ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಶೇ.27.5ರಷ್ಟು ಹೆಚ್ಚಳ, ವಾರದಲ್ಲಿ 5 ದಿನ ಕೆಲಸ, ಕನಿಷ್ಠ ಮೂಲವೇತನ 27 ಸಾವಿರ ರೂ.ಗೆ ನಿಗದಿ ಸೇರಿದಂತೆ ಹಲವು ಶಿಫಾರಸುಗಳನ್ನು ಮಾಡಿರುವ 7ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿ ಮಾಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಒತ್ತಾಯಿಸಿದೆ.
"ಉತ್ತಮವಾದ ವರದಿಯನ್ನೇ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ನೇತೃತ್ವದ ವೇತನ ಆಯೋಗ ಸರ್ಕಾರಕ್ಕೆ ಸಲ್ಲಿಸಿದೆ" ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
ಇದೇ ವೇಳೆ, "ವರದಿಯನ್ನು ಸರ್ಕಾರವು ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಅನುಷ್ಠಾನಕ್ಕೆ ತರುವ ಬಗ್ಗೆ ನೌಕರರ ಸಂಘಕ್ಕೆ ವಿಶ್ವಾಸವಿತ್ತು. ಆದರೆ ಅದು ಸಾಧ್ಯವಾಗಿಲ್ಲ" ಎಂದು ಷಡಾಕ್ಷರಿ ಹೇಳಿದರು.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್: ವಾರದಲ್ಲಿ ಐದೇ ದಿನ ಕೆಲಸಕ್ಕೆ ಶಿಫಾರಸು
"ವರದಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಯಥಾವತ್ತಾಗಿ ಜಾರಿಗೆ ತರುವ ಕುರಿತು ಭರವಸೆಯ ಮಾತುಗಳನ್ನು ಆಡಬೇಕಿತ್ತು. ಆದರೆ ಆರ್ಥಿಕ ಇಲಾಖೆಯ ಪರಿಶೀಲನೆಗೆ ವರದಿ ಕಳುಹಿಸುವುದಾಗಿ ತಿಳಿಸಿದ್ದಾರೆ. ಇದರಿಂದ ಸರ್ಕಾರಿ ನೌಕರರಲ್ಲಿ ಗೊಂದಲ ಉಂಟಾಗಿದೆ. ಚುನಾವಣೆ ನೀತಿ ಸಂಹಿತೆ ಬಳಿಕವೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ತರುವ ಬಗ್ಗೆ ಸರ್ಕಾರ ಅಭಿಪ್ರಾಯಪಡುತ್ತಿದ್ದು, ಈ ಬಗ್ಗೆ ನೌಕರರ ಸಂಘ ಯಾವ ಕ್ರಮ ತಗೆದುಕೊಳ್ಳಬೇಕು ಎನ್ನುವ ಕುರಿತು ಸಮಾಲೋಚನೆ ನಡೆಸಲಾಗುತ್ತದೆ" ಎಂದರು.
"ವರದಿ ಕಳೆದ 2022ರಲ್ಲಿಯೇ ಜಾರಿಗೆ ಬರಬೇಕಿತ್ತು. ಸುಮಾರು ಒಂದೂವರೆ ವರ್ಷ ವಿಳಂಬವಾಗಿದೆ. ಮಧ್ಯಂತರ ಪರಿಹಾರವಾಗಿ ರಾಜ್ಯ ಸರ್ಕಾರವು ಶೇ.17ರಷ್ಟು ವೇತನ ಹೆಚ್ಚಳ ಮಾಡಿದ್ದು, ಉಳಿದ ಶೇ.10.5ರಷ್ಟು ವೇತನ ಪರಿಷ್ಕರಣೆಯನ್ನು ಸರ್ಕಾರ ಆಯೋಗದ ಶಿಫಾರಸಿನಂತೆ ಮಾಡಬೇಕಾಗಿದೆ" ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಏಳನೇ ವೇತನ ಆಯೋಗ ತನ್ನ ವರದಿಯಲ್ಲಿ ಮಾಡಿದ ಪ್ರಮುಖ ಶಿಫಾರಸುಗಳೇನು?
ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅಧ್ಯಕ್ಷತೆಯ ರಾಜ್ಯದ ಏಳನೇ ವೇತನ ಆಯೋಗವು ಶನಿವಾರ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ವೇತನ ಪರಿಷ್ಕರಣೆಯ ಅಂತಿಮ ವರದಿ ಸಲ್ಲಿಸಿತು. ಆಯೋಗದ ಸದಸ್ಯರಾದ ಪಿ.ಬಿ.ರಾಮಮೂರ್ತಿ, ಶ್ರೀಕಾಂತ್ ವನಹಳ್ಳಿ, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಡಾ.ಕೆ.ವಿ.ತ್ರಿಲೋಕಚಂದ್ರ, ಹಣಕಾಸು ಇಲಾಖೆ ಕಾರ್ಯದರ್ಶಿ ಡಾ.ಪಿ.ಸಿ.ಜಾಫರ್, ವೇತನ ಆಯೋಗದ ಸದಸ್ಯ ಕಾರ್ಯದರ್ಶಿ ಹೆಫ್ಸಿಬಾರಾಣಿ ಕೊರ್ಲಪಾಟಿ ಉಪಸ್ಥಿತರಿದ್ದರು.
ಆರ್ಥಿಕ ಇಲಾಖೆಯ ಪರಿಶೀಲನೆಯ ಬಳಿಕ ತೀರ್ಮಾನ: "ಮೂಲ ವೇತನದ ಮೇಲೆ ಶೇ.27.5ರಷ್ಟು ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿದ್ದಾರೆ. ಸರ್ಕಾರ ಮಧ್ಯಂತರ ವರದಿಯಂತೆ ಶೇ.17ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಬಳಿಕ ಮೂರು ತಿಂಗಳ ಅವಧಿ ವಿಸ್ತರಣೆ ಮಾಡಿತ್ತು. 15/3/2024ಕ್ಕೆ ಅವರ ಅವಧಿ ಮುಗಿದಿದೆ. ಕನಿಷ್ಠ ಮೂಲ ವೇತನ 17,000ದಿಂದ 27,000 ರೂ.ಗೆ ಪರಿಷ್ಕರಣೆ ಆಗುವಂತೆ ಶಿಫಾರಸು ಮಾಡಿದ್ದಾರೆ. ಆರ್ಥಿಕ ಇಲಾಖೆಯ ಪರಿಶೀಲನೆಯ ಬಳಿಕ ನಾವು ತೀರ್ಮಾನ ಮಾಡುತ್ತೇವೆ" ಎಂದು ವರದಿ ಸ್ವೀಕರಿಸಿದ ಬಳಿಕ ಸಿಎಂ ತಿಳಿಸಿದ್ದಾರೆ.