ಬೆಳಗಾವಿ: ಶ್ರಾವಣ ಮಾಸದ ಮೊದಲ ಹಬ್ಬ ಎಂದರೆ ಅದು ನಾಗರ ಪಂಚಮಿ. ಉತ್ತರ ಕರ್ನಾಟಕದಲ್ಲಿ ಪಂಚಮಿ ಬಹುದೊಡ್ಡ ಹಬ್ಬ ಎಂದೇ ಪರಿಗಣಿಸಲಾಗುತ್ತದೆ. ಮೊದಲೆಲ್ಲಾ ವಾರಗಟ್ಟಲೆ ಕಾಯ್ದು ತರಹೇವಾರಿ ಸಿಹಿ ಉಂಡೆಗಳನ್ನು ಕಟ್ಟುತ್ತಿದ್ದರು. ಆದರೆ, ಈಗ ಕೆಲಸದ ಒತ್ತಡದಲ್ಲಿ ಉಂಡೆ ಕಟ್ಟಲು ಯಾರಿಗೂ ಸಮಯವೇ ಇಲ್ಲ. ಹಾಗಾಗಿ, ಬೆಳಗಾವಿ ಮಾರುಕಟ್ಟೆಯಲ್ಲಿ ಉಂಡೆಗಳ ಖರೀದಿಗೆ ಜನರು ಮುಗಿ ಬಿದ್ದಿದ್ದರು.
ಹೌದು.. ಬೆಳಗಾವಿ ಮಾರುಕಟ್ಟೆ ಪದೇಶಗಳಲ್ಲಿ ನಿನ್ನೆ ಜನಜಂಗುಳಿ ಹೆಚ್ಚಿತ್ತು. ಉಂಡೆ, ಹೂವು-ಹಣ್ಣು, ಪೂಜಾ ಸಾಮಗ್ರಿಗಳ ವ್ಯಾಪಾರ ಜೋರಾಗಿತ್ತು. ಅದರಲ್ಲೂ ನಾನಾ ಬಗೆಯ ಉಂಡೆಗಳು, ಚೋಡಾ(ಚುರುಮುರಿ) ಮಾರಾಟ ಹೆಚ್ಚಿರುವುದು ಕಂಡು ಬಂತು.
ಬೆಳಗಾವಿಯ ವ್ಯಾಪಾರಿಯೊಬ್ಬರು ಮಾತನಾಡಿ, "ಈ ವರ್ಷ ಮಳೆ ಉತ್ತಮ ಆಗಿರುವುದರಿಂದ ಎಲ್ಲಾ ಅಂಗಡಿಗಳಲ್ಲೂ ವ್ಯಾಪಾರ ಚೆನ್ನಾಗಿದೆ. ರವೆ ಉಂಡಿ, ರಾಜಗೆರಾ ಉಂಡಿ, ಶೇಂಗಾ ಉಂಡಿ, ಎಳ್ಳುಂಡೆ, ಕೊಬ್ಬರಿ ಉಂಡೆ, ಬೂಂದಿ ಉಂಡೆ, ಬೇಸನ್ ಉಂಡಿ, ಲಡಕಿ ಉಂಡಿ. ಚೋಡಾ, ಅವಲಕ್ಕಿ, ಚುರಮರಿ ಮಾರಾಟ ಜೋರಾಗಿದೆ. ಇನ್ನು ನಮ್ಮಲ್ಲಿ ಉಂಡೆಗಳ ದರ 1 ಕೆಜಿಗೆ ಬೂಂದಿ ಉಂಡೆ 160 ರೂ., ರವೆ ಉಂಡಿ 160 ರೂ., ಲಡಕಿ/ಲಡಗಿ ಉಂಡೆ 240 ರೂ. ಇದೆ" ಎಂದು ವಿವರಿಸಿದರು.
ಸವಿತಾ ಎಂಬುವವರು ಮಾತನಾಡಿ, "ನಾವು ಕೆಲಸಕ್ಕೆ ಹೋಗುತ್ತೇವೆ. ಮನೆಯಲ್ಲಿ ಉಂಡೆಗಳನ್ನು ಕಟ್ಟೋಕೆ ಆಗೋದಿಲ್ಲ. ಹಾಗಾಗಿ, ಕಳೆದ ಏಳೆಂಟು ವರ್ಷಗಳಿಂದ ಅಂಗಡಿಗಳಲ್ಲೇ ಉಂಡೆಗಳನ್ನು ಖರೀದಿಸುತ್ತಿದ್ದೇವೆ. ಮನೆಯಲ್ಲಿ ನಾಗಮೂರ್ತಿಗೆ ಪೂಜೆ ಸಲ್ಲಿಸಿ, ಹಾಲು ಎರೆಯುತ್ತೇವೆ" ಎಂದು ಹೇಳಿದರು.
ಪರಿಮಳಾ ಪೂಜಾರಿ ಮಾತನಾಡಿ, "ಎಳ್ಳು, ಬೆಲ್ಲ, ಒಣ ಕೊಬ್ಬರಿ, ಪುಟಾಣಿ ಹಿಟ್ಟು, ತುಪ್ಪದಿಂದ ನಾವು ಮನೆಯಲ್ಲೆ ತಂಬಿಟ್ಟು ತಯಾರಿಸುತ್ತೇವೆ. ಪಂಚಮಿ ವಿಶೇಷತೆ ತಂಬಿಟ್ಟು ಉಂಡೆ. ಹೊರಗಡೆ ನಾವು ಉಂಡೆಗಳನ್ನು ಖರೀದಿಸುವುದಿಲ್ಲ. ನಾಗಮೂರ್ತಿಗೆ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿ, ಹಾಲು ಎರೆಯುತ್ತೇವೆ ಎಂದು" ತಿಳಿಸಿದರು.
ನಾಗ ಮೂರ್ತಿಗಳ ಭರ್ಜರಿ ವ್ಯಾಪಾರ: ನಗರದ ವಿವಿಧ ಮಾರುಕಟ್ಟೆಗಳಲ್ಲಿ ಮಣ್ಣಿನಿಂದ ತಯಾರಿಸುತ್ತಿದ್ದ ನಾಗ ಮೂರ್ತಿಗಳ ಖರೀದಿ ಭರಾಟೆ ಜೋರಾಗಿತ್ತು. 20 ರೂ. ಯಿಂದ 150 ರೂ. ವರೆಗೂ ವಿವಿಧ ಬಗೆಯ ಮೂರ್ತಿಗಳು ಮಾರಾಟಕ್ಕೆ ಲಭ್ಯವಿದ್ದವು. ಇನ್ನು ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿ ಕೂಡ ಹೆಚ್ಚಿತ್ತು.
ಇದನ್ನೂ ಓದಿ: ಶ್ರಾವಣಮಾಸದ ಮೊದಲ ಹಬ್ಬ: ಸೋಮೇಶ್ವರ ಸನ್ನಿಧಾನದಲ್ಲಿ ಮಹಿಳೆಯರಿಂದ ನಾಗರಪಂಚಮಿ ಆಚರಣೆ - Nagara Panchami Celebration