ಬೆಂಗಳೂರು: 5 ಗ್ಯಾರಂಟಿ ಯೋಜನೆಗಳನ್ನು ರಾಜ್ಯಕ್ಕೆ ಕೊಟ್ಟಿದ್ದೇವೆ. ಇಡೀ ದೇಶಕ್ಕೆ ಮಾದರಿಯಾಗಿದ್ದೇವೆ. ಭಾವನೆಯ ಬದುಕು ಬಿಟ್ಟು, ಹಸಿವು ಮುಕ್ತ ರಾಜ್ಯವಾಗಬೇಕು. ಎಲ್ಲ ವರ್ಗದ ಜನರು ಬದುಕಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯವೆಂದರೆ ಬೆಲೆಕಟ್ಟಿ ಪಡೆಯುವ ವಸ್ತುವಲ್ಲ, ಅದು ನಮ್ಮ ಉಸಿರು. ಸ್ವಾತಂತ್ರೋತ್ಸವ ಅಂದ್ರೆ ಇತಿಹಾಸ ನೆನಪಿಸುವ ದಿನ. ಹಿಂದೆ ಹೇಗೆ ಇದ್ದೆವು?. ಈಗ ಹೇಗೆ ಇದ್ದೇವೆ ಎಂಬ ಅವಲೋಕನದ ದಿನ ಎಂದರು.
ಐದು ಗ್ಯಾರಂಟಿಗಳನ್ನು ರಾಜ್ಯಕ್ಕೆ ಕೊಟ್ಟಿದ್ದು, ಇಡೀ ದೇಶಕ್ಕೆ ಮಾದರಿಯಾಗಿದ್ದೇವೆ. ಈ ದಿನವನ್ನು ನೆನಪಿಸುವ ಕೆಲಸ ಮಾಡುತ್ತಿದ್ದೇವೆ. ಇಡೀ ವರ್ಷ ಕಾರ್ಯಕ್ರಮಕ್ಕೆ ಕರೆ ಕೊಟ್ಟಿದ್ದೇವೆ. ಅದಕ್ಕಾಗಿ ಒಂದು ಕಮಿಟಿ ಮಾಡಿದ್ದೇವೆ ಎಂದು ತಿಳಿಸಿದರು.
ಸಾರ್ವಜನಿಕ ವಲಯ ಕಟ್ಟಿ ಬೆಳಸಿದ್ದು ಕಾಂಗ್ರೆಸ್ ಪಕ್ಷ. ಅಂದು ಬ್ರಿಟಿಷರ ಪರ ನಿಂತಿದ್ದವರನ್ನು ತಿರಸ್ಕಾರ ಮಾಡಬೇಕಿದೆ. ಕ್ವಿಟ್ ಇಂಡಿಯಾ ಚಳುವಳಿ ಹತ್ತಿಕ್ಕಲು ಶ್ಯಾಮ್ ಪ್ರಸಾದ್ ಮುಖರ್ಜಿ ಪತ್ರ ಬರೆದಿದ್ದರು ಎಂದು ಇದೇ ವೇಳೆ ಸ್ಮರಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ @DKShivakumar ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಮುಖ್ಯಮಂತ್ರಿಗಳಾದ @siddaramaiah ಸೇರಿದಂತೆ ಹಲವರು ಉಪಸ್ಥಿತರಿದ್ದರು.#IndependenceDay2024 pic.twitter.com/FCEY3DAJNv
— Karnataka Congress (@INCKarnataka) August 15, 2024
ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದ ಪಕ್ಷ. ಈ ಪಕ್ಷದಲ್ಲಿ ಇದ್ದೇವೆ ಅನ್ನುವುದೇ ನಮಗಿರುವ ಹೆಮ್ಮೆಯಾಗಿದೆ. ಜವಾಹರಲಾಲ್ ನೆಹರೂ, ವಲ್ಲಭಭಾಯಿ ಪಟೇಲ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ ಎಂಬ ಸುಳ್ಳು ಸುದ್ದಿ ಗಮನಿಸಿದ್ದೇವೆ. ಈ ಹೋರಾಟಕ್ಕಾಗಿ ಕಾಂಗ್ರೆಸ್ಸಿಗರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.
ದೇಶದಲ್ಲಿ ಅನೇಕ ನಕಲಿ ದೇಶ ಭಕ್ತರಿದ್ದಾರೆ. ಅದರ ನಡುವೆ ನಮ್ಮ ಹಿರಿಯರು ನಮ್ಮತನವನ್ನು ಉಳಿಸಿದ್ದಾರೆ. ಸ್ವಾತಂತ್ರ ಹೋರಾಟದ ಮೊದಲು ಕಿಚ್ಚು ಹಚ್ವಿದ್ದೇ ನಮ್ಮ ಕರ್ನಾಟಕ. ನೂರು ವರ್ಷಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷರಾಗಿ ಮಹಾತ್ಮ ಗಾಂಧಿ ಕರ್ನಾಟಕದಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದರು ಎಂದು ನೆನೆದರು.
ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಲ್ಲ: ಇದೇ ವೇಳೆ ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಹಾಕಬೇಕೆಂಬ ಸ್ವಪಕ್ಷೀಯರ ಬೇಡಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾವ ಕಾರಣಕ್ಕೂ ಪಂಚ ಗ್ಯಾರಂಟಿಗಳು ನಿಲ್ಲಿಸಲ್ಲ ಎಂದು ಸ್ಪಷ್ಟಪಡಿಸಿದರು.