ಶಿವಮೊಗ್ಗ: ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತಕ್ಕೆ ತಲುಪಿದ್ದ ಸರ್ಕಾರಿ ಶಾಲೆ ಶಿಕ್ಷಕಯೋರ್ವರ ಪ್ರಯತ್ನದಿಂದ ಇಂದು ಪಿಎಂ ಶ್ರೀ (PM SHRI Scheme- PM School For Rising India) ಶಾಲೆಯಾಗಿ ಪರಿವರ್ತನೆ ಆಗಿದೆ. ಅದೇ ಶಿವಮೊಗ್ಗ ನಗರದ ಕೃಷ್ಣರಾಜಪುರಂ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ.
ವಿದ್ಯಾರ್ಥಿಗಳಿಲ್ಲದೆ ಶಾಲೆ ವಿಲೀನವಾಗಿ ಇದ್ದ 7 ವಿದ್ಯಾರ್ಥಿಗಳು ಬೇರೆ ಶಾಲೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನೊಂದೆಡೆ ಶಾಲೆಯ ಕಟ್ಟಡದ ಸ್ಥಿತಿ, ಸರ್ಕಾರಿ ಶಾಲೆ ಎಂಬ ತಿರಸ್ಕಾರ ಭಾವ ಕಾರಣಗಳಿಂದ ಶಾಲೆಯನ್ನು ಶಾಶ್ವತವಾಗಿ ಮುಚ್ಚಬೇಕಾಗುತ್ತದೆ ಎಂದು ಶಿಕ್ಷಣ ಇಲಾಖೆಯೇ ಅಂದುಕೊಂಡಿತ್ತು. ಆ ಸಮಯದಲ್ಲಿ ಶಾಲೆಗೆ ಹಿರಿಯ ಶಿಕ್ಷಕರಾಗಿ ವರ್ಗಾವಣೆಯಾಗಿ ಬಂದ ರಾಮಾಚಾರಿ ಶಾಲೆಯ ಚಿತ್ರಣವನ್ನೇ ಬದಲಾಯಿಸಿದರು.
2018ರಲ್ಲಿ ಶಾಲೆಯಲ್ಲಿ 7 ವಿದ್ಯಾರ್ಥಿಗಳು, ಅವರಿಗೆ ಪಾಠ ಮಾಡಲು ಐವರು ಶಿಕ್ಷಕರಿದ್ದರು. ಆಗ ಶಾಲೆಗೆ ಹಿರಿಯ ಶಿಕ್ಷಕರಾಗಿ ವರ್ಗಾವಣೆಯಾಗಿ ಬಂದವರು ರಾಮಾಚಾರಿ. ಬಂದವರೇ ಶಾಲೆಯ ಪರಿಸ್ಥಿತಿ ನೋಡಿ, ಶಾಲೆಯನ್ನು ಸುಸ್ಥಿತಿಗೆ ತರುವ ಯೋಚನೆ ಮಾಡಿದರು. ಶಾಲಾ ಸುತ್ತಮುತ್ತಲಿನ ಮನೆಗಳಿಗೆ ಹೋಗಿ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ವಿನಂತಿ ಮಾಡಿಕೊಂಡರು. ರಸ್ತೆಯಲ್ಲಿ ನಿಂತು ಜನರಿಗೆ ತಮ್ಮ ಶಾಲೆಯ ವಸ್ತುಸ್ಥಿತಿಯ ಕುರಿತು ಕರಪತ್ರ ಹಂಚಿದರು. ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸಿದರೆ, ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಮಾತುಗಳು ಪೋಷಕರಿಂದ ಕೇಳಿ ಬಂದವು. ಆಗ ಹಿರಿಯ ಶಿಕ್ಷಕ ಶಿಕ್ಷಣ ಇಲಾಖೆಯ ಮನವೊಲಿಸಿ, ಶಾಲೆಯನ್ನು ಕೆಪಿಎಸ್ಸಿ ಶಾಲೆಯನ್ನಾಗಿ ಪರಿವರ್ತನೆ ಮಾಡಿಸಿದರು. ಇದರ ನಂತರ ಈ ಸರ್ಕಾರಿ ಸ್ಕೂಲಿಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಯಿತು.
