ಬೆಂಗಳೂರು: ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಮಾಡುವವರಿಗೆ ದೀಪಾವಳಿಯ ಸಿಹಿ ಸುದ್ದಿ ನೀಡಿದ್ದು, ಒಂದು ಬಾರಿಯ ಪರಿಹಾರ ಯೋಜನೆಯಡಿ ನವೆಂಬರ್ 31ರ ವರೆಗೂ ಆಸ್ತಿ ತೆರಿಗೆಯ ಬಾಕಿದಾರರಿಗೆ ಬಡ್ಡಿ ಮತ್ತು ದಂಡ ಮನ್ನಾ ಮಾಡಲಾಗಿದೆ. ಪಾವತಿ ಮಾಡದ ಆಸ್ತಿದಾರರಿಗೆ ಡಿಸೆಂಬರ್ 1 ರಿಂದ ತೆರಿಗೆಯು ದ್ವಿಗುಣಗೊಳಿಸುವ ಎಚ್ಚರಿಕೆಯನ್ನು ಬಿಬಿಎಂಪಿ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಬಿಎಂಪಿ ಅಧಿಕಾರಿಗಳು, ಆಸ್ತಿ ತೆರಿಗೆ ಬಾಕಿ ಇರುವ ನಾಗರೀಕರು ಇದರ ಲಾಭವನ್ನು ಸರಿಯಾಗಿ ಪಡೆಯಲು ಮನವಿ ಮಾಡಿದೆ. ಅಲ್ಲದೇ 250 ಕೋಟಿ ರೂಪಾಯಿಗಿಂತ ಹೆಚ್ಚು ಬಾಕಿ ಇರುವ 16 ಸಾವಿರಕ್ಕೂ ಹೆಚ್ಚು ಪರಿಷ್ಕರಿಸಿದ ಪ್ರಕರಣಗಳು ಮತ್ತು 400 ಕೋಟಿ ರೂಪಾಯಿಗಿಂತ ಹೆಚ್ಚು ಬಾಕಿ ಇರುವ ಸುಮಾರು 2.4 ಲಕ್ಷ ಸುಸ್ತಿದಾರರ ಪ್ರಕರಣಗಳು ಪಾವತಿಸಲು ಬಾಕಿಯಿದೆ ಎಂದು ತಿಳಿಸಿದೆ.
ಪ್ರತಿಯೊಬ್ಬರೂ ಬಾಕಿ ಆಸ್ತಿ ತೆರಿಗೆಯನ್ನು ನವೆಂಬರ್ 31ರೊಳಗಾಗಿ ಪಾವತಿಸಬೇಕು. ಇಲ್ಲವಾದಲ್ಲಿ ಡಿಸೆಂಬರ್ 1ರಿಂದ ಪಾವತಿಸುವ ಬಾಕಿ ಆಸ್ತಿ ತೆರಿಗೆ ದ್ವಿಗುಣಕ್ಕಿಂತ ಹೆಚ್ಚಾಗುತ್ತದೆ. ಆಸ್ತಿ ತೆರಿಗೆ ಬಾಕಿಯನ್ನು ತಕ್ಷಣವೇ ಪಾವತಿಸದಿದ್ದರೆ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತದೆ. ಪಾಲಿಕೆಯ ವೆಬ್ಸೈಟ್ಗೆ ಹೋಗಿ ಬಾಕಿ ಆಸ್ತಿ ತೆರಿಗೆಯನ್ನು ಶೀಘ್ರವಾಗಿ ಪಾವತಿ ಮಾಡಬಹುದು. ಸಾರ್ವಜನಿಕರು ತಮ್ಮ ಸ್ವತ್ತಿನ ಬಾಕಿ ಆಸ್ತಿ ತೆರಿಗೆಯನ್ನು ಪಾವತಿಸಲು ಒಟಿಎಸ್ ಯೋಜನೆಯ ಪ್ರಯೋಜನವನ್ನು ಪಡೆಯಲು ಇದು ಕೊನೆಯ ಅವಕಾಶ. ಆದ್ದರಿಂದ, ಎಲ್ಲರೂ ಒಟಿಎಸ್‌ನ ಲಾಭವನ್ನು ಪಡೆದುಕೊಂಡು ತಕ್ಷಣವೇ ಪಾವತಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ತೆರವು ಕಾರ್ಯ ಆರಂಭ