ಬೆಳಗಾವಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ 2,000 ರೂ. ಹಣ ಹಲವು ಮಹಿಳೆಯರಿಗೆ ಅನುಕೂಲವಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಂದಿವೆ. ಈಗ, ಬೆಳಗಾವಿಯ ಮಹಿಳೆಯೊಬ್ಬರಿಗೆ ಗೃಹಲಕ್ಷ್ಮಿ ಹಣ ನೆರವಾಗಿದ್ದು, ಅವರು ಆ ಹಣದಿಂದ ತಮ್ಮ ಪತಿಗೆ ಕಣ್ಣಿನ ಆಪರೇಷನ್ ಮಾಡಿಸಿದ್ದಾರೆ.
ಹೌದು, ಬೆಳಗಾವಿಯ ಅನಗೋಳದ ಚಂದ್ರಶೇಖರ ಬಡಿಗೇರ ಅವರು ದೃಷ್ಟಿದೋಷದಿಂದ ಬಳಲುತ್ತಿದ್ದರು. ಖಾಸಗಿ ಕಂಪನಿಯಲ್ಲಿ ಬಡಗಿ ಕೆಲಸ ಮಾಡುವ ಸಂದರ್ಭದಲ್ಲಿ ಚಂದ್ರಶೇಖರ ಅವರ ಎರಡು ಕಣ್ಣುಗಳಿಗೆ ಪ್ಲೇವುಡ್ ಧೂಳು ಹೋಗಿ ನರ ದೋಷ ಕಂಡು ಬಂದಿತ್ತು. ಶಸ್ತ್ರ ಚಿಕಿತ್ಸೆ ಮಾಡುವಂತೆ ವೈದ್ಯರು ಸಲಹೆ ನೀಡಿದ್ದರು. ಆದರೆ, ಆರ್ಥಿಕ ಸಮಸ್ಯೆಯಿಂದ ಇವರು ಪರದಾಡುತ್ತಿದ್ದರು. ಕೊನೆಗೆ ಚಂದ್ರಶೇಖರ ಅವರು ಸರ್ವಿಸ್ ಹಣವನ್ನೆಲ್ಲ ಸೇರಿಸಿ ಈ ಮೊದಲು ಶಸ್ತ್ರ ಚಿಕಿತ್ಸೆ ಮಾಡಿಸಲಾಗಿತ್ತು. ಆ ಬಳಿಕವೂ ಅವರಿಗೆ ಕಣ್ಣಿನ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿರಲಿಲ್ಲ.
ಚಂದ್ರಶೇಖರ ಅವರು ದೃಷ್ಟಿದೋಷದ ಬಳಿಕ ಮನೆಯಲ್ಲಿಯೇ ಇದ್ದರೆ, ಅವರ ಪತ್ನಿ ಅನಿತಾ ಕೂಲಿನಾಲಿ ಮಾಡಿ ಕುಟುಂಬ ನಿರ್ವಹಿಸುತ್ತಿದ್ದರು. ಯಾವಾಗ ಸಿದ್ದರಾಮಯ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆ ಆರಂಭಿಸಿತೋ, ಅನಿತಾ ಅವರು ಪ್ರತಿ ತಿಂಗಳು ಬರುತ್ತಿದ್ದ 2 ಸಾವಿರ ರೂ. ಗಳನ್ನು ಒಟ್ಟು 9 ತಿಂಗಳು 18 ಸಾವಿರ ರೂ. ಕೂಡಿಟ್ಟು ಬೆಳಗಾವಿಯ ನಂದಾದೀಪ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ.
ಚಂದ್ರಶೇಖರ ಬಡಿಗೇರ ಮಾತನಾಡಿ, ನನ್ನ ಬಾಳಿಗೆ ಗೃಹಲಕ್ಷ್ಮಿ ಹಣ ನಂದಾ ದೀಪವಾಗಿದೆ. ಆಪರೇಷನ್ ಮಾಡಿಸಿದ್ದರಿಂದ ಈಗ ಕಣ್ಣು ಕಾಣುತ್ತಿವೆ. ಸಿಎಂ ಸಿದ್ದರಾಮಯ್ಯ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮೇಲೆ ಸದಾಕಾಲ ನನ್ನ ಆಶೀರ್ವಾದ ಇರುತ್ತದೆ. ಮೊದಲಿನ ಆಪರೇಷನ್ನಿಂದ ಸಮಸ್ಯೆ ಬಗೆ ಹರಿದಿರಲಿಲ್ಲ, ಹೀಗಾಗಿ ಮತ್ತೊಮ್ಮೆ ಆಪರೇಷನ್ ಮಾಡಿಸಬೇಕು ಎಂದರೂ ನಮ್ಮ ಬಳಿ ಹಣ ಇರಲಿಲ್ಲ. ಈಗ ಗೃಹಲಕ್ಷ್ಮಿ ಹಣ ಕೂಡಿಟ್ಟು ನನ್ನ ಪತ್ನಿ ಆಪರೇಷನ್ ಮಾಡಿಸಿದ್ದಾಳೆ. ನಿಜವಾಗಲೂ ಗೃಹಲಕ್ಷ್ಮಿ ಯೋಜನೆ ನನ್ನ ಬಾಳಿಗೆ ಬೆಳಕಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪತ್ನಿ ಅನಿತಾ ಬಡಿಗೇರ ಮಾತನಾಡಿ, ಗೃಹಲಕ್ಷ್ಮಿ ಹಣವನ್ನು ಖರ್ಚು ಮಾಡಿದರೆ ಖಾಲಿ ಆಗುತ್ತವೆ ಎಂದು 9 ತಿಂಗಳ ಹಣ ಅಂದರೆ 18 ಸಾವಿರ ರೂ. ಹಣವನ್ನು ಕೂಡಿಟ್ಟು, ಅದಕ್ಕೆ ಮತ್ತೊಂದಿಷ್ಟು ಹಣ ಸೇರಿಸಿ ಪತಿಯ ಆಪರೇಷನ್ ಮಾಡಿಸಿದ್ದೇನೆ. ಇಂಥ ಯೋಜನೆ ಕೊಟ್ಟ ಸಿಎಂ ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ, ಅವರಿಗೆ ಮತ್ತಷ್ಟು ಜಯ ಸಿಗಲಿ. ಬಡವರಿಗೆ ಇನ್ನಷ್ಟು ಯೋಜನೆಗಳನ್ನು ನೀಡಲಿ. ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡವರು ಮಾಡಲಿ. ಆದರೆ, ನಮ್ಮಂಥ ಬಡವರಿಗೆ ಅನುಕೂಲ ಆಗಿದೆ. ಗ್ಯಾರಂಟಿಗಳನ್ನು ಇದೇ ರೀತಿ ಮುಂದುವರಿಸಲಿ ಎಂದು ಮನವಿ ಮಾಡಿದರು.
ಇದನ್ನೂ ಓದಿ: 'ಗೃಹಲಕ್ಷ್ಮಿ' ತಂದ ಸೌಭಾಗ್ಯ; ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಕೊಟ್ಟ ಅತ್ತೆ - A FANCY STORE