ಕೇಂದ್ರದ ಪಿಎಂ ಶ್ರೀ ಯೋಜನೆಗೆ ಸೇರ್ಪಡೆ: ಈ ಕಾರ್ಯದಲ್ಲಿ ರಾಮಾಚಾರಿ ಅವರಿಗೆ ಕೈ ಜೋಡಿಸಿದ್ದು, ಮಾಜಿ ಮೇಯರ್ ಸುನೀತಾ ಅಣ್ಣಪ್ಪ. ಶಿಕ್ಷಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಪೋಷಕರ ಸಹಕಾರದಿಂದ ಇಂದು ಶಾಲೆಯಲ್ಲಿ 278 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಶೈಕ್ಷಣಿಕ ಪ್ರಗತಿ ಹಾಗೂ ಅಭಿವೃದ್ಧಿಯನ್ನು ನೋಡಿ ಈ ಶಾಲೆಯನ್ನು ಕೇಂದ್ರ ಸರ್ಕಾರದ ಪಿಎಂ ಶ್ರೀ ಯೋಜನೆಗೆ ಒಳಪಡಿಸಲಾಗಿದೆ. ಈ ಯೋಜನೆಯಿಂದ ಶಾಲೆಯ ಕಲಿಕೆಯ ವಿಧಾನವೇ ಬದಲಾಗಿದೆ. ಯೋಜನೆಯಲ್ಲಿ ಮಕ್ಕಳ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಶಾಲೆ ಹಾಗೂ ವಿದ್ಯಾರ್ಥಿಗಳಲ್ಲಿ ಅನೇಕ ಬದಲಾವಣೆಯನ್ನು ತರಲಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಬೇಕಾದ ಸಾಮಗ್ರಿ ಸೇರಿದಂತೆ ಎಲ್ಲವನ್ನೂ ಪಿಎಂ ಶ್ರೀ ಯೋಜನೆಯಲ್ಲಿ ನೀಡಲಾಗುತ್ತಿದೆ.
ಇದಕ್ಕಾಗಿ ಯೋಜನೆಯಡಿ ವರ್ಷಕ್ಕೆ ಎರಡು ಬಾರಿ ಸುಮಾರು 1 ಲಕ್ಷದಷ್ಟು ಹಣ ಬಂದಿದೆ. ಈ ಯೋಜನೆಯಡಿ ನೀಡುವ ಸಲಹೆಯಂತೆ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ. ಉದಾಹರಣೆಗೆ ಅಸೈನ್ಮೆಂಟ್, ಪ್ರಾಜೆಕ್ಟ್, ಸಾಮೂಹಿಕ ಕಲಿಕೆ, ಸಂಪನ್ಮೂಲ ವ್ಯಕ್ತಿಗಳನ್ನು ಶಾಲೆಗೆ ಕರೆಯಿಸಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು. ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಸೇರಿದಂತೆ ಯೋಜನೆಯ ಹತ್ತು ಹಲವು ಚಟುವಟಿಕೆಗಳಿಂದ ಮಕ್ಕಳಿಗೆ ಪ್ರಯೋಜನ ಲಭ್ಯವಾಗುತ್ತಿದೆ.
ಉಳಿದಂತೆ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಕಲಿಕೆ, ಇ-ಲೈಬ್ರರಿ ಸೇರಿದಂತೆ ಇನ್ನೂ ಅನೇಕ ವ್ಯವಸ್ಥೆಯನ್ನು ಮಾಡಲಾಗಿದೆ. ಅನೇಕ ಪೋಷಕರು ತಮ್ಮ ಮಕ್ಕಳಿಗೆ ಮುಂದಿನ ವರ್ಷದ ಪ್ರವೇಶಕ್ಕೆ ಈಗಲೇ ಶಿಕ್ಷಕರ ಬಳಿ ದುಂಬಾಲು ಬೀಳುತ್ತಿದ್ದಾರೆ. ಈ ಶಾಲೆಯಲ್ಲಿ ಸಂಪೂರ್ಣವಾಗಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ಆಂದೋಲನವನ್ನೇ ಮಾಡಬೇಕಾಯಿತು: ಹಿರಿಯ ಶಿಕ್ಷಕ ರಾಮಾಚಾರಿ ಮಾತನಾಡಿ, "ರಾಜಕಾರಣಿಗಳು, ಶಿಕ್ಷಕರು ಹಾಗೂ ಅಧಿಕಾರಿಗಳು ಕೈ ಜೋಡಿಸಿದರೆ ಎಂತಹ ಶಾಲೆಯನ್ನಾದರೂ ಬದಲಾಯಿಸಬಹುದೆಂಬುದಕ್ಕೆ ಈ ಶಾಲೆ ಸಾಕ್ಷಿಯಾಗಿದೆ. ನಾನು ಬಂದಾಗ ಶಾಲೆ ಅವ್ಯವಸ್ಥೆಯಿಂದ ಕೂಡಿತ್ತು. 14 ಕೊಠಡಿಗಳಿದ್ದರೂ ಪಾಠ ಕೇಳಲು 14 ಮಕ್ಕಳಿರಲಿಲ್ಲ. ಇಂತಹ ಶಾಲೆಗೆ ಬಂದೆ ಎಂದು ನಾನು ಕಣ್ಣೀರು ಹಾಕಿದ್ದೂ ಇದೆ. ಶಾಲೆಗೆ ಮಕ್ಕಳನ್ನು ಕರೆತರಲು ಅಂದೋಲನವನ್ನೇ ಮಾಡಬೇಕಾಯಿತು. ಮೊದಲು ಮನೆ ಮನೆಗೆ ಹೋದಾಗ 10 ಮಕ್ಕಳು ಬರಲಿಲ್ಲ. ಈಗ ನೂರಾರು ಮಕ್ಕಳು ಬರುತ್ತಿದ್ದಾರೆ. ಶಾಲೆಗೆ 500 ಮಕ್ಕಳು ಬರಬೇಕೆಂಬ ಗುರಿ ಇದೆ" ಎಂದರು.
