ರಾಯಚೂರು: ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ದೇವೇಗೌಡರು ಮತ್ತು ನನ್ನ ಹೆಸರನ್ನು ಪದೇ ಪದೆ ಎಳೆದು ತರುತ್ತಿದ್ದೀರಾ. ನಿಮಗೆ ನನ್ನ ಮತ್ತು ದೇವೇಗೌಡರ ವರ್ಚಸ್ಸನ್ನು ಹಾಳು ಮಾಡಲು ಸಾಧ್ಯವಿಲ್ಲ. ಹುಟ್ಟಿದಾಗ ಭಗವಂತ ಬರೆದಿರುವ ನನ್ನ ಹಣೆಬರಹವನ್ನು ನೀವ್ಯಾರೂ ಕಿತ್ತುಕೊಳ್ಳೋದಕ್ಕೆ ಆಗಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಸಿಂಧನೂರಿನಲ್ಲಿಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಹಾಸನ ಪೆನ್‌ಡ್ರೈವ್ ಪ್ರಕರಣದ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇ ಬೇಕು. ಅದರಲ್ಲಿ ರಾಜಿ ಇಲ್ಲ. ಈ ಪ್ರಕರಣ ಹೊರಬಂದ ತಕ್ಷಣ ಯಾರೋ ಮಾರ್ಫಿಂಗ್ ಮಾಡಿದ್ದಾರೆ, ಪ್ರಜ್ವಲ್ ರೇವಣ್ಣಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ಹೇಳಿದ್ವಾ?. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗಲೇಬೇಕು ಎಂದು ಧೈರ್ಯವಾಗಿ ಹೇಳಿದ್ದೇವೆ. ತಪ್ಪು ಮಾಡಿಲ್ಲ ಅಂತ ನಾವು ಹೇಳಿಲ್ಲ, ತನಿಖೆ ಮಾಡಿ ಎಂದಿದ್ದೇವೆ ಎಂದರು.
ಪ್ರಕರಣದಲ್ಲಿ ಪದೇ ಪದೆ ಪ್ರಧಾನಮಂತ್ರಿಗಳನ್ನು ಮತ್ತು ಬಿಜೆಪಿ ಪಕ್ಷವನ್ನು ಯಾಕೆ ಎಳೆದು ತರುತ್ತಿದ್ದೀರಿ?. ಆ ಪ್ರಕರಣಕ್ಕೂ ಬಿಜೆಪಿಗೂ, ಪ್ರಧಾನ ಮಂತ್ರಿಗಳೂ ಏನು ಸಂಬಂಧ?. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಲವಾರು ಬಾರಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಯಾರ್‍ಯಾರ ಜವಾಬ್ದಾರಿ ಏನು ಎಂಬುದು ಗೊತ್ತಿಲ್ಲದಿದ್ದರೆ ತಿಳಿದುಕೊಳ್ಳಿ ಎಂದು ರಾಜ್ಯ ಸರ್ಕಾರದ ವಿರುದ್ಧ ಟೀಕಾಸಮರ ನಡೆಸಿದರು.
ಡಿಕೆಶಿ ವಿರುದ್ಧ ಪರೋಕ್ಷ ವಾಗ್ದಾಳಿ: ಪಾಪ, ಕೆಲವರು ಕುಮಾರಸ್ವಾಮಿಯವರೇ ಕ್ಯಾಸೆಟ್ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ನನಗೇನು ಹುಚ್ಚಾ?. ಈ ಕ್ಯಾಸೆಟ್ ಪ್ರಿಪೇರ್ ಮಾಡೋದು ನಾನಲ್ಲ, ಯಾವ್ಯಾವ ಕಾಲದಿಂದ ಸಿನಿಮಾ ಟೆಂಟ್‌ಗಳಲ್ಲಿಯೂ ಸಹ ಅಶ್ಲೀಲ ಚಿತ್ರಗಳನ್ನು ಹಾಕಿ ಓಡಿಸುತ್ತಿದ್ದರಲ್ಲ ಅದರ ಅನುಭವ ಯಾರಿಗಿದೆ ಎಂದು ನನಗೆ ಗೊತ್ತು. ಆ ಕ್ಯಾಸೆಟ್ ಪ್ರಿಪ್ರೇರ್ ಮಾಡುವ ಅನುಭವ ಇನ್ನೂ ಮುಂದುವರೆದಿದೆ ಅಷ್ಟೇ ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ಹರಿಹಾಯ್ದರು.
ಮುಖ್ಯಮಂತ್ರಿಗೆ ಮನುಷ್ಯತ್ವ ಇಲ್ಲ: ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಮಗೂ ರೇವಣ್ಣನ ಕುಟುಂಬಕ್ಕೂ ಸಂಬಂಧವಿಲ್ಲ ಎನ್ನುತ್ತಿದ್ದ ಕುಮಾರಸ್ವಾಮಿ ಹಾಗೂ ದೇವೇಗೌಡರು ತಮ್ಮ ಮನೆಗೆ ವಕೀಲರನ್ನು ಕರೆಸಿ ಚರ್ಚೆ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಈ ಮುಖ್ಯಮಂತ್ರಿಗೆ ಮನುಷ್ಯತ್ವ ಇಲ್ಲದೇ ಇರಬಹುದು. ನೋವಿನಲ್ಲಿರುವ ನನ್ನ ತಂದೆ -ತಾಯಿಗೆ ಆತ್ಮಸ್ಥೈರ್ಯ ತುಂಬಲು ನಿನ್ನೆ, ಮೊನ್ನೆ ಬೆಂಗಳೂರಿನ ಅವರ ಮನೆಯಲ್ಲಿ ಅವರೊಂದಿಗೆ ಕುಳಿತಿದ್ದೆ. ಕ್ಯಾಮರಾ ರೆಕಾರ್ಡ್ ಇದೆ, ತರಿಸಿಕೊಂಡು ನೋಡಿ ಸಿದ್ದರಾಮಯ್ಯನವರೇ, ನಿಮ್ಮ ಯೋಗ್ಯತೆಗೆ ತಂದೆ-ತಾಯಿ ಬಾಂಧವ್ಯ ಇಲ್ಲದೇ ಇರಬಹುದು. ಆ ಸಂಸ್ಕೃತಿಯಿಂದ ಬಂದಿಲ್ಲದೇ ಇರಬಹುದು. ನನಗೆ ನನ್ನ ತಂದೆ-ತಾಯಿ ಮುಖ್ಯ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಮಹಿಳೆ ಅಪಹರಣ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋದ ಹೆಚ್.ಡಿ.ರೇವಣ್ಣ - H D Revanna