ಬೆಂಗಳೂರು: ಕನ್ನಡ ಕರ್ನಾಟಕದ ಸ್ಥಳೀಯ ಭಾಷೆ. ಸರ್ಕಾರದ ಪ್ರಾಧಿಕಾರಗಳು ಮತ್ತು ಅಧಿಕಾರಿಗಳು ಅದನ್ನು ಬಳಸಿ ಪ್ರೋತ್ಸಾಹಿಸಬೇಕಾದ ಅಗತ್ಯವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು, ಲೋಕಾಯುಕ್ತ ಸಂಸ್ಥೆಯಲ್ಲಿ ದಿನನಿತ್ಯದ ಎಲ್ಲ ಪ್ರಕ್ರಿಯೆಗಳನ್ನು ಕನ್ನಡ ಭಾಷೆಯಲ್ಲಿ ನಡೆಸುವಂತೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿದಾರರ ಮನವಿ ಪುರಸ್ಕರಿಸಲು ನಿರಾಕರಿಸಿತು.
ಸಾಮಾಜಿಕ ಕಾರ್ಯಕರ್ತ ಗುರುನಾಥ್ ವಡ್ಡೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ನ್ಯಾಯಪೀಠ, ಅರ್ಜಿದಾರರು ಕೋರಿರುವ ಮನವಿಯನ್ನು ಪುರಸ್ಕರಿಸಲು ತಿರಸ್ಕರಿಸಿದೆ.
ರಾಜ್ಯ ಸರ್ಕಾರ ಮತ್ತು ಅದರ ಅಧೀನದ ಪ್ರಾಧಿಕಾರಗಳು ಕನ್ನಡ ಬಳಕೆ ಮಾಡುವುದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ಸರ್ಕಾರ ಮತ್ತು ಅಧಿಕಾರಿಗಳು ಸಾಧ್ಯವಾದಷ್ಟು ಸ್ಥಳೀಯ ಭಾಷೆಯನ್ನೇ ಬಳಸಬೇಕು. ಆಗ ಮಾತ್ರ ರಾಜ್ಯದ ಭಾಷಾ ಸಂಸ್ಕೃತಿ ಉಳಿಯುತ್ತದೆ ಎಂದು ನ್ಯಾಯಪೀಠ ಆಶಯ ವ್ಯಕ್ತಪಡಿಸಿತು.
ಸರ್ಕಾರದಲ್ಲಿ ಏಕ ಭಾಷೆ ಬಳಕೆ ಮಾಡಬೇಕೆಂಬ ಸಾರ್ವತ್ರಿಕ ಸೂತ್ರವಿಲ್ಲ. ಹೀಗಾಗಿ ಕನ್ನಡ ಭಾಷೆಯಿರುವಲ್ಲಿ ಆಂಗ್ಲಭಾಷೆ ಬಳಕೆ ಅಗತ್ಯವಿದ್ದು ಬಳಸಿದರೆ ಅದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.
ಮೂಲಭೂತವಾಗಿ ಸರ್ಕಾರಿ ವ್ಯವಹಾರಗಳಲ್ಲಿ ಯಾವ ಭಾಷೆ ಬಳಸಬೇಕೆಂಬ ನೀತಿಯು ಅನುಕೂಲತೆಯ ವಿಷಯವಾಗಿದೆ. ಕನ್ನಡ ಭಾಷೆ ಸ್ಥಳೀಯ ಭಾಷೆ. ಅದಕ್ಕೆ ಪ್ರಾಮುಖ್ಯತೆ ನೀಡಿ ಪ್ರೋತ್ಸಾಹಿಸಬೇಕು. ಆದರೆ, ಈ ಅಂಶಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪುರಸ್ಕರಿಸಲು ಅರ್ಹವಾಗುವುದಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿತು.
ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಅಂಜಾರಿಯಾ, ನನಗೆ ಕನ್ನಡ ಬರುವುದಿಲ್ಲ. ಅರ್ಜಿದಾರರ ಮನವಿ ಪುರಸ್ಕರಿಸಿದರೆ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಪೀಠ, ಹೇಗೆ ಕಾರ್ಯನಿರ್ವಹಿಸಲು ಸಾಧ್ಯ? ಕೋರ್ಟ್ ಕಾರ್ಯನಿರ್ವಹಿಸುವುದು ಬೇಡವೇ ಎಂದು ಪ್ರಶ್ನಿಸಿತು.
ಈ ವೇಳೆ ಸರ್ಕಾರಿ ವಕೀಲರು ಪ್ರತಿಕ್ರಿಯಿಸಿ, ಸರ್ಕಾರದ ವ್ಯವಹಾರಗಳಲ್ಲಿ ಶೇ.90ರಷ್ಟು ಕನ್ನಡ ಬಳಕೆ ಮಾಡುತ್ತಿದ್ದಾರೆ ಎಂದು ಪೀಠಕ್ಕೆ ವಿವರಿಸಿದರು. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ನಾವು ಆಂಗ್ಲ ಭಾಷೆಯ ವಿರೋಧಿಗಳಲ್ಲ. ಆದರೆ, ಸಂಸ್ಥೆಯ ಎಲ್ಲ ಕಾರ್ಯಚಟುವಟಿಕೆಗಳು ವಿಚಾರಗಳು ಗ್ರಾಮೀಣ ಭಾಗದ ಜನ ತಿಳಿದುಕೊಳ್ಳುವಂತಾಗಬೇಕಾಗಿದೆ. ಲೋಕಾಯುಕ್ತ ಸಂಸ್ಥೆಯ ಆದೇಶಗಳು ರಾಜ್ಯದ ಎಲ್ಲ ಜನರಿಗೂ ಅರ್ಥವಾಗುವಂತಿರಬೇಕು. ಹೀಗಾಗಿ ಎಲ್ಲ ಪ್ರಕ್ರಿಯೆ ಅಂದರೆ, ಆದೇಶಗಳು, ನೋಟಿಸ್ ಸೇರಿದಂತೆ ಎಲ್ಲ ಪ್ರಕ್ರಿಯೆಯನ್ನು ಕನ್ನಡದಲ್ಲಿರುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದರು.
ಇದನ್ನೂ ಓದಿ: ನೌಕರರ ತಪ್ಪಿಗಿಂತಲೂ ಆತನ ಸೇವೆಯಲ್ಲಿನ ಒಳ್ಳೆಯ ಕಾರ್ಯಗಳನ್ನೂ ಪರಿಗಣಿಸಬೇಕು: ಹೈಕೋರ್ಟ್ - High Court