ಗಂಗಾವತಿ: ನಗರದ ಸಿಬಿಎಸ್ ವೃತ್ತದ ಸಮೀಪ ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ಮಧ್ಯ ಮಾರಾಮಾರಿ ಸಂಭವಿಸಿ ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಗಲಭೆಯನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದ ಪೊಲೀಸರು, ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಎರಡು ಗುಂಪಿನ ಯುವಕರ ಮಧ್ಯೆ ಆರಂಭವಾದ ಘರ್ಷಣೆ ಚುನಾವಣೆ ಹಿನ್ನೆಲೆ ಘಟನೆ ಬೇರೆ ಸ್ವರೂಪ ಪಡೆಯುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ ಪೊಲೀಸರು ತಕ್ಷಣ ರಂಗಪ್ರವೇಶ ಮಾಡಿ, ಗಲಭೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಂಗಾವತಿ ಎಪಿಎಂಸಿಯ 3ನೇ ಗೇಟ್ದಲ್ಲಿ ನಡೆಯುವ ಇಸ್ಪೀಟ್ ಜೂಜಾಟಕ್ಕೆ ಸಂಬಂಧಿಸಿದಂತೆ ಮೊದಲಿಗೆ ಗಲಾಟೆ ಇಬ್ಬರು ಯುವಕರು ಮಧ್ಯೆ ಆರಂಭವಾಗಿದೆ, ಬಳಿಕ ವಿವಾದದ ಸ್ವರೂಪ ಪಡೆದುಕೊಂಡಿದೆ ಮತ್ತು ಗುಂಪು ಘರ್ಷಣೆಗೆ ತಿರುಗಿದೆ ಎಂದು ಹೇಳಲಾಗುತ್ತಿದೆ.
ಪರಸ್ಪರ ಎರಡು ದೂರು: ಮೊಹಮ್ಮದ್ ಇಲಿಯಾಸ್ ಎಂಬ ಯುವಕ ನೀಡಿದ ದೂರಿನ ಮೇರೆಗೆ ಮಲ್ಲಿಕಾರ್ಜುನ ಲಿಂಗರಾಜ ಕ್ಯಾಂಪ್, ಮನೋಹರ ಗಂಗಾವತಿ ಹಾಗೂ ಇತರರ ಮೇಲೆ ದೂರು ದಾಖಲಾಗಿದೆ.
ಮಲ್ಲಣ್ಣ ಅಲಿಯಾಸ್ ಮಲ್ಲಿ ಸಿದ್ದಣ್ಣ ಎಂಬ ಯುವಕ ನೀಡಿದ ದೂರಿನ ಮೇರೆಗೆ ಮೊಹಮ್ಮದ್ಗೌಸ್ ಬಾಳೇಕಾಯಿ ಮತ್ತು ಮೊಹಮ್ಮದ್ ಇಲಿಯಾಸ್ ಗುಂಡಮ್ಮ ಕ್ಯಾಂಪ್ ಹಾಗೂ ಇತರರ ಮೇಲೆ ದೂರು ದಾಖಲಾಗಿದೆ. ಮಾ.21ರ ತಡರಾತ್ರಿ ಊಟ ಮುಗಿಸಿಕೊಂಡು ಪಾನ್ ಬಿಡಾ ಹಾಕಲು ಹೋದಾಗ ನಮ್ಮ ದೊಡ್ಡಪ್ಪ ಮಹಮ್ಮದ್ ಅಲಿಂ ಅವರೊಂದಿಗೆ ಯುವಕರು ಜಗಳವಾಡುತ್ತಿದ್ದರು. ಈ ಬಗ್ಗೆ ವಿಚಾರಿಸಲು ಹೋದಾಗ ಮಲ್ಲಿಕಾರ್ಜುನ, ಮನೋಹರ ಇತರರು ನಮ್ಮ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಮಹಮ್ಮದ್ ಇಲಿಯಾಸ್ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂಓದಿ:ಮಹಿಳಾ ವಿವಿಯಲ್ಲಿ ಲೈಂಗಿಕ ಕಿರುಕುಳ ಆರೋಪ: ದಯಾಮರಣಕ್ಕೆ ಮನವಿ ಸಲ್ಲಿಸಿದ ನೊಂದ ಮಹಿಳೆ - Harassment Allegation