ಉಡುಪಿ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಯಾವತ್ತಿಗೂ ಕತ್ತರಿ ಹಾಕುವುದಿಲ್ಲ. ಈ ಚರ್ಚೆ ಸರ್ಕಾರದ ಮುಂದೆ ಇಲ್ಲ. ಗ್ಯಾರಂಟಿ ಯೋಜನೆಗಳ ಬಗ್ಗೆ ಪುನರ್ ಪರಿಶೀಲನೆ ಕೂಡ ಮಾಡುವುದಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಉಡುಪಿಯಲ್ಲಿಂದು ಮಾತನಾಡಿದ ಅವರು, ಚುನಾವಣೆಗಿಂತ ಮೊದಲು ಕೊಟ್ಟ ಭರವಸೆ ಜಾರಿಯಲ್ಲಿರುತ್ತದೆ. ಗ್ಯಾರಂಟಿಗಳು ಮೊದಲು ಹೇಗಿತ್ತೋ ಹಾಗೆಯೇ ಮುಂದುವರಿಯುತ್ತದೆ. ಗ್ಯಾರಂಟಿ ಬಗ್ಗೆ ಯಾರು ಅನ್ಯತಾ ವ್ಯಾಖ್ಯಾನಿಸಬಾರದು. ಪರಿಷ್ಕರಣೆ ಬಗ್ಗೆ ಜಾರಕಿಹೊಳಿಯವರು ಮಾತನಾಡಿರಲಿಕ್ಕಿಲ್ಲ. ಕ್ಯಾಬಿನೆಟ್ನ ಧ್ವನಿ ಕೂಡ ಒಂದೇ ಆಗಿದೆ. ಗ್ಯಾರಂಟಿ ಮುಂದುವರಿಯಬೇಕು. ಚುನಾವಣೆಗೆ ಸ್ವಾರ್ಥದ ರಾಜಕಾರಣಕ್ಕೆ ಈ ಯೋಜನೆ ಜಾರಿಗೆ ತಂದದ್ದಲ್ಲ. ಮಹಿಳೆಯರ ಸಬಲೀಕರಣ, ಬಡವರ ಉದ್ಧಾರ, ನಮ್ಮ ಮುಖ್ಯ ಉದ್ದೇಶವಾಗಿದೆ. ಇವತ್ತಿನವರೆಗೆ ಇರುವ ಮಾನದಂಡದಲ್ಲೇ ಯೋಜನೆಗಳು ಮುಂದುವರಿಯುತ್ತದೆ. ಜನರಿಗೆ ಕೊಟ್ಟಂತಹ ಭಾಷೆಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದರು.
ಜಿಲ್ಲೆಯಲ್ಲಿ 200 ಕೋಟಿ ರೂ. ಮಳೆ ಹಾನಿ: ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜಿಲ್ಲಾಡಳಿತದ ಬಳಿ ಇರುವ ಹಣದಲ್ಲಿ ಹಣ ಬಿಡುಗಡೆ ಮಾಡಿದ್ದೇವೆ. ಸ್ಪೆಷಲ್ ಫಂಡ್ಗಾಗಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಜಿಲ್ಲೆಗೆ ಸ್ಪೆಷಲ್ ಪ್ಯಾಕೇಜ್ ಕೊಡಬೇಕೆಂದು ಒತ್ತಾಯಿಸಿದ್ದೇವೆ. ಮನೆ, ರಸ್ತೆ, ಕಾಲು ಸಂಕ, ಬ್ರಿಡ್ಜ್ ಬಹಳಷ್ಟು ಹಾನಿಯಾಗಿದೆ ಎಂದರು.
ಸುನಿಲ್ ಕುಮಾರ್ ವಿರುದ್ಧ ವಾಗ್ದಾಳಿ: ಸುನೀಲ್ ಕುಮಾರ್ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬ ಭಾವನೆಯಲ್ಲಿದ್ದಾರೆ. ಕಾರ್ಕಳದ, ಎರಡು ಜಿಲ್ಲೆ ಜನರಿಗೆ ಮಹಾಮೋಸವಾಗಿದೆ. ದೇವರು- ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದವರು ಭಗವಂತನಿಗೆ ಮೋಸ ಮಾಡಿದ್ದಾರೆ. ಮೂರ್ತಿ ಕಂಚಿನದ್ದೋ ಫೈಬರ್ ಎಂಬುದೋ ಜಗಜ್ಜಾಹಿರಾವಾಗಿದೆ. ಬಿಜೆಪಿಗೆ ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿ ಸತ್ಯ ಮಾಡುವುದು ಕರಗತವಾಗಿದೆ. ಜಿಲ್ಲೆಯ ಜನತೆ ಎಚ್ಚೆತ್ತುಕೊಳ್ಳಬೇಕು. ಇವರು ದೇವರನ್ನೇ ಬಿಡ್ಲಿಲ್ಲ, ಇನ್ನು ಮನುಷ್ಯರು ಯಾವ ಲೆಕ್ಕ? ಬಿಜೆಪಿ ಆಡಳಿತದ ಕೊನೆಯ ಕ್ಯಾಬಿನೆಟ್ ಸಭೆಯಲ್ಲಿ ಗೋಮಾಳದಲ್ಲಿ ಮೂರ್ತಿ ಸ್ಥಾಪನೆ ಮಾಡಬಾರದೆಂದು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಮೂರ್ತಿ ಕಾಮಗಾರಿ ಮುಂದುವರಿಸಬೇಕು ಎಂಬುದು ನಮ್ಮ ಆಶಯ. ಮೂರ್ತಿಯನ್ನು ಪೂರ್ಣಗೊಳಿಸುವುದು ನಮ್ಮ ಉದ್ದೇಶವೆಂದು ಎಂದು ಸಿಎಂ ತಿಳಿಸಿರುವುದಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಇದನ್ನೂ ಓದಿ: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ: ಸಚಿವ ಮಧು ಬಂಗಾರಪ್ಪ - Guarantee Schemes