ಹಾಸನ: "ಐತಿಹಾಸಿಕ ಗೆಲುವಿನ ನಡುವೆ ಜವಾಬ್ದಾರಿ ಹೆಚ್ಚಿದೆ. ನನ್ನ ಮೇಲೆ ನಂಬಿಕೆ ಇಟ್ಟು ಮತ ಹಾಕಿರುವ ಜನರ ಋಣವನ್ನು ಪ್ರಾಮಾಣಿಕವಾಗಿ ಜಿಲ್ಲೆಯ ಅಭಿವೃದ್ಧಿ ಮಾಡುವ ಮೂಲಕ ತೀರಿಸುತ್ತೇನೆ" ಎಂದು ಹಾಸನ ಲೋಕಸಭಾ ಕ್ಷೇತ್ರದ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಹೇಳಿದರು.
ಗೆಲುವಿನ ಬಳಿಕ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಪ್ರಚಾರದ ಸಂದರ್ಭದಲ್ಲಿ ನಾನು ಜಿಲ್ಲೆಯ ಅಭಿವೃದ್ಧಿ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದೆ. ನೆನೆಗುದಿಗೆ ಬಿದ್ದಿರುವ ಹಲವು ಯೋಜನೆಗಳನ್ನು ಲೋಕಸಭೆಯಲ್ಲಿ ಚರ್ಚಿಸುವ ಮೂಲಕ ಕೇಂದ್ರದ ಗಮನ ಸೆಳೆಯುವ ಕೆಲಸ ಮಾಡುತ್ತೇನೆ. ನನ್ನ ಗೆಲುವಿಗೆ ಸಹಕರಿಸಿದ ಕಾರ್ಯಕರ್ತರು ಮತ್ತು ಪಕ್ಷಾತೀತವಾಗಿ ಬೆಂಬಲಿಸಿದ ಹಲವು ಮುಖಂಡರಿಗೆ ಚಿರಋಣಿ" ಎಂದರು.
"ಚುನಾವಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರು ಹಾಸನಕ್ಕೆ ಆಗಮಿಸಿ ನನ್ನ ಪರ ಪ್ರಚಾರ ಮಾಡಿದರು. ಇದೂ ಕೂಡ ಗೆಲುವಿಗೆ ಸಹಕಾರಿಯಾಯಿತು. ಇದು ನನ್ನ ಗೆಲುವಲ್ಲ, ಕಾರ್ಯಕರ್ತರ ಗೆಲುವು. ನನ್ನ ಗೆಲುವನ್ನು ಅವರಿಗೆ ಅರ್ಪಿಸುತ್ತೇನೆ" ಎಂದು ಹೇಳಿದರು.
ಶ್ರೇಯಸ್ ಪಟೇಲ್ ತಾಯಿ ಅನುಪಮಾ ಮಹೇಶ್ ಮಾತನಾಡಿ, "ಹಲವು ವರ್ಷಗಳಿಂದ ನಾನು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ಬರುತ್ತಿದ್ದೆ. ಕಾರ್ಯಕರ್ತರ ಶ್ರಮ ದೇವರ ಆಶೀರ್ವಾದ ಇವತ್ತು ಗೆಲುವಿಗೆ ಕಾರಣವಾಗಿದೆ" ಎಂದು ಸಂತಸ ಹಂಚಿಕೊಂಡರು.
"25 ವರ್ಷಗಳ ಬಳಿಕ ಹಾಸನದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಗೆಲುವು ನಮ್ಮ ಪಕ್ಷದ ಕಾರ್ಯಕರ್ತರಿಗೆ ಸಲ್ಲಬೇಕು. ಪರಿಶ್ರಮವೇ ನನ್ನ ಪುತ್ರ ಶ್ರೇಯಸ್ನ ಗೆಲುವಿನ ಶ್ರೇಯಸ್ಸಿಗೆ ಕಾರಣ. ಮಗ ಈ ಬಾರಿ ಗೆದ್ದೇ ಗೆಲ್ಲುತ್ತಾನೆ ಎಂದುಕೊಂಡಿದ್ದೆವು. ಅಲ್ಲದೆ 75,000 ಮತಗಳ ಅಂತರದಿಂದ ಗೆಲ್ಲಬಹುದು ಎಂದು ನಿರೀಕ್ಷೆಯಿತ್ತು. ಆದರೆ ಅಂತರ ಕಡಿಮೆಯಾಗಿದೆ, ಮಗ ಜಯಶೀಲನಾಗಿದ್ದಾನೆ. ಇದು ತುಂಬಾ ಸಂತೋಷ ತಂದಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಗೆಲುವು - K Sudhakar