ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೊಮ್ಮಗ, ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಸುಮಾರು ಅರ್ಧ ಶತಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಚುನಾವಣಾ ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಾವು 40.94 ಕೋಟಿ ರೂ. ಮೌಲ್ಯದ ಚರ ಹಾಗು ಸ್ಥಿರಾಸ್ತಿ ಹೊಂದಿರುವುದಾಗಿ ಅವರು ಘೋಷಿಸಿಕೊಂಡಿದ್ದಾರೆ.
5.44 ಕೋಟಿ ರೂ. ಮೌಲ್ಯದ ಚರ, 35.40 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿ ಇದರಲ್ಲಿ ಸೇರಿದೆ. 9.29 ಲಕ್ಷ ರೂ. ನಗದು ಹೊಂದಿದ್ದಾರೆ. ವಿವಿಧ ಬ್ಯಾಂಕ್‌ಗಳ ಉಳಿತಾಯ ಖಾತೆಗಳಲ್ಲಿ 56 ಲಕ್ಷ ರೂ. ಇದೆ. ಕಳೆದ ಐದು ವರ್ಷದಲ್ಲಿ ಕೃಷಿಯಿಂದ 2.75 ಕೋಟಿ ರೂ., ಆದಾಯ, ಕೃಷಿಯೇತರ ಮೂಲದಿಂದ 1.33 ಕೋಟಿ ಆದಾಯ ಗಳಿಸಿರುವುದಾಗಿ ವಿವರ ನೀಡಿದ್ದಾರೆ.
ಇವರ ಹೆಸರಲ್ಲಿ 31 ಹಸು, 4 ಎತ್ತು, ಒಂದು ಟ್ರ್ಯಾಕ್ಟರ್ ಇದೆ. ಬೆಂಗಳೂರು, ಮೈಸೂರು ಸೇರಿ ವಿವಿಧೆಡೆ ವಾಣಿಜ್ಯ ಕಟ್ಟಡಗಳಿವೆ. ಹೊಳೆನರಸೀಪುರ ಹಾಗೂ ಬೆಂಗಳೂರಿನ ನೆಲಮಂಗಲದಲ್ಲಿ ಆಸ್ತಿ ಹೊಂದಿರುವ ಪ್ರಜ್ವಲ್ ರೇವಣ್ಣ ತಮ್ಮ ಅತ್ತೆ ಅನುಸೂಯ ಅವರಿಂದ 22 ಲಕ್ಷ ರೂ., ಅತ್ತೆ ಶೈಲಜಾರಿಂದ 10 ಲಕ್ಷ ರೂ., ಅಜ್ಜಿ ಚನ್ನಮ್ಮರಿಂದ 23 ಲಕ್ಷ ರೂ., ಕುಪೇಂದ್ರ ರೆಡ್ಡಿ ಅವರಿಂದ ಒಂದು ಲಕ್ಷ ರೂ., ತಂದೆ ರೇವಣ್ಣರಿಂದ 86 ಲಕ್ಷ ರೂ, ಸಹೋದರ ಡಾ.ಸೂರಜ್ ರೇವಣ್ಣ ಅವರಿಂದ 1 ಕೋಟಿ ರೂ. ಸಾಲ ಪಡೆದಿದ್ದು, ಇವರು ಹೊಂದಿರುವ ಒಟ್ಟು ಸಾಲದ ಒಟ್ಟು ಮೊತ್ತ 4.48 ಕೋಟಿ ರೂ. ಆಗಿದೆ. ರಾಜ್ಯ ಸರ್ಕಾರಕ್ಕೆ 3.4 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದು, ತೆರಿಗೆ ಸಲ್ಲಿಕೆ ಬಗ್ಗೆ ಕಾನೂನು ಹೋರಾಟ ನಡೆಸುತ್ತಿರುವ ಬಗ್ಗೆಯೂ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಚಿನ್ನಾಭರಣ ಮಾಹಿತಿ: 67 ಲಕ್ಷ ರೂ. ಮೌಲ್ಯದ 1 ಕೆ.ಜಿ 100 ಗ್ರಾಂ ಚಿನ್ನಾಭರಣ, 17.48 ಲಕ್ಷ ರೂ. ಮೌಲ್ಯದ 23 ಕೆ.ಜಿ ಬೆಳ್ಳಿ ಹಾಗೂ 1.90 ಲಕ್ಷ ಮೌಲ್ಯದ ವಜ್ರದ ಆಭರಣಗಳನ್ನು ಪ್ರಜ್ವಲ್ ರೇವಣ್ಣ ಹೊಂದಿದ್ದಾರೆ.