ಹುಬ್ಬಳ್ಳಿ: ಪ್ರಸ್ತುತ ಮುಂಗಾರು ಮಳೆ ವ್ಯಾಪಕವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಹಿನ್ನೆಲೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಆರಂಭಿಸಿದ ಜೋಗ್ ಫಾಲ್ಸ್ ಪ್ಯಾಕೇಜ್ ಟೂರ್ ಬಸ್ಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ್ ಹೇಳಿದ್ದಾರೆ.
ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ಜೋಗ್ ಫಾಲ್ಸ್ ಪ್ಯಾಕೇಜ್ ಟೂರ್ ಬಸ್ಗಳಿಗೆ ಚಾಲನೆ ನೀಡಿ, ಅವರು ಮಾತನಾಡಿದರು. ಶರಾವತಿ ಕಣಿವೆ ಪ್ರದೇಶದಲ್ಲಿ ಮಳೆ ಬಿರುಸಾಗಿದೆ. ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದೆ. ಮೈದುಂಬಿಕೊಂಡಿರುವ ರಾಜ, ರಾಣಿ, ರೋರರ್ ಮತ್ತು ರಾಕೆಟ್ ಜಲಪಾತಗಳು ಭೋರ್ಗರೆಯುತ್ತ ಧುಮ್ಮಿಕ್ಕುತ್ತಿರುವ ದೃಶ್ಯವೈಭವವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಎಂ. ಅವರ ನಿರ್ದೇಶನದಂತೆ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಮೊಹರಂ ಕಡೇ ದಿನ ಸಾರ್ವಜನಿಕ ರಜೆ ಪ್ರಯುಕ್ತ ಜುಲೈ 17 ರಂದು ಬುಧವಾರ, ಪ್ರತಿ ಶನಿವಾರ, ಭಾನುವಾರ ಮತ್ತು ಸಾರ್ವಜನಿಕ ರಜಾ ದಿನಗಳಂದು ಹುಬ್ಬಳ್ಳಿ ಗೋಕುಲ ರಸ್ತೆಯ ಬಸ್ ನಿಲ್ದಾಣದಿಂದ ಜೋಗ್ ಫಾಲ್ಸ್ಗೆ ವಿಶೇಷ ಪ್ಯಾಕೇಜ್ ಟೂರ್ ಸಾರಿಗೆ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ರಾಜಹಂಸ ಬಸ್ ಬೆಳಗ್ಗೆ 07-30ಕ್ಕೆ, ವೋಲ್ವೋ ಎಸಿ ಬಸ್ 08-00 ಗಂಟೆಗೆ ಹಾಗೂ ವೇಗದೂತ ಬಸ್ 08-10ಕ್ಕೆ ಹೊರಡುತ್ತವೆ. ಮಾರ್ಗ ಮಧ್ಯದಲ್ಲಿ ಶಿರಸಿ ಮಾರಿಕಾಂಬ ದೇವಸ್ಥಾನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೋಗ್ಫಾಲ್ಸ್ನಿಂದ ಸಂಜೆ 5-00 ಗಂಟೆಗೆ ಹೊರಡುತ್ತವೆ. ರಾತ್ರಿ 9-30 ಮತ್ತು 09-00 ಗಂಟೆಗೆ ಹುಬ್ಬಳ್ಳಿಗೆ ಆಗಮಿಸುತ್ತವೆ. ಹೋಗಿ ಬರಲು ಒಬ್ಬರಿಗೆ ರಾಜಹಂಸ ಬಸ್ಗೆ ರೂ. 430 ಹಾಗೂ ವೋಲ್ವೊ ಬಸ್ಗೆ ರೂ. 600 ಪ್ರಯಾಣ ದರ ನಿಗದಿಪಡಿಸಲಾಗಿದೆ. ವಿಶೇಷ ಸಾರಿಗೆಗಳಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ ಎಂದಿದ್ದಾರೆ.
ಮುಂಗಡ ಬುಕ್ಕಿಂಗ್ : ವಿಶೇಷ ಪ್ಯಾಕೇಜ್ ಟೂರ್ ಬಸ್ಗಳಿಗೆ www.ksrtc.in ವೆಬ್ ಸೈಟ್, KSRTC Mobile App ಅಥವಾ ಹೊಸೂರು ಬಸ್ ನಿಲ್ದಾಣ ಹಾಗೂ ಗೋಕುಲ ರಸ್ತೆಯ ಬಸ್ ನಿಲ್ದಾಣದಲ್ಲಿ ಮುಂಗಡ ಬುಕ್ಕಿಂಗ್ ಮಾಡಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 7760991682, 7760991674ಗೆ ಸಂಪರ್ಕಿಸಬಹುದಾಗಿದೆ ಎಂದರು.
ಇಂದು 3 ರಾಜಹಂಸ ಹಾಗೂ 2 ಐರಾವತ ಬಸ್ಗಳು ಜೋಗ್ ಫಾಲ್ಸ್ಗೆ ತೆರಳಿವೆ. ಎನ್.ಜಿ.ಒ ಹಾಗೂ ಸಂಘ ಸಂಸ್ಥೆಗಳು, ಸರ್ಕಾರಿ, ಖಾಸಗಿ ಸಿಬ್ಬಂದಿ ಒಟ್ಟಿಗೆ 35ಕ್ಕೂ ಹೆಚ್ಚು ಜನರಿದ್ದರೆ ರಾಜಹಂಸ ಬಸ್ ಹಾಗೂ 45ಕ್ಕೂ ಹೆಚ್ಚು ಜನರಿದ್ದರೆ ವೋಲ್ವೊ ಬಸ್ನ್ನು ಅವರು ಬಯಸಿದ ದಿನ ಹಾಗೂ ಸಮಯಕ್ಕೆ ವ್ಯವಸ್ಥೆ ಮಾಡಲಾಗುವುದು. ಜೋಗದ ದೃಶ್ಯ ವೈಭವ ಕೆಲವೇ ದಿನಗಳ ಅವಧಿಗೆ ಮಾತ್ರ ಲಭ್ಯವಿರುವುದರಿಂದ ಸಾರ್ವಜನಿಕರು ಪ್ಯಾಕೇಜ್ ಟೂರ್ ಸಾರಿಗೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪ್ರವಾಸಕ್ಕೆ ತೆರಳಿದ ಬಸ್ಗಳಲ್ಲಿ ಹಾಡು, ಡ್ಯಾನ್ಸ್, ಹಾಸ್ಯದೊಂದಿಗೆ ಮಕ್ಕಳು, ಯುವಕರು, ಹಿರಿಯರು, ದಂಪತಿ, ಕುಟುಂಬದವರು, ಸ್ನೇಹಿತರು ಸೇರಿದಂತೆ ಎಲ್ಲಾ ಪ್ರವಾಸಿಗರು ಮೋಜು, ಮನರಂಜನೆಯೊಂದಿಗೆ ಇಡೀ ದಿನ ಸಂಭ್ರಮಿಸಿದರು. ಕಡಿಮೆ ಹಣದಲ್ಲಿ ಹೆಚ್ಚಿನ ಖಷಿಯೊಂದಿಗೆ ಪ್ರಯಾಸವಿಲ್ಲದ ಪ್ರವಾಸದ ಅನುಭವ ಹಂಚಿಕೊಂಡರು.
ಪ್ರವಾಸಿಗ ಸಂಕರ್ಷ ಮಾತನಾಡಿ, ಹುಬ್ಬಳ್ಳಿಯಿಂದ ಜೋಗ್ ಫಾಲ್ಸ್ಗೆ ವಿಶೇಷ ಸಾರಿಗೆ ಆರಂಭಿಸಿರುವುದು ಖುಷಿ ನೀಡಿದೆ. ಮೊದಲ ಬಾರಿಗೆ ಆನ್ಲೈನ್ ಬುಕಿಂಗ್ ಮಾಡಿ, ಜೋಗ್ ಫಾಲ್ಸ್ ವೀಕ್ಷಿಸಲು ತೆರಳುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದರು.
ಪ್ರಯಾಣಿಕ ಸಂಜಯ ದಯಾಳ ಮಾತನಾಡಿ, ಜೋಗ್ ಫಾಲ್ಸ್ಗೆ ಶನಿವಾರ, ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಂದು ವಿಶೇಷ ಬಸ್ ಪ್ರಾರಂಭಿಸಿರುವುದು ಖುಷಿ ವಿಚಾರ. ಪ್ರತಿದಿನವೂ ಜೋಗ್ ಫಾಲ್ಸ್ಗೆ ಬಸ್ಗಳನ್ನು ಬಿಡಬೇಕು ಎಂದು ಮನವಿ ಮಾಡಿದರು.
ಡಿಪೋ ಮ್ಯಾನೇಜರ್ ಮುನ್ನಾಸಾಬ್, ಸಹಾಯಕ ಸಂಚಾರ ವ್ಯವಸ್ಥಾಪಕ ಐ. ಜಿ ಮಾಗಾಮಿ, ಬಸ್ ನಿಲ್ದಾಣಾಧಿಕಾರಿ ಹಂಚಾಟೆ, ದಾವಲಸಾಬ್ ಬೂದಿಹಾಳ, ಚಾಲಕರು, ಸಿಬ್ಬಂದಿ ಹಾಗೂ ಪ್ರಯಾಣಿಕರು ಉಪಸ್ಥಿತರಿದ್ದರು.
ಇದನ್ನೂ ಓದಿ : ಹುಬ್ಬಳ್ಳಿ - ಜೋಗ್ ಫಾಲ್ಸ್ ನಡುವೆ ವಿಶೇಷ ಬಸ್ಗೆ ಹೆಚ್ಚಿದ ಬೇಡಿಕೆ; ಬಸ್ಗಳ ಸಂಖ್ಯೆ ಹೆಚ್ಚಳ - Jog Falls buses increased