ಸುನೀತಾ ಅಣ್ಣಪ್ಪ ಮಾತನಾಡಿ, "ಶಾಲೆಯಲ್ಲಿ ಕೇವಲ 1-7ನೇ ತರಗತಿಯ ತನಕ 7 ಮಕ್ಕಳಿದ್ದರು. ಸ್ಥಳೀಯರ ನೆರವಿನೊಂದಿಗೆ ನಾವು ಇಲ್ಲಿ ಎಲ್ಜೆಜಿ ಮತ್ತು ಯುಕೆಜಿ ಪ್ರಾರಂಭಿಸಿದ್ದೇವೆ. ಅಂಗನವಾಡಿಯನ್ನೂ ಶಾಲಾ ಆವರಣಕ್ಕೆ ಬರುವಂತೆ ಮಾಡಿ, ಆ ಮಕ್ಕಳು ಕೂಡ ಇದೇ ಶಾಲೆಗೆ ಬರುವಂತೆ ಮಾಡಲಾಗಿದೆ. ಕಳೆದ ವರ್ಷ ಶಾಲೆಯ ವಾತಾವರಣ, ಕಟ್ಟಡ ಹಾಗೂ ಮಕ್ಕಳ ಹಾಜರಾತಿ ಕಾರಣದಿಂದ ಈ ಶಾಲೆ ಪಿಎಂ ಶ್ರೀ ಯೋಜನೆಯಡಿ ಅರ್ಹತೆ ಪಡೆಯಿತು" ಎಂದು ತಿಳಿಸಿದರು.
ಖಾಸಗಿ ಶಾಲೆಯಿಂದ ಬಿಡಿಸಿ ಈ ಶಾಲೆಗೆ ಸೇರಿಸಿದೆ: ಎಸ್ಡಿಎಂಸಿ ಸದಸ್ಯ ಎನ್.ಎಲ್. ಕರಿಬಸಪ್ಪ ಮಾತನಾಡಿ, "ನನ್ನ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿದ್ದೆ, ಈ ಶಾಲೆಯಲ್ಲಿ ಖಾಸಗಿ ಶಾಲೆಗೆ ಪೈಪೋಟಿ ನೀಡುವಂತೆ ಶಿಕ್ಷಣ ನೀಡುತ್ತಾರೆ ಎಂದು ತಿಳಿದು ಮಕ್ಕಳನ್ನು ಇಲ್ಲಿಗೆ ಸೇರಿದ್ದೇನೆ. ಶಾಲೆಯು ಶಿಕ್ಷಕರ ನೆರವಿನಿಂದ ಚೆನ್ನಾಗಿ ನಡೆಯುತ್ತಿದೆ. ಇಲ್ಲಿ ಸಿರಿಧಾನ್ಯದ ಊಟವನ್ನು ಸಹ ನೀಡಲಾಗುತ್ತಿದೆ. ಶಿಕ್ಷಕರು, ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಪೋಷಕರು ಕೈ ಜೋಡಿಸಿದ ಪರಿಣಾಮ ಮುಚ್ಚಬೇಕಿದ್ದ ಶಾಲೆ ಇತರೆ ಶಾಲೆಗಳಿಗೆ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು" ಎಂದರು.