ 6 ಜನ ಪ್ರಾಣ ಕಳೆದುಕೊಂಡಿದ್ದಾರೆ. ಮೂವರು ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಜಿಲ್ಲೆಯಲ್ಲಿ ಮೂರು ಜಾನುವಾರುಗಳು ಮೃತಪಟ್ಟಿವೆ. ಜಿಲ್ಲೆಯಲ್ಲಿ 13 ರಸ್ತೆಗಳು ಸಂಪರ್ಕ ಕಳೆದುಕೊಂಡಿವೆ. ಹಾವೇರಿ ತಾಲೂಕಿನಲ್ಲಿ ಎರಡು ರಸ್ತೆಗಳು, ಸವಣೂರು ತಾಲೂಕಿನಲ್ಲಿ ಮೂರು ರಸ್ತೆಗಳು, ಹಾನಗಲ್ ತಾಲೂಕಿನಲ್ಲಿ ಮೂರು ರಸ್ತೆಗಳು, ರಾಣೆಬೆನ್ನೂರು ತಾಲೂಕಿನಲ್ಲಿ ಮೂರು ರಸ್ತೆಗಳು ಮತ್ತು ರಟ್ಟಿಹಳ್ಳಿ ತಾಲೂಕಿನಲ್ಲಿ ಒಂದು ರಸ್ತೆ ಸಂಪರ್ಕ ಕಡಿತಗೊಂಡಿವೆ. ಈ ರಸ್ತೆಗಳಲ್ಲಿ ಸೇತುವೆಗಳ ಮೇಲೆ ನೀರು ಹರಿಯುತ್ತಿರುವ ಕಾರಣ ಜನಜಾನುವಾರು ಸಂಚಾರ ಮಾಡದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಜಿಲ್ಲೆಯಲ್ಲಿ 3,828 ರೈತರ 3,304 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಹಾನಿಯಾಗಿವೆ. ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಲ್ಲಿ 511 ರೈತರ ಸುಮಾರು 218 ಹೆಕ್ಟೇರ್ ಪ್ರದೇಶದ ಬೆಳೆಗಳು ಹಾಳಾಗಿವೆ. ಜಿಲ್ಲಾಧಿಕಾರಿಗಳ ಮತ್ತು ತಹಶೀಲ್ದಾರ್ ಖಾತೆಯಲ್ಲಿ ಸುಮಾರು 22 ಕೋಟಿ ರೂಪಾಯಿ ಅನುದಾನ ಲಭ್ಯವಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
''ಜಿಲ್ಲೆಯಲ್ಲಿ ಈ ಹಿಂದೆ ಮಳೆಯಿಂದ ಮನೆಗಳು ಸಂಪೂರ್ಣ ಬಿದ್ದರೆ, ಐದು ಲಕ್ಷ ರೂಪಾಯಿ ಪರಿಹಾರ ಸಿಗುತ್ತಿತ್ತು. ಆದರೆ, ಪ್ರಸ್ತುತ ಮನೆಗಳು ಸಂಪೂರ್ಣ ಬಿದ್ದರೆ ಸರ್ಕಾರ ₹1.20 ಲಕ್ಷ ಮಾತ್ರ ಪರಿಹಾರ ಸಿಗುತ್ತೆ. ಇದರಿಂದ ಬಡವರು ಹೇಗೆ ಹೊಸದಾಗಿ ಮನೆ ಕಟ್ಟಿಸಿಕೊಳ್ಳಲು ಸಾಧ್ಯ'' ಎಂದು ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹಿರೇಮಲ್ಲೂರು ಗ್ರಾಮದ ನಿರಾಶ್ರಿತರು ಅಳಲು ತೋಡಿಕೊಂಡಿದ್ದಾರೆ.
''ಈ ಹಿಂದೆ ಇದ್ದಂತೆ ಬೆಲೆಗಳು ಈಗ ಇಲ್ಲ, ಎಲ್ಲ ವಸ್ತುಗಳ ಬೆಲೆಗಳು ಏರಿಕೆಯಾಗಿವೆ. ಆದರೆ, ಸರ್ಕಾರದ ಪರಿಹಾರಧನ ಕಡಿಮೆಯಾಗಿದೆ. ಇದರಿಂದ ಬಡವರು ಹೇಗೆ ಜೀವನ ಸಾಗಿಸಬೇಕು'' ಎಂದು ನಿರಾಶ್ರಿತರು ಬೇಸರ ವ್ಯಕ್ತಪಡಿಸಿದ್ದಾರೆ. ಜಾನುವಾರುಗಳನ್ನು ರಸ್ತೆಗಳಲ್ಲಿ ಕಟ್ಟಿ ಜೀವನ ಮಾಡುತ್ತಿದ್ದೇವೆ. ಸೋರುತ್ತಿರುವ ಮನೆಯಲ್ಲಿ ಆತಂಕದಿಂದ ಜೀವನ ಕಳೆಯುತ್ತಿದ್ದೇವೆ'' ಎಂದು ನಿರಾಶ್ರಿತರು ತಿಳಿಸಿದರು. ಸೋಮವಾರದಿಂದ ಜಿಲ್ಲೆಯಲ್ಲಿ ಎಂದಿನಂತೆ ಶಾಲಾ ತರಗತಿಗಳು ನಡೆಯಲಿವೆ.
ಇದನ್ನೂ ಓದಿ: ಘಟಪ್ರಭಾ ಪ್ರವಾಹಕ್ಕೆ ನಲುಗಿದ ಗೋಕಾಕ್: ಹಲವು ಬಡಾವಣೆಗಳು ಜಲಾವೃತ, ಸಾವಿರಾರು ಜನರ ಬದುಕು ಅತಂತ್ರ - flood in Gokak