ಬೆಂಗಳೂರು : ಲೋಕಸಭಾ ಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣಾ ಪ್ರಚಾರದ ಬಳಲಿಕೆ ಮತ್ತು ಪ್ರಜ್ವಲ್ ರೇವಣ್ಣ ಪ್ರಕರಣದಿಂದಾಗಿ ಮಾನಸಿಕ ಒತ್ತಡಕ್ಕೆ ಸಿಲುಕಿದ್ದ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಇದೀಗ ಮೈಂಡ್ ರಿಲೀಫ್ಗಾಗಿ ರೆಸಾರ್ಟ್ ಮೊರೆ ಹೋಗಿದ್ದಾರೆ. ಕುಟುಂಬ ಸಮೇತರಾಗಿ ಪ್ರಕೃತಿ ಮಡಿಲಿನಲ್ಲಿ ಫುಲ್ ರಿಲ್ಯಾಕ್ಸ್ ಮೂಡ್ಗೆ ಜಾರಿದ್ದಾರೆ.
ಇತ್ತೀಚೆಗಷ್ಟೇ ಹೃದಯದ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡು ಕಳೆದ ಎರಡು ತಿಂಗಳಿನಿಂದ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿದ್ದ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಸಾಕಷ್ಟು ಆಯಾಸಗೊಂಡಿದ್ದರು. ಹೀಗಿದ್ದರೂ ವಿಶ್ರಾಂತಿಗೆ ಸಮಯ ಸಿಗದಂತೆ ಪರಿಷತ್ ಚುನಾವಣೆ ಎದುರಾಯಿತು. ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಚುನಾವಣಾ ಪ್ರಚಾರದ ಮೂಲಕ ಮೈತ್ರಿ ಧರ್ಮ ಪಾಲನೆ ಮಾಡಬೇಕಾದ ಅನಿವಾರ್ಯತೆಯಿಂದ ವಿಶ್ರಾಂತಿ ಬದಲು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಅದರ ನಡುವೆ ಪ್ರಜ್ವಲ್ ರೇವಣ್ಣ ಪ್ರಕರಣದಿಂದಾಗಿ ಮಾನಸಿಕ ಒತ್ತಡಕ್ಕೂ ಒಳಗಾಗಿದ್ದರು. ಆದರೆ, ಪ್ರಚಾರ ಕಾರ್ಯ ಮುಗಿಯುತ್ತಿದ್ದಂತೆ ಹೆಚ್. ಡಿ ಕುಮಾರಸ್ವಾಮಿ ವಿಶ್ರಾಂತಿ ಮೊರೆ ಹೋಗಿದ್ದಾರೆ.
ಕುಟುಂಬದ ಸಮೇತವಾಗಿ ರಾಜ್ಯದ ರೆಸಾರ್ಟ್ ಒಂದಕ್ಕೆ ತೆರಳಿರುವ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ ರೇವತಿ ಹಾಗೂ ಮೊಮ್ಮಗ ಚಿ. ಅವ್ಯಾನ್ ದೇವ್ ಜತೆ ರೆಸಾರ್ಟ್ನ ಪ್ರಕೃತಿ ಮಡಿಲಿನಲ್ಲಿ ಕಾಲ ಕಳೆಯುತ್ತಿದ್ದಾರೆ.
ಬೋಟ್ನಲ್ಲಿ ವಿಹಾರ ಮಾಡಿದ ನಂತರ, ರೆಸಾರ್ಟ್ನ ಜೀಪ್ನಲ್ಲಿ ಸಫಾರಿಗೆ ತೆರಳಿ ಕಾಡು ಪ್ರಾಣಿಗಳ ವೀಕ್ಷಣೆ ಮಾಡುತ್ತಾ, ಕಾಡು, ಪ್ರಕೃತಿ ವಿಸ್ಮಯಗಳ ವೀಕ್ಷಿಸುತ್ತಾ ಎಲ್ಲ ರೀತಿಯ ರಾಜಕೀಯ ಜಂಜಾಟ ಬದಿಗೊತ್ತಿ, ಆಯಾಸ, ಬಳಲಿಕೆ, ಪ್ರಜ್ವಲ್ ಪ್ರಕರಣ ಮರೆತು ಫುಲ್ ರಿಲ್ಯಾಕ್ಸ್ ಆಗಿದ್ದಾರೆ. ಕುಟುಂಬದ ಜೊತೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ.
ಇನ್ನು ರೆಸಾರ್ಟ್ ಪ್ರಯಾಣದ ಸಂದರ್ಭದಲ್ಲಿ ಎದುರಾದ ಸ್ಥಳೀಯರ ಯೋಗಕ್ಷೇಮವನ್ನು ಕುಮಾರಸ್ವಾಮಿ ವಿಚಾರಿಸಿದರು. ಎಲ್ಲಿಯೇ ಹೋದರೂ ಸ್ಥಳೀಯರ ಅಹವಾಲು ಆಲಿಸುವುದನ್ನು ರೂಢಿಸಿಕೊಂಡಿರುವ ಕುಮಾರಸ್ವಾಮಿ ಚುನಾವಣಾ ಪ್ರಚಾರವಿರಲಿ, ರಾಜ್ಯ ಪ್ರವಾಸವಿರಲಿ, ದಾರಿ ಉದ್ದಕ್ಕೂ ಎದುರಾಗುವ ಜನರ ಸಮಸ್ಯೆ ಆಲಿಸುವ ವ್ಯವಧಾನ ಇಟ್ಟುಕೊಂಡಿದ್ದಾರೆ. ರೆಸಾರ್ಟ್ಗೆ ತೆರಳಿದರೂ ಸ್ಥಳೀಯ ಯೋಗಕ್ಷೇಮ ವಿಚಾರಿಸುವುದನ್ನು ಹೆಚ್ಡಿಕೆ ಮರೆಯಲಿಲ್ಲ ಎನ್ನುವುದು ವಿಶೇಷ.
ಇದನ್ನೂ ಓದಿ : ಯಾರ ಮಾತನ್ನೂ ಕೇಳ್ಬೇಡ, ಬಂದು ತನಿಖೆಗೆ ಸಹಕರಿಸು; ಪ್ರಜ್ವಲ್ ರೇವಣ್ಣಗೆ ಕುಮಾರಸ್ವಾಮಿ ಮನವಿ - Hdk On Prajwal Case