ಮಂಡ್ಯ: ಕೆಲವು ತಾಂತ್ರಿಕ ದೋಷಗಳಿಂದ ಜೂನ್ ಮತ್ತು ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಜಮೆ ಆಗಿರಲಿಲ್ಲ. ಇಂದಿನಿಂದ ಯೋಜನೆಯ ಹಣ ಮಹಿಳೆಯರ ಖಾತೆಗೆ ಜಮೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಮಂಡ್ಯದಲ್ಲಿ ಇಂದು ಆಯೋಜಿಸಿದ್ದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಅವರು ಮಾತನಾಡಿದರು.
ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಷಣ ಮಾಡುವಾಗ ಮಹಿಳೆಯರು ಗೃಹಲಕ್ಮಿ ಹಣ ಬಂದಿಲ್ಲ ಎಂದು ಹೇಳಿದ್ದರು. ಹೌದು, ತಾಂತ್ರಿಕ ಕಾರಣದಿಂದ ಹಣ ಬಂದಿರಲಿಲ್ಲ. ಆದರೆ, ಇಂದಿನಿಂದ ಜೂನ್ ಮತ್ತು ಜುಲೈ ತಿಂಗಳ ಹಣ ಜಮೆಯಾಗಲಿದೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ. ನಮಗೆ ಸಿಕ್ಕ ಅಧಿಕಾರದಲ್ಲಿ ಜನರಿಗೆ ಒಳ್ಳೆಯದು ಮಾಡುತ್ತೇವೆ. ಬರಗಾಲದಲ್ಲಿ ಪರಿಹಾರ ಕೊಡಲು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಮನಸ್ಸಿಲ್ಲ. ಆದರೆ, ಬಿಜೆಪಿ ಭ್ರಷ್ಟ ಸರ್ಕಾರ ಬಂಡವಾಳಶಾಹಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ ಎಂದು ಟೀಕಿಸಿದರು.
ಮುಡಾ ಅವ್ಯವಹಾರದ ಸಂಬಂಧ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಮಾಡುತ್ತಿರುವ ಮೈಸೂರು ಚಲೋ ಪಾದಯಾತ್ರೆಗೆ ಪ್ರತಿಕ್ರಿಯಿಸಿದ ಸಚಿವೆ, ಭ್ರಷ್ಟಾಚಾರದ ಭ್ರಹ್ಮಾಂಡವನ್ನೇ ತನ್ನ ಗರ್ಭದಲ್ಲಿಟ್ಟುಕೊಂಡಿರುವ ಇವರೆಡು ಪಕ್ಷಗಳು ಪಾದಯಾತ್ರೆ ಮಾಡುವ ನೈತಿಕತೆಯನ್ನು ಕಳೆದುಕೊಂಡಿವೆ. ಅಧಿಕಾರ ದಾಹದಿಂದ ಮುಡಾದಂತಹ ಪಿತೂರಿಗಳನ್ನು ಮಾಡುತ್ತಿದ್ದಾರೆ. ರಾಜ್ಯದ ಜನ ಬಿಜೆಪಿ ಆಡಳಿತವನ್ನು ಈ ಹಿಂದೆ ಕಂಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕೆಡವಿದ ಬಿಜೆಪಿ ಜೊತೆ ಕುಮಾರಣ್ಣ ಇದೀಗ ಅನ್ಯೋನ್ಯವಾಗಿದ್ದಾರೆ. ಜನರು ಮುರ್ಖರಲ್ಲ. ಎಲ್ಲವನ್ನೂ ನೋಡುತ್ತಿದ್ದಾರೆ ಎಂದು ಹರಿಹಾಯ್ದರು.
ಇದೇ ವೇಳೆ, ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಸಚಿವೆ, ಇತ್ತೀಚೆಗೆ ಮಂಡಿಸಲಾದ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ಶೂನ್ಯ. ರಾಜ್ಯಕ್ಕೆ ಕೇಂದ್ರ ಬಿಜೆಪಿ ಸರ್ಕಾರದಿಂದ ಅನ್ಯಾಯವಾಗಿದೆ. ಇದೀಗ ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯಲು ಬಿಜೆಪಿ-ಜೆಡಿಎಸ್ ಎರಡು ಪಕ್ಷಗಳು ಗಿಮಿಕ್ ಮಾಡುತ್ತಿವೆ. ಕ್ಲೀನ್ ಇಮೇಜ್ ಹಾಳು ಮಾಡಲು ಮುಡಾ ಹಗರಣವನ್ನು ಸಿದ್ದರಾಮಯ್ಯ ತಲೆಗೆ ಕಟ್ಟಲು ಯತ್ನಿಸುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಾದ ಹಗರಣಗಳನ್ನು ಕರ್ನಾಟಕದ ಜನ ಮರೆತಿಲ್ಲ ಎಂದರು.
ಕೇಂದ್ರದ ಬಿಜೆಪಿ ಇಡಿ ಅಧಿಕಾರಿಗಳನ್ನು ಸೀಳುನಾಯಿಗಳ ತರ ಕಾಂಗ್ರೆಸ್ ಮೇಲೆ ಛೂ ಬಿಟ್ಟಿದ್ದಾರೆ. ಜೆಡಿಎಸ್-ಬಿಜೆಪಿ ಎರಡೂ ಪಕ್ಷಗಳು ಸೇರಿಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತೆಗೆಯಲು ವಾಮಮಾರ್ಗದಿಂದ ಪಿತೂರಿ ನಡೆಸುತ್ತಿದ್ದಾರೆ. ಡೆಲ್ಲಿಯಲ್ಲಿ ಕುಳಿತು ಈ ಬಗ್ಗೆ ಸ್ಕೆಚ್ ಹಾಕುತ್ತಿದ್ದಾರೆ. ಬಡವರ ಪರವಾಗಿ ಕೆಲಸ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಪಿತೂರಿ ನಡೆಸಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಆರೋಪಿಸಿದರು.
ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಎನ್.ಚಲುವರಾಯಸ್ವಾಮಿ, ಸಂತೋಷ್ ಲಾಡ್, ಮುನಿಯಪ್ಪ ಸೇರಿದಂತೆ ಹಲವು ಕೈ ಮುಖಂಡರು ಬಿಜೆಪಿ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ದ ಅಬ್ಬರಿಸಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರಿಂದ ಶೋಕಾಸ್ ನೋಟಿಸ್: ಹೊನ್ನಾಳಿ ಸ್ತಬ್ಧ! - Honnali bandh