ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಬಿಜೆಪಿಯವರು ಮಾಡಿರುವ ಆರೋಪ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರ ಮೇಲೆ ಅನಾವಶ್ಯಕವಾಗಿ ಆಪಾದನೆ ಮಾಡುವುದು ಯಾವುದೇ ಕಾಣರಕ್ಕೂ ಸರಿ ಇರುವುದಿಲ್ಲ. ಗುತ್ತಿಗೆದಾರ ಸಚಿನ್ ಡೆತ್‌ನೋಟ್‌ನಲ್ಲಿ ಅವರ ಹೆಸರು ಕೂಡ ಇಲ್ಲ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಸಚಿವರ ಹೆಸರನ್ನು ತಂದು, ಸರ್ಕಾರಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಸತ್ಯಾಸತ್ಯತೆ ಹೊರಬರಲಿ ಎಂಬ ದೃಷ್ಟಿಯಿಂದ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಸಿಐಡಿಗೆ ವಹಿಸಲಾಗಿದೆ ಎಂದು ತಿಳಿಸಿದರು.
ತನಿಖೆಯ ವರದಿ ಬಂದ ನಂತರ ಏನು ಎಂಬುದನ್ನು ಹೇಳೋಣ. ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ಕೊಡುವ ಅಗತ್ಯ ಇಲ್ಲ. ಅನಾವಶ್ಯಕವಾಗಿ ಅವರ ಹೆಸರನ್ನು ತೆಗೆದುಕೊಂಡು ರಾಜೀನಾಮೆ ಕೊಡುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದರು.
ಸಿಬಿಐಗೆ ವಹಿಸುವಂತೆ ಬಿಜೆಪಿಯವರು ಒತ್ತಾಯಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲ ಪ್ರಕರಣಗಳನ್ನು ಸಿಬಿಐಗೆ ವಹಿಸಲು ಆಗುವುದಿಲ್ಲ. ಸಿಐಡಿ ಸಮರ್ಥವಾಗಿದೆ. ಅನೇಕ ಪ್ರಕರಣಗಳಲ್ಲಿ ಸಿಐಡಿ ತನಿಖೆಯ ವರದಿ ಬಂದಿದೆಯಲ್ಲವೇ? ಬಿಜೆಪಿಯವರು ಹೇಳಿದ್ದೆಲ್ಲವನ್ನು ಕೇಳುವುದಿಲ್ಲ. ಸಕರಾತ್ಮಕವಾಗಿ ಸಲಹೆ, ಸೂಚನೆ ನೀಡಿದರೆ ಕೇಳುತ್ತೇವೆ. ಅನಾವಶ್ಯಕವಾಗಿ ಎಲ್ಲದರಲ್ಲೂ ರಾಜಕೀಯ ಮಾಡಲು ಹೋದರೆ ಕೇಳುವುದಿಲ್ಲ ಎಂದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮೇಲೆ ಶಾಸಕ ಸಿ.ಟಿ.ರವಿ ಅವಾಚ್ಯ ಪದ ಬಳಕೆ ಮಾಡಿರುವ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಲ್ಲವೇ. ಈ ನಿಟ್ಟಿನಲ್ಲಿ ಸಿಐಡಿ ಅವರು ತಮ್ಮ ಕೆಲಸವನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು.
ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಹೊಸ ವರ್ಷದ ಸಂತೋಷವನ್ನು ಹಂಚಿಕೊಳ್ಳಬೇಕು. ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿದೆ. ಯಾರಿಗೂ ತೊಂದರೆಯಾಗದಂತೆ ಹೊಸ ವರ್ಷ ಆಚರಿಸುವಂತೆ ಸಾರ್ವಜನಿಕರಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದರು.
ಇದನ್ನೂ ಓದಿ: ಬಿಜೆಪಿಯವರು ಹೇಳಿದ ಕೂಡಲೇ ನಾನ್ಯಾಕೆ ರಾಜೀನಾಮೆ ಕೊಡಬೇಕು : ಸಚಿವ ಪ್ರಿಯಾಂಕ್ ಖರ್ಗೆ - MINISTER PRIYANK KHARGE