ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ (ಕೆಎಸ್ಆರ್ಟಿಸಿ) 01/01/2020ರಿಂದ 28/02/2023ರವರೆಗಿನ ಅವಧಿಯಲ್ಲಿ ನಿವೃತ್ತಿ ಹೊಂದಿರುವ ಹಾಗೂ ಸಂಸ್ಥೆಯಿಂದ ಹೊರಗೆ ಹೋಗಿರುವ ಎಲ್ಲಾ ಅಂದಾಜು 10,000 ನೌಕರರಿಗೂ ಶೇಕಡಾ 15ರಷ್ಟು ವೇತನ ಹೆಚ್ಚಳದ ಸುಮಾರು 220 ಕೋಟಿ ರೂ. ಬಾಕಿ ಹಣ ನೀಡುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಕಟಿಸಿದ್ದಾರೆ.
ಶಾಂತಿನಗರದಲ್ಲಿರುವ ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯಲ್ಲಿ ಗುರುವಾರ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಹಾಗೂ ಕೆಎಸ್ಆರ್ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್(ವಾಸು) ಉಪಸ್ಥಿತಿಯಲ್ಲಿ, ನಿಗಮದ 11 ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ಕುಂದುಕೊರತೆಗಳ ಸಭೆ ನಡೆಯಿತು.
ಈ ಸಭೆಯಲ್ಲಿ ಎಲ್ಲ ಸಂಘಟನೆಗಳು ತಮ್ಮ ತಮ್ಮ ಬೇಡಿಕೆ ಮತ್ತು ಅಭಿಪ್ರಾಯಗಳನ್ನು ಮಂಡಿಸಿದರು. ಮುಖ್ಯವಾಗಿ, 01/01/2020 ರಿಂದ 28/02/2023 ರವರೆಗಿನ ವೇತನ ಬಾಕಿ ಹಣ, 01/01/2024ರಿಂದ ಮೂಲ ವೇತನ ಹೆಚ್ಚಳ ಹಾಗೂ 01/01/2020 ರಿಂದ 28/02/2023ರವರೆಗಿನ ವೇತನ ಹೆಚ್ಚಳದ ಬಾಕಿಯನ್ನು ನಿವೃತ್ತ ಹಾಗೂ ಇತರೆ ಕಾರಣಗಳಿಂದ ಸಂಸ್ಥೆಗಳಿಂದ ಹೊರಹೋಗಿರುವ ನೌಕರರ ಹಾಗೂ ಇತರೆ ಬೇಡಿಕೆಗಳ ಬಗ್ಗೆ ಚರ್ಚಿಸಿದರು.
ಅಂತಿಮವಾಗಿ, 01/01/2020ರಿಂದ 28/022023ರವರೆಗಿನ ನಿವೃತ್ತಿ ಹೊಂದಿರುವ ಹಾಗೂ ಸಂಸ್ಥೆಯಿಂದ ಹೊರಹೋಗಿರುವ ಎಲ್ಲ ಅಂದಾಜು 10,000 ನೌಕರರಿಗೂ ಶೇ.15ರಷ್ಟು ವೇತನ ಹೆಚ್ಚಳದ ಸುಮಾರು 220 ಕೋಟಿ ರೂ ಬಾಕಿ ಹಣ ನೀಡುವುದಾಗಿ ಸಾರಿಗೆ ಸಚಿವರು ಭರವಸೆ ನೀಡಿದರು. ಈ ಬಗ್ಗೆ ಕೂಡಲೇ ಆದೇಶ ಹೊರಡಿಸಲು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು. ಈ ಕ್ರಮಕ್ಕಾಗಿ ಎಲ್ಲ ಸಂಘಟನೆಗಳು ಹರ್ಷ ವ್ಯಕ್ತಪಡಿಸಿದ್ದು ಸಾರಿಗೆ ಸಚಿವರು, ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯನ್ನು ಅಭಿನಂದಿಸಿದ್ದಾರೆ.
01/01/2024ರಿಂದ ಮಾಡಬೇಕಾಗಿರುವ ವೇತನ ಹೆಚ್ಚಳದ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ''ಮುಂದಿನ ದಿನಗಳಲ್ಲಿ ಹೊಸ ಬಸ್ಗಳ ಸೇರ್ಪಡೆಯಾಗಿ ಆದಾಯ ವೃದ್ಧಿಸಲಿದ್ದು, ಆರ್ಥಿಕ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಕ್ರಮ ವಹಿಸಲಾಗುವುದು'' ಎಂದು ತಿಳಿಸಿದರು.
''ಇಂದು ಮೊದಲ ಸಭೆಯಾಗಿರುವುದರಿಂದ ಮಹತ್ವದ ಆದೇಶ ಹೊರಬಿದ್ದಿದ್ದು, ಮುಂದಿನ ಸಭೆಗಳಲ್ಲಿ ಹಲವು ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಚರ್ಚೆ ಮಾಡಿ ಮುಂದುವರಿಯೋಣ. ಇದು ನಿಮ್ಮ ಸಂಸ್ಥೆ, ಈ ಸಂಸ್ಥೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ. ಅದರೊಂದಿಗೆ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸಿ, ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಯ ಪಥದಲ್ಲಿ ತೆಗೆದುಕೊಂಡು ಹೋಗಲು ತಮ್ಮೆಲ್ಲರ ಸಹಕಾರ ಬೇಕು'' ಎಂದು ಕೋರಿದರು.
ಸಭೆಯಲ್ಲಿ ಕೆಎಸ್ಆರ್ಟಿಸಿ ಎಂಡಿ ವಿ.ಅನ್ಬುಕುಮಾರ್, ಬಿಎಂಟಿಸಿ ಎಂಡಿ ಆರ್.ರಾಮಚಂದ್ರನ್, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಎಂಡಿ ಎಸ್.ಭರತ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಬಹು ನಿರೀಕ್ಷಿತ ನಮ್ಮ ಮೆಟ್ರೋ ಚಾಲಕರಹಿತ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