ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗುರುವಾರ ಸಂಜೆ ರಾಜಭವನದಲ್ಲಿ ಗಣ್ಯರಿಗಾಗಿ ಲಘು ಉಪಹಾರ ಕೂಟ ಆಯೋಜಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ವಿಧಾನ ಪರಿಷತ್ ಅಧ್ಯಕ್ಷ ಬಸವರಾಜ್ ಹೊರಟ್ಟಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಮುಂತಾದ ಗಣ್ಯರು ರಾಜ್ಯಪಾಲರನ್ನು ಭೇಟಿ ಮಾಡಿ 78ನೇ ಸ್ವಾತಂತ್ರೋತ್ಸವ ಶುಭಾಶಯ ವಿನಿಮಯ ಮಾಡಿಕೊಂಡರು. ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯಪಾಲರು ಹಸ್ತಲಾಘವ ಮಾಡಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಉಪಹಾರ ಸೇವಿಸುವ ವೇಳೆ ಔಪಚಾರಿಕವಾಗಿ ಮಾತುಕತೆ ನಡೆಸುತ್ತಿರುವುದು ಕಂಡುಬಂತು.
ಮುಡಾ ಪ್ರಕರಣ ಸಂಬಂಧ ಪೂರ್ವಾನುಮತಿಗಾಗಿ ಶೋಕಾಸ್ ನೋಟಿಸ್ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯಪಾಲರು ಮುಖಾಮುಖಿಯಾದರು. ಶಿಷ್ಟಾಚಾರದಂತೆ ಪ್ರತಿ ವರ್ಷ ಸ್ವಾತಂತ್ರ್ಯೋತ್ಸವದ ದಿನ ರಾಜ್ಯಪಾಲರು ರಾಜಭವನದಲ್ಲಿ ಸಿಎಂ ಆದಿಯಾಗಿ ಗಣ್ಯರಿಗೆ ಲಘು ಉಪಹಾರ ಕೂಟ ಏರ್ಪಡಿಸುತ್ತಾರೆ. ಅದರಂತೆ ಗುರುವಾರ ಸಂಜೆ ಉಪಹಾರ ಕೂಟ ಏರ್ಪಡಿಸಲಾಗಿತ್ತು.
ಮುಡಾ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯಗೆ ಶೋಕಾಸ್ ನೋಟಿಸ್ ನೀಡಿರುವ ಮಧ್ಯೆ ರಾಜಭವನದ ಈ ಉಪಹಾರ ಕೂಟ ಗಮನ ಸೆಳೆಯಿತು. ರಾಜ್ಯಪಾಲರು ಕಳುಹಿಸಿರುವ ನೋಟಿಸ್ ಹಿಂಪಡೆಯುಂತೆ ಕೋರಿ ರಾಜ್ಯ ಸಚಿವ ಸಂಪುಟ ಸಭೆ ನಿರ್ಣಯ ಕೈಗೊಂಡಿತ್ತು. ಜೊತೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಸಂಪುಟ ಸಚಿವರು ರಾಜ್ಯಪಾಲರು ಬಿಜೆಪಿ ಹೈಕಮಾಂಡ್ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದರು. ಇತ್ತ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಅನುಮಾನದ ಮಧ್ಯೆ ರಾಜ್ಯಪಾಲರು ಹಾಗೂ ಸಿಎಂ ಸಿದ್ದರಾಮಯ್ಯರ ಮುಖಾಮುಖಿ ಕುತೂಹಲ ಮೂಡಿಸಿತು.
ಇದನ್ನೂ ಓದಿ: ಪ್ರಾಸಿಕ್ಯೂಷನ್‌ಗೆ ಅನುಮತಿಸಿದರೆ ಕಾನೂನು ಹೋರಾಟ: ಗೃಹ ಸಚಿವ ಪರಮೇಶ್ವರ್ - MUDA CASE