ಧಾರವಾಡ: ಮಹದಾಯಿ ಯೋಜನೆ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
"ನಾನು ಮಂತ್ರಿಯಾಗಿ 15 ದಿನಗಳಾಗಿವೆ. ಇದು ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. 2006ರಲ್ಲಿ ನಾನು ಸಿಎಂ ಆಗಿದ್ದಾಗ ಕಳಸಾ-ಬಂಡೂರಿಗೆ ಅನುಮತಿ ಕೊಟ್ಟಿದ್ದೆ. ಆಗ ನಾನೇ ನೂರು ಕೋಟಿ ಇಟ್ಟಿದ್ದೆ. 2006ರಿಂದ 2014ರವರೆಗೆ ಹಲವಾರು ಸರ್ಕಾರಗಳು ಬಂದಿವೆ. ಈಗಾಗಲೇ ನ್ಯಾಯಾಧೀಕರಣ ನೀರು ಹಂಚಿದೆ. ಗೆಜೆಟ್ ನೋಟಿಫಿಕೇಷನ್ ಆಗಿತ್ತು. ಗೋವಾದ ತಕರಾರು ಇದೆ. ಕಾನೂನು ರೀತಿ ನಮ್ಮ ಪಾಲಿನ ನೀರು ಪಡೆಯಬೇಕಿದೆ. ಇನ್ನೊಂದು ತಿಂಗಳಲ್ಲಿ ಈ ಬಗ್ಗೆ ಮಾತನಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ" ಎಂದರು.
ಸಂಡೂರ ಗಣಿಗಾರಿಕೆಗೆ ಒಪ್ಪಿಗೆ ನೀಡಿರುವ ಕುರಿತು ಮಾತನಾಡಿದ ಅವರು, "2016ರಿಂದಲೇ ಈ ಪ್ರಸ್ತಾಪ ಇತ್ತು. ಇದು ನನ್ನಿಂದ ಈಗ ಆಗಿರೋದು ಅಲ್ಲ. ಈ ವಿಷಯ 2016ರಿಂದ ಪ್ರಾರಂಭ ಆಗಿದೆ. ದೇವದಾರ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಒಪ್ಪಿಗೆಯ ಪ್ರಸ್ತಾವನೆ ರಾಜ್ಯದಿಂದ ಹೋಗಿತ್ತು. 2017ರಲ್ಲಿ ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಕೇಂದ್ರದ ಅರಣ್ಯ, ಪರಿಸರ ಇಲಾಖೆಯೂ ಒಪ್ಪಿಗೆ ಕೊಟ್ಟಿದೆ. 2016ರಿಂದ ಪ್ರಾರಂಭ ಆಗಿ ಸಹಿ ಹಂತಕ್ಕೆ ನನ್ನ ಮುಂದೆ ಬಂದಿತ್ತು. ಫೈಲ್ ಕ್ಲಿಯರೆನ್ಸ್ಗೆ ಮಾತ್ರ ನನ್ನ ಬಳಿ ಬಂದಿತ್ತು. ಎರಡು ಫೈನಾನ್ಸಿಯಲ್ ಸಂಸ್ಥೆಗಳಲ್ಲಿ ಸಾಲ ಪಡೆಯಲು ಗಣಿ ಕಂಪನಿಗಳು ಕೇಂದ್ರ ಸರ್ಕಾರವನ್ನು ಕೇಳಿದ್ದವು. ಇದೆಲ್ಲವೂ ಹಿಂದಿನದೇ ಪ್ರಕ್ರಿಯೆ. ನಾನಾಗಿಯೇ ಹೊಸದಾಗಿ ಮಾಡಿದ್ದಲ್ಲ" ಎಂದರು.
ಎಸ್.ಆರ್. ಹಿರೇಮಠ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, "ಅವರು ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದಾರೆ. ಆದರೆ ಅವರು ನೇರವಾಗಿ ಬಂದು ನನ್ನನ್ನು ಭೇಟಿಯಾಗಲಿ, ನನ್ನ ಕಚೇರಿ ಯಾವಾಗಲೂ ತೆರೆದಿರುತ್ತದೆ. ಚರ್ಚೆ ಮಾಡಲಿ, ಚರ್ಚೆಗೆ ನಾನು ಮುಕ್ತವಾಗಿದ್ದೇನೆ. ಲೋಕಾಯುಕ್ತ ಕೋರ್ಟ್ಗೆ ಹೋಗಿ, ಮುಗಿದು ಹೋಗಿದೆ. ಅದಿರು ಉತ್ಪಾದನೆಗೆ ಮಾತ್ರ ಕೊಟ್ಟಿರೋ ಒಪ್ಪಿಗೆ, ಹೊಸದಾದ ಗಣಿಗಾರಿಕೆಗೆ ಅನುಮತಿ ಅಲ್ಲ ಇದು. ಹಿರೇಮಠರಿಗೆ ಗೊಂದಲಗಳಿದ್ದಲ್ಲಿ ಅವರ ಬಳಿಯಲ್ಲಿರುವ ರೇಕಾರ್ಡ್ಸ್ ತಗೆದುಕೊಂಡು ಬರಲಿ" ಎಂದರು.
ರಾಜ್ಯದಲ್ಲಿ ಬೆಂಗಳೂರು - ಮುಂಬೈ ಕೈಗಾರಿಕಾ ಕಾರಿಡಾರ್ ವಿಷಯದ ಕುರಿತು ಮಾತನಾಡಿ, "ನಾನು ಈಗ ಹೊಸದಾಗಿ ಮಂತ್ರಿಯಾಗಿದ್ದೇನೆ. ಚೆನ್ನೈ-ಬೆಂಗಳೂರು, ಬೆಂಗಳೂರು-ಪುಣೆ-ಮುಂಬೈ ಕಾರಿಡಾರ್ ಬಗ್ಗೆ ಚರ್ಚೆಯಾಗಿದೆ. ಆದರೆ, ನಮ್ಮ ನಿರೀಕ್ಷೆಗೆ ಸ್ಪೀಡ್ ಇಲ್ಲ. ಹೀಗಾಗಿ ಅದರ ಬಗ್ಗೆ ಚರ್ಚೆ ಮಾಡುತ್ತೇವೆ. ಪುಣೆ-ಬೆಂಗಳೂರು ಎನ್ಎಚ್ 4 ಅಕ್ಕಪಕ್ಕ ಕೈಗಾರಿಕೆಗಳು ಸ್ಥಾಪನೆಯಾಗದ ವಿಚಾರದಲ್ಲಿ ನನ್ನ ಬೃಹತ್ ಕೈಗಾರಿಕೆ ಇಲಾಖೆ ಹಣ ಹೂಡಿಕೆ ಮಾಡುವಂತಹುದಲ್ಲ. ಕೈಗಾರಿಕೆಗಳ ಆರಂಭಕ್ಕೆ ಸಂಬಂಧಿಸಿದ ಪಾಲಿಸಿ ಮಾಡುವ ಇಲಾಖೆ ನನ್ನದು. ಆದರೆ ಕೇಂದ್ರ ಸರ್ಕಾರದ ಆತ್ಮ ನಿರ್ಭರ ಕಾರ್ಯಕ್ರಮವಿದೆ. ಈ ಯೋಜನೆ ಅಡಿ ಸಬ್ಸಿಡಿ ಹಾಗೂ ಇತರ ಪಾಲಿಸಿ ಮಾಡುತ್ತಿದ್ದಾರೆ. ಆ ಪಾಲಿಸಿ ಅಡಿ ರಾಜ್ಯಕ್ಕೆ ಅನುಕೂಲ ಆಗುವುದನ್ನು ಮಾಡುತ್ತೇವೆ. ಹಲವಾರು ಕಡೆ ಕೈಗಾರಿಕೆ ತರಲು ಮುಂದಾಗುತ್ತೇವೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದ ಕೈಗಾರಿಕಾ ಪ್ರಸ್ತಾಪಗಳು ನನ್ನ ಬಳಿ ಬರಬಹುದು. ಹಾಗೇ ಬಂದಾಗ ಪ್ರಾಮಾಣಿಕವಾಗಿ ಸ್ಪಂದಿಸುವೆ" ಎಂದರು.
ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳ ಸ್ಥಾಪನೆ ಹಿನ್ನಡೆ ಕುರಿತು ಮಾತನಾಡಿ, "ನಾನು ನಿನ್ನೆ ಮೊನ್ನೆ ಉತ್ತರ ಕರ್ನಾಟಕಕ್ಕೆ ಬಂದವನಲ್ಲ. ನಾನು 14 ತಿಂಗಳ ಸಿಎಂ ಆಗಿದ್ದಾಗ ಕೊಪ್ಪಳದಲ್ಲಿ ಎಲೆಕ್ಟ್ರಾನಿಕ್ ಟಾಯ್ಸ್ ಉದ್ಯಮ ಮಾಡಿದ್ದೇವೆ. ಅಲ್ಲಿ ಅನೇಕರಿಗೆ ಕೆಲಸ ಸಿಕ್ಕಿದೆ. ಬೇರೆ ಬೇರೆ ಸರ್ಕಾರಗಳು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ನಾನು ಮಾತನಾಡಲಾರೆ" ಎಂದರು.
ವಾಲ್ಮೀಕಿ ನಿಗಮ ಭ್ರಷ್ಟಾಚಾರದಲ್ಲಿ ಮತ್ತೊಬ್ಬ ಸಚಿವರ ಭಾಗಿ ಆರೋಪದ ಕುರಿತು ಪ್ರತಿಕ್ರಿಯಿಸಿ, ಯತ್ನಾಳ್ ಆರೋಪಕ್ಕೆ ಪೂರಕವಾದ ಹೇಳಿಕೆ ನೀಡಿದ ಎಚ್‌ಡಿಕೆ, "ಮುಂದೆ ಏನೇನಾಗುತ್ತೋ ನೋಡೋಣ. ರಾಜ್ಯದಲ್ಲಿ ಒಂದೊಂದು ದಿನ ಒಂದೊಂದು ಪ್ರಕರಣಗಳು ಬರುತ್ತಿವೆ. ಹೊಸ ಹೊಸ ಪ್ರಕರಣಗಳತ್ತ ಹೊರಟಿದ್ದೇವೆ. ಹಳೇ ಪ್ರಕರಣ ಬಿಟ್ಟು ಬಿಡುತ್ತೇವೆ. ಈಗ ವಾಲ್ಮೀಕಿ ಪ್ರಕರಣ ಸಹ ಮರೆತು ಬಿಟ್ಟಿದ್ದೇವೆ, ಚರ್ಚೆಯೇ ಕಾಣುತ್ತಿಲ್ಲ. 84 ಕೋಟಿ ರೂ. ಹಣ ಬೇರೆ ಬೇರೆ ರೀತಿಯಲ್ಲಿ ದುರುಪಯೋಗವಾಗಿರುವ ಮಾಹಿತಿ ಇದೆ. ಮಂತ್ರಿಯೂ ಒಬ್ಬರು ರಾಜೀನಾಮೆ ಕೊಟ್ಟಿದಾರೆ. ಎಸ್ಐಟಿ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಏನೇನಾಗುತ್ತದೆ ನೋಡೋಣ. ಇನ್ನೊಬ್ಬ ಮಂತ್ರಿ ಚೇಂಬರ್ನಲ್ಲಿ ಸಭೆ ಕೂಡ ಆಗಿದೆ ಎನ್ನುವ ಸುದ್ದಿಯೂ ಇದೆ. ಯಾವ ಯಾವುದೋ ಅಕೌಂಟ್‌ಗೆ ಹಣ ಹೋಗಿದೆ. ಎಸ್‌ಐಟಿಯಿಂದ ಹಣವೂ ಫ್ರಿಜ್ ಆಗಿದೆ ಅಂತಿದ್ದಾರೆ. ತನಿಖೆ ಯಾವ ಮಟ್ಟಕ್ಕೆ ಬಂದು ನಿಲ್ಲುತ್ತದೆ ನೋಡೋಣ" ಎಂದರು.
ಇದನ್ನೂ ಓದಿ: ದೇವದಾರಿ ಗಣಿಗಾರಿಕೆ ಯೋಜನೆ; ಕುದುರೆಮುಖ ಕಬ್ಬಿಣ ಅದಿರು ಕಂಪನಿ ಉನ್ನತಾಧಿಕಾರಿಗಳ ಸಭೆ ನಡೆಸಿದ ಹೆಚ್ಡಿಕೆ - H D Kumaraswamy