ಬೆಂಗಳೂರು: ಅಕ್ಷಯ ತೃತೀಯ ಹಿನ್ನೆಲೆ ನಗರದ ಚಿನ್ನದ ಅಂಗಡಿಗಳಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ. ಗ್ರಾಹಕರು ಚಿನ್ನ ಬೆಳ್ಳಿ ಖರೀದಿಗೆ ಮುಗಿ ಬಿದಿದ್ದಾರೆ. ಇಂದು ಶುಭ ಶುಕ್ರವಾರ ಕೂಡ ಆಗಿರುವುದು ಒಂದು ರೀತಿಯಲ್ಲಿ ಚಿನ್ನದ ಹಬ್ಬವಾಗಿ ಮಾರ್ಪಟ್ಟಿದೆ. ಚಿನ್ನ- ಬೆಳ್ಳಿ ಸೇರಿದಂತೆ ಯಾವುದೇ ಲೋಹದ ವಸ್ತುವನ್ನು ಖರೀದಿ ಮಾಡಿದರೆ ದುಪ್ಪಟ್ಟಾಗುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ. ಈ ಕಾರಣಕ್ಕೆ ಬೆಂಗಳೂರಿನ ಚಿನ್ನದ ಅಂಗಡಿಯಲ್ಲಿ ಚಿನ್ನ- ಬೆಳ್ಳಿ, ವಜ್ರ ಸೇರಿದಂತೆ ಲೋಹದ ಖರೀದಿಗೆ ಜನ ಮುಗಿಬಿದ್ದಿದ್ದಾರೆ.
ಅಕ್ಷಯ ತೃತೀಯದ ದಿನ ಪ್ರತಿಯೊಬ್ಬರು ಚಿನ್ನ ಖರೀದಿ ಮಾಡುವ ಹಿನ್ನೆಲೆ ಕೋಟ್ಯಂತರ ರೂಪಾಯಿ ವಹಿವಾಟು ನೆಡೆಯುತ್ತಿದೆ. ನಗರದ 1 ಸಾವಿರಕ್ಕೂ ಹೆಚ್ಚು ಜುವೆಲ್ಲರಿ ಶಾಪ್‌ಗಳಲ್ಲಿನ ವಿಶೇಷ ಚಿನ್ನ ಹಾಗೂ ಬೆಳ್ಳಿಯ ಒಡವೆಗಳು ನೋಡುಗರನ್ನು ಆಕರ್ಷಿಸುತ್ತಿವೆ. ಈ ವರ್ಷದ ಅಕ್ಷಯ ತೃತೀಯ ಇಂದು ಬೆಳ್ಳಗ್ಗೆ 6:57 ರ ರೋಹಿಣಿ ನಕ್ಷತ್ರದಿಂದ ಆರಂಭವಾಗಿ ಶನಿವಾರದ ಬೆಳ್ಳಗ್ಗೆಯವರೆಗೂ ಇದೆ. ಈ ಅವಧಿಯಲ್ಲಿ ಜನರು ಆಭರಣಗಳನ್ನು ಖರೀದಿಸುತ್ತಿದ್ದಾರೆ.
ನಗರದಲ್ಲಿ ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 6600 ರೂ. ಇದ್ದು, 24 ಕ್ಯಾರೆಟ್ ಚಿನ್ನದ ಬೆಲೆ 7120 ರೂ. ಗೆ ಏರಿಕೆಯಾಗಿದೆ. ಎಷ್ಟೇ ಬೆಲೆ ಏರಿಕೆಯಾದರೂ ನಮ್ಮ ಆಚಾರ, ವಿಚಾರಗಳನ್ನು ಬಿಡುವುದಕ್ಕೆ ಆಗುವುದಿಲ್ಲ ಎಂದು ಹೇಳಿ ಜನರು ತಮಗಿಷ್ಟದ ಚಿನ್ನವನ್ನ ಖರೀದಿ ಮಾಡಲು ತಾ ಮುಂದು ನಾ ಮುಂದು ಎಂದು ಮುಗಿಬಿದಿದ್ದಾರೆ.
ಅಕ್ಷಯ ತೃತೀಯದ ಹಿನ್ನೆಲೆ ಅಂಗಡಿಯಲ್ಲಿ ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರುವ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನಲ್ಲಿ ವಿವಿಧ ಶೈಲಿಯ ಆಭರಣದ ಕಲೆಕ್ಷನ್ಸ್ ಜನರನ್ನು ಆಕರ್ಷಿಸಿದವು. ಇಲ್ಲಿ ವಿಶೇಷ ಆಫರ್ಗಳನ್ನು ನೀಡಲಾಗುತ್ತಿದೆ. 50 ಸಾವಿರ ಮೇಲ್ಪಟ್ಟ ಖರೀದಿಗೆ ಅಯೋಧ್ಯೆ ರಾಮ ಮಂದಿರದಲ್ಲಿ ಪೂಜಿಸಲ್ಪಟ್ಟ ಬೆಳ್ಳಿ ರಾಮನ ವಿಗ್ರಹ ಹಾಗೂ ಪ್ರಸಾದ ನೀಡಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ ಮಾಲೀಕ ಟಿ.ಎ. ಶರವಣ ಗ್ರಾಹಕರಿಗೆ ಶುಭಾಶಯ ಕೋರಿದರು. ಸಂಸ್ಥೆಯ ರಾಯಭಾರಿ ಬಿಗ್‌ಬಾಸ್ ಖ್ಯಾತಿಯ ನಮ್ರತಾ ಗೌಡ ಕನ್ನಡ ಕಿರುತೆರೆ ನಟಿ ಪೂರ್ಣಿಮಾ ಭಾಗಿಯಾಗಿದ್ದರು.
ಬರಗಾಲದಲ್ಲೂ ಚಿನ್ನ ಖರೀದಿಗೆ ಮುಗಿಬಿದ್ದ ಮಹಿಳೆಯರು: ಅಕ್ಷಯ ತೃತೀಯ ಹಿನ್ನೆಲೆ ಗದಗ ನಗರದಲ್ಲೂ ಜನರು ಚಿನ್ನ ಖರೀದಿಯಲ್ಲಿ ಮುಗಿಬಿದ್ದ ದೃಶ್ಯ ಕಂಡು ಬಂದಿತು. ನಗರದ ಸರಾಫ್ ಬಜಾರ್ನಲ್ಲಿರುವ ಚಿನ್ನದ ಅಂಗಡಿಗಳು ಜನರಿಂದ ಫುಲ್ ರಶ್ ಆಗಿದ್ದವು. ಕಳೆದ ವರ್ಷಕ್ಕಿಂತ ಈ ಬಾರಿ ಚಿನ್ನದ ಬೆಲೆ ಗಗನಕ್ಕೇರಿದ್ದರೂ ಕೂಡ ಚಿನ್ನ ಪ್ರೀಯರು ಚಿನ್ನ ಖರೀದಿಯಲ್ಲಿ ತೊಡಗಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಅಕ್ಷಯ ತೃತೀಯ ಚಿನ್ನ ಖರೀದಿಗೆ ಪ್ರಾಶಸ್ತ್ಯವಾದ ದಿನವಾಗಿದ್ದರಿಂದ ಮಹಿಳೆಯರು ವಿವಿಧ ಚಿನ್ನಾಭರಣ ಖರೀದಿಸಿ ಖುಷಿ ವ್ಯಕ್ತಪಡಿಸಿದರು. ಬರಗಾಲದಲ್ಲೂ ಚಿನ್ನ ಖರೀದಿ ಜೋರಾಗಿತ್ತು.
ಇದನ್ನೂ ಓದಿ: ಐಷಾರಾಮಿ ಮನೆಗಳ ಖರೀದಿಯತ್ತ ಭಾರತೀಯರ ಚಿತ್ತ: ಅಗ್ಗದ ಮನೆಗಳ ಮಾರಾಟದಲ್ಲಿ ಕುಸಿತ! - Housing Market