ಬೆಳಗಾವಿ: ಒಂದೆಡೆ ಸಾಲಗಾರರ ಕಾಟ, ಮತ್ತೊಂದೆಡೆ ದುಡಿದು ಸಾಲ ತೀರಿಸಬೇಕು ಎಂದರೆ ಕೂಲಿಯೂ ಸಿಗುತ್ತಿಲ್ಲ. ಹಾಗಾಗಿ, ಗೋಕಾಕ್ ತಾಲೂಕಿನ ಸಾವಳಗಿ ಗ್ರಾಮದ 20ಕ್ಕೂ ಅಧಿಕ ಮಹಿಳೆಯರು ದಿಕ್ಕೆ ತೋಚದಂತಾಗಿದ್ದಾರೆ. ಸಾಲ ಮರುಪಾವತಿಗೆ ಕಾಲಾವಕಾಶ ನೀಡುವಂತೆ ಗೋಗರೆಯುತ್ತಿದ್ದಾರೆ.
ನಿರಂತರ ಮಳೆ, ಪ್ರವಾಹದಿಂದ ಕೂಲಿ ಕೆಲಸ ಮಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಬೇರೆಯವರ ಗದ್ದೆಯಲ್ಲಿ ಕೂಲಿ ಕೆಲಸಕ್ಕೆ ಹೋಗಿ ಈ ಮಹಿಳೆಯರು ಜೀವನ ಸಾಗಿಸುತ್ತಿದ್ದರು. ಆದರೆ, ಸದ್ಯ ಗದ್ದೆಗಳಲ್ಲಿ ನೀರು ಹೊಕ್ಕಿದ್ದರಿಂದ ಕೂಲಿ ಕೆಲಸಕ್ಕೆ ಕೊಕ್ಕೆ ಬಿದ್ದಿದೆ. ಇತ್ತ ಸಾಲ ನೀಡಿದ್ದ ಖಾಸಗಿ ಫೈನಾನ್ಸ್ ಕಂಪನಿ ಪ್ರತಿನಿಧಿಗಳು, ಸಾಲದ ಕಂತು ತುಂಬುವಂತೆ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಆರೋಪಗಳು ಕೇಳಿ ಬಂದಿವೆ.
ಫೈನಾನ್ಸ್ ಕಿರುಕುಳಕ್ಕೆ ಬೇಸತ್ತ ಮಹಿಳೆಯರು, ಜಿಲ್ಲಾಧಿಕಾರಿ ಕಚೇರಿಗೆ ಬಂದು ಕಣ್ಣೀರು ಹಾಕಿದರು. ಇದೇ ವೇಳೆ ಈಟಿವಿ ಭಾರತ ಜೊತೆಗೆ ಮಾತನಾಡಿ ಅಳಲು ತೋಡಿಕೊಂಡ ಸರಸ್ವತಿ ಅಪ್ಪೊಜಪ್ಪಗೋಳ, ಸಾಲಗಾರರು ಮನೆಗೆ ಬಂದು ಕುಳಿತುಕೊಳ್ಳುತ್ತಾರೆ. ನೀವು ಏನು ಮಾಡುತ್ತಿರಿ ಗೊತ್ತಿಲ್ಲ. ಸಾಲ ತುಂಬಲೇಬೇಕು ಎಂದು ಪೀಡಿಸುತ್ತಿದ್ದಾರೆ. ಮಕ್ಕಳಿಗೆ ಏನಾದರು ತಿನ್ನೋಕೆ ಮಾಡಬೇಕೆಂದರೂ ಏನೂ ಇಲ್ಲ. ಮಕ್ಕಳ ಗೋಳಾಟ ನೋಡೋಕೆ ಆಗುತ್ತಿಲ್ಲ. ದಯವಿಟ್ಟು ಸಾಲ ತುಂಬಲು ಕಾಲಾವಕಾಶ ನೀಡಿ ಎಂದು ಕೇಳಿಕೊಂಡರು.
ಜ್ಯೋತಿ ಗೊರವರ ಮಾತನಾಡಿ, ಘಟಪ್ರಭಾ ನದಿ ನೀರು ಮನೆಗೆ ನುಗ್ಗಿ ಸಮಸ್ಯೆಯಲ್ಲಿದ್ದೇವೆ. ಆದರೂ ಮಕ್ಕಳ ಮೈಮೇಲಿನ ಬಂಗಾರ ಒತ್ತೆ ಇಟ್ಟು ಸಾಲ ತುಂಬಿದ್ದೇವೆ. ಈಗ ಏನೂ ಇಲ್ಲ. ರಾತ್ರಿ 1 ಗಂಟೆವರೆಗೆ ಸಾಲ ಕೊಟ್ಟವರು ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಬಾಯಿಗೆ ಬಂದಂಗೆ ಬೈಯುತ್ತಾರೆ. ಹಾಗಾಗಿ, ಡಿಸಿ ಆಫೀಸಿಗೆ ಓಡಿಬಂದಿದ್ದೇವೆ. ದಯವಿಟ್ಟು ನಮಗೆ 3 ತಿಂಗಳು ಕಾಲಾವಕಾಶ ಕೊಡಿ. ಸಾಲ ತುಂಬುತ್ತೇವೆ ಎಂದು ಅಲವತ್ತುಕೊಂಡರು.
ಮಳೆಯಿಂದ ಹಾನಿಯಾಗಿದ್ದರಿಂದ ಕಳೆದ ಎರಡು ತಿಂಗಳಿನಿಂದ ನಾವು ಸಾಲದ ಕಂತು ಕಟ್ಟಿಲ್ಲ. ಮಾಡೋಕೆ ಕೆಲಸ ಇಲ್ಲ. ಇಂಥ ಸಂದರ್ಭದಲ್ಲಿ ಫೈನಾನ್ಸ್ ಕಂಪನಿಯವರು ಮನೆಗೆ ಬಂದು ಸಾಲ ತುಂಬುವಂತೆ ಕಿರುಕುಳ ನೀಡುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂದು ಆಶಾ ಹರಿಜನ ದೂರಿದರು.
ಇದನ್ನೂ ಓದಿ: ಮಳೆಗಾಲ ಬಂತೆಂದರೆ ಕೆರೆಯಂತಾಗುವ ಗ್ರಾಮ: ಸ್ಥಳೀಯರಿಗೆ ಗಂಜಿ ಕೇಂದ್ರಗಳೇ ಆಸರೆ! - Problem of Kachavi village