ರಾಯಚೂರು : ವಸತಿ ನಿಲಯದ ವಿದ್ಯಾರ್ಥಿನಿಯರು ಊಟ ಸೇವಿಸಿದ ನಂತರ ಅಸ್ವಸ್ಥಗೊಂಡಿರುವ ಘಟನೆ ರಾಯಚೂರಿನ ಅರಕೇರಾದಲ್ಲಿ ನಡೆದಿದೆ. ಜಿಲ್ಲೆಯ ಅರಕೇರಾ ಪಟ್ಟಣದಲ್ಲಿ ಪರಿಶಿಷ್ಟ ಪಂಗಡ(ಎಸ್‌ಟಿ) ಬಾಲಕಿಯರ ವಸತಿ ನಿಲಯದಲ್ಲಿ ಘಟನೆ ನಡೆದಿದೆ.
ನಿನ್ನೆ ರಾತ್ರಿ ಊಟ ಸೇವಿಸಿದ ವಿದ್ಯಾರ್ಥಿನಿಯರು ವಾಂತಿ-ಬೇದಿ ಮತ್ತು ತಲೆಸುತ್ತು ಅಂತ ಅಸ್ವಸ್ಥಗೊಂಡಿದ್ದಾರೆ. 45ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳನ್ನು ದಾಖಲು ಮಾಡಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೋಷಕರು, ನಿಲಯದ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಅರಕೇರಾ ಆಸ್ಪತ್ರೆಗೆ ರಾಯಚೂರು ಡಿಎಚ್ಒ ಡಾ. ಸುರೇಂದ್ರ ಬಾಬು ಭೇಟಿ ನೀಡಿ, ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. 40ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಹಾರದ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದೇವೆ. ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ. ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಬಿದ್ರೆ ರಿಮ್ಸ್ಗೆ ರವಾನೆ ಮಾಡುತ್ತೇವೆ. ಮಕ್ಕಳಿಗೆ ನಮ್ಮ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಎಲ್ಲಾ ಮಕ್ಕಳು ಬೇಗ ಗುಣಮುಖರಾಗುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ : ಪಾನಿಪೂರಿ ಸೇವಿಸಿ 19 ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು: ಅಂಗಡಿ ಬಿಟ್ಟು ಮಾರಾಟಗಾರ ಎಸ್ಕೇಪ್