ಚಾಮರಾಜನಗರ: ಗ್ಯಾರಂಟಿ ಯೋಜನೆಗಳ ಜಾರಿಯಿಂದ ಬಿಜೆಪಿಯವರಿಗೆ ಹೊಟ್ಟೆಯುರಿ ಉಂಟಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಕೊಳ್ಳೇಗಾಲದ ಎಂಜಿಎಸ್‌ವಿ ಮೈದಾನದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಬಳಿಕ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ, ಗ್ಯಾರಂಟಿ ಯೋಜನೆಗೆ ಎಷ್ಟೇ ಖರ್ಚಾದರೂ ಸರಿ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಭರವಸೆ ಕೊಟ್ಟರು.
ಬಡವರು, ದಲಿತರು, ಹಿಂದುಳಿದ ವರ್ಗಗಳನ್ನು ಕಂಡರೆ ಬಿಜೆಪಿ ಅವರಿಗೆ ಆಗಲ್ಲ. ಗ್ಯಾರಂಟಿಗಳ ಜಾರಿಯಿಂದ ಅವರಿಗೆ ಹೊಟ್ಟೆಯುರಿ ಆಗುತ್ತಿದೆ. ಅದಕ್ಕೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಇತ್ತೀಚೆಗೆ ವೈರಲ್ ಆದ ಪತ್ರಿಕಾ ತುಣುಕಿನ ವರದಿ ವಿರುದ್ಧ ಕಿಡಿಕಾರಿದರು.
ಬಿಜೆಪಿಯವರು ಮಾತಿಗೆ ತಪ್ಪಿ ನಡೆಯುವವರು. ಸುಳ್ಳು ಅವರ ಮನೆ ದೇವರು. ಆದರೆ ಕಾಂಗ್ರೆಸ್ ನುಡಿದಂತೆ ನಡೆಯುವ ಸರ್ಕಾರ. ಬಡವರಿಗೆ ಅಕ್ಕಿ ಕೊಟ್ಟರೆ ಕಾಂಗ್ರೆಸ್ ಪರ ನಿಲ್ಲುತ್ತಾರೆ ಎಂದು ಅಕ್ಕಿಯನ್ನೇ ಕೊಡಲಿಲ್ಲ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.
ಹಿಟ್ಲರ್ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿರುವವರು ನರೇಂದ್ರ ಮೋದಿ. ಅವರು ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ. ಬಿಜೆಪಿ ಆಡಳಿತದಲ್ಲಿ ಸಂವಿಧಾನ ಸುರಕ್ಷಿತವಾಗಿಲ್ಲ. ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಗೆಲ್ಲಬೇಕು ಎಂದರು.
ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ. ಇಂದಿಗೂ ಕೂಡ ಕಪ್ಪು ಹಣ ವಾಪಸ್ ತಂದಿಲ್ಲ. ಮೇಕ್ ಇನ್ ಇಂಡಿಯಾ ಆಗಿಲ್ಲ. ಅಚ್ಚೇ ದಿನ್ ಬಂದಿಲ್ಲ ಎಂದು ಟೀಕಿಸಿದರು.
ಮೋದಿ ಮುಖ ನೋಡಿ ವೋಟ್ ಹಾಕಿ ಎಂದು ರಾಜ್ಯದ ನಾಯಕರು ಹೇಳುತ್ತಿದ್ದಾರೆ. ಇಲ್ಲಿನ ನಾಯಕರಿಗೆ ಓಟ್ ಕೇಳುವ ನೈತಿಕತೆ ಇಲ್ಲ. ಮೋದಿ ಮುಖ ಬಿಟ್ಟು ಚುನಾವಣೆಗೆ ವಸ್ತುವಿಲ್ಲ. ತಮ್ಮ ಸಾಧನೆ ಹೇಳಿ ಅವರು ಮತ ಕೇಳುತ್ತಿಲ್ಲ. ತಾವು ಈ ಬಾರಿ ಕೆಟ್ಟದ್ದಾಗಿ ಸೋಲುತ್ತೇವೆಂದು ಹೆದರಿ ಬಿಜೆಪಿ-ಜೆಡಿಎಸ್ ಒಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂಓದಿ: ಶಿವಮೊಗ್ಗ ಲೋಕಸಭೆಗೆ ಈಶ್ವರಪ್ಪ ನಾಮಪತ್ರ ಸಲ್ಲಿಕೆ: ಎದುರಾಳಿಗಳಿಗೆ ತಿರುಗೇಟು - Eshwarappa Nomination